ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಮೇ 2017, 6:50 IST
Last Updated 25 ಮೇ 2017, 6:50 IST

ರಾಯಚೂರು: ‘ಕಾಂಗ್ರೆಸ್‌ ಪಕ್ಷದ ಮುಖಂಡರನ್ನು ಕಡೆಗಣಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೂಡಲೇ ಬದಲಾವಣೆ ಮಾಡಬೇಕು. ದಲಿತ ನಾಯಕರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷ (ಕೆಪಿಸಿಸಿ) ಸದಸ್ಯ ಎಚ್‌.ಆರ್‌.ಶ್ರೀನಾಥ ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮುಂಬರುವ ಚುನಾವಣೆಯ ನೇತೃತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಡಬಾರದು. ಜಿ.ಪರಮೇಶ್ವರ್‌ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕು’ ಎಂದು ಅವರು ಹೇಳಿದರು.

‘ರಾಜ್ಯದಾದ್ಯಂತ ಕಾಂಗ್ರೆಸ್‌ ಪಕ್ಷದ ಮೂಲ ನಾಯಕರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲರೂ ಒಟ್ಟಾಗಿ ಶೀಘ್ರದಲ್ಲೇ ಸಭೆ ನಡೆಸುತ್ತೇವೆ. ಬಾಕಿ ಉಳಿದಿರುವ ಒಂದು ವರ್ಷವಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ಬೇರೆಯವರನ್ನು ನೇಮಿಸಬೇಕು ಎಂದು ಬೆಂಗಳೂರಿನಲ್ಲಿ ಒತ್ತಾಯಿಸುತ್ತೇವೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಲಸೆ ಬಂದವರಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದಾರೆ. ಇದರಿಂದ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ ನಾಯಕರು ಮೂಲೆಗುಂಪಾಗುತ್ತಿದ್ದಾರೆ. ಇಂತಹ ಬೆಳವಣಿಗೆಗಳಿಂದಾಗಿ ಕಾಂಗ್ರೆಸ್‌ ಪಕ್ಷಕ್ಕೆ ತುಂಬಾ ನಷ್ಟವಾಗುತ್ತಿದೆ. ಹಿರಿಯ ನಾಯಕರು ಕೂಡಾ ಪಕ್ಷ ತೊರೆಯುವ ವಾತಾವರಣ ನಿರ್ಮಾಣವಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ವರಿಷ್ಠರು ಕೂಡಲೇ ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ಹೇಳಿದರು.

‘ಮುಂದಿನ ಚುನಾವಣೆಯಲ್ಲಿ ಗಂಗಾವತಿಯಿಂದ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತಾರೆ. ಟಿಕೆಟ್‌ ಕೊಡುವುದು, ಬಿಡುವುದು ಮುಖ್ಯಮಂತ್ರಿಗೆ ಸಂಬಂಧಿಸಿದ ವಿಷಯವಲ್ಲ. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ನಾನು ಅನೇಕ ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವ ವಿಚಾರ ಮಾಡುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.