ADVERTISEMENT

ರಾಯಚೂರು ಜಿಲ್ಲೆಯಲ್ಲಿ ಹೆಚ್ಚಿದ ವಾಹನ ಸಾಂದ್ರತೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 6:21 IST
Last Updated 10 ಸೆಪ್ಟೆಂಬರ್ 2017, 6:21 IST
ರಾಯಚೂರು ನಗರದಲ್ಲಿ ಪ್ರತಿನಿತ್ಯ ಸಂಚರಿಸುವ ವಿವಿಧ ವಾಹನಗಳ ಒಂದು ನೋಟ
ರಾಯಚೂರು ನಗರದಲ್ಲಿ ಪ್ರತಿನಿತ್ಯ ಸಂಚರಿಸುವ ವಿವಿಧ ವಾಹನಗಳ ಒಂದು ನೋಟ   

ರಾಯಚೂರು: ವರ್ಷದಿಂದ ವರ್ಷಕ್ಕೆ ಜಿಲ್ಲೆಯ ರಸ್ತೆಗೆ ಹೊಸದಾಗಿ ಸೇರ್ಪಡೆಯಾಗುವ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಏರುಗತಿಯಲ್ಲಿ ಮುನ್ನಡೆದಿದೆ. ಮುಖ್ಯವಾಗಿ ಒಂದು ವರ್ಷದಲ್ಲಿ ಸುಮಾರು 25 ಸಾವಿರ ಹೊಸ ಬೈಕ್‌ಗಳು ಬರುತ್ತಿವೆ. ಅಟೊ ಸೇರಿದಂತೆ ಇನ್ನಿತರೆ ತ್ರಿಚಕ್ರ ವಾಹನಗಳು ಮತ್ತು ಕಾರುಗಳು ಮಾರಾಟ–ಖರೀದಿಯೂ ಹೆಚ್ಚಾಗಿದೆ. ವಾಣಿಜ್ಯ ಉದ್ದೇಶಿತ ಸರಕು ಸಾಗಣೆ ವಾಹನಗಳು, ಶಾಲಾ ಬಸ್‌ಗಳು, ಸರ್ಕಾರಿ ಬಸ್‌ಗಳ ನೋಂದಣಿಯಲ್ಲೂ ಹೆಚ್ಚಳ ದಾಖಲಾಗಿದೆ. ವಾಹನಗಳ ಹೆಚ್ಚಳವು ಆರ್ಥಿಕ ಅಭಿವೃದ್ಧಿಯ ಸಂಕೇತವಾಗಿದ್ದರೂ ವಾಯುಮಾಲಿನ್ಯ, ಶಬ್ದಮಾಲಿನ್ಯ ವೃದ್ಧಿಗೆ ಕಾರಣವಾಗಿವೆ.

ದ್ವಿಚಕ್ರ ವಾಹನದಿಂದ ಹಿಡಿದು ಭಾರಿ ಚಕ್ರಗಳಿರುವ ಲಾರಿಗಳವರೆಗೆ ಎಲ್ಲ ರೀತಿಯ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಲ್ಲಿ ನೋಂದಾಯಿಸುವುದು ಕಡ್ಡಾಯ. ಕೃಷಿಗೆ ಬಳಸುವ ರಾಶಿ ಯಂತ್ರ ಹಾಗೂ ಇನ್ನಿತರೆ ಯಂತ್ರೋಪಕರಣಗಳನ್ನು ಸಹ ನೋಂದಣಿ ಮಾಡಿಸಲಾಗುತ್ತದೆ. ಪ್ರತಿ ವಾಹನಕ್ಕೂ ಜೀವಿತಾವಧಿ ಶುಲ್ಕವನ್ನು ಆರ್‌ಟಿಒ ಕಚೇರಿ ಮೂಲಕ ಸರ್ಕಾರಕ್ಕೆ ಕಟ್ಟುವುದರಿಂದ ಜಿಲ್ಲೆಯಲ್ಲಿ ಈ ಶುಲ್ಕ ಪ್ರಮಾಣವು ಭಾರಿ ಹೆಚ್ಚಾಗಿದೆ.

2016–17ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ₹51.1 ಕೋಟಿ ಶುಲ್ಕ ಗುರಿ ಇದ್ದರೂ, ಗುರಿಮೀರಿ ₹51.32 ಕೋಟಿ ಶುಲ್ಕ ಸಂಗ್ರಹವಾಗಿತ್ತು. 2017–18 ನೇ ಸಾಲಿನಲ್ಲಿ ₹53.8 ಕೋಟಿ ಶುಲ್ಕ ಸಂಗ್ರಹಿಸುವ ಗುರಿಯನ್ನು ಸರ್ಕಾರವು ನಿಗದಿ ಮಾಡಿದೆ. 2017 ರ ಏಪ್ರಿಲ್‌ 1 ರಿಂದ ಅಗಸ್ಟ್‌ ಅಂತ್ಯದವರೆಗೂ ನಿಗದಿತ ವಾರ್ಷಿಕ ಗುರಿ ₹53.8 ಕೋಟಿ ಮೊತ್ತದಲ್ಲಿ ಈಗಾಗಲೇ ಶೇ 50 ಕ್ಕಿಂತಲೂ ಹೆಚ್ಚು ಶುಲ್ಕ ಸಂಗ್ರಹ ಆಗಿದೆ. ಐದು ತಿಂಗಳಲ್ಲಿ ₹27.85 ಕೋಟಿ ಶುಲ್ಕ ಸಂಗ್ರಹಿಸಲಾಗಿದೆ. ವಾಹನಗಳ ನೋಂದಣಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಎನ್ನುವುದಕ್ಕೆ ಈ ಶುಲ್ಕ ಸಂಗ್ರಹವು ಸಾಂಕೇತಿಕ ಮನವರಿಕೆ ಮಾಡುತ್ತದೆ.

ADVERTISEMENT

ಸೌಕರ್ಯಗಳ ಕೊರತೆ: ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಾಹನಗಳ ದಟ್ಟಣೆಯು ನಿತ್ಯ ಜೀವನಕ್ಕೆ ತಾಪತ್ರಯ ತಂದೊಡ್ಡಿದೆ. ಸಂಚಾರ ನಿಯಂತ್ರಣಕ್ಕಾಗಿ ಪೊಲೀಸ್‌ ಇಲಾಖೆಯು ಸಾಕಷ್ಟು ಹೊಸ ಕ್ರಮಗಳನ್ನು ಅನುಸರಿಸಿದೆ. ಸಿಗ್ನಲ್‌ ದೀಪಗಳು, ರೋಡ್‌ ಬ್ರೇಕರ್ಸ್‌, ದ್ವಿಪಥ ರಸ್ತೆಗಳು, ತಿರುವುಗಳ ನಿರ್ಮಾಣ, ವೇಗ ನಿಯಂತ್ರಣ ಸೇರಿದಂತೆ ಅನೇಕ ನಿಯಮಗಳನ್ನು ವಾಹನ ಸವಾರರಿಗಾಗಿ ರೂಢಿಗೆ ತರಲಾಗಿದೆ. ಆದರೂ ಅಪಘಾತ ಘಟನೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೆ ಇವೆ. ವಾಹನಗಳ ಸಂಖ್ಯೆಗೆ ಅನುಗುಣವಾಗಿ ರಸ್ತೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ಅಭಿವೃದ್ಧಿ ಸಾಕಾಗುತ್ತಿಲ್ಲ.

ಜಿಲ್ಲಾ ಕೇಂದ್ರ ರಾಯಚೂರಿನಲ್ಲಿ ವಾಹನಗಳ ಸಂಚಾರವು ಸಂಕಷ್ಟವಾಗಿದೆ. ಬಹುತೇಕ ರಸ್ತೆಗಳನ್ನು ಅಗೆದು ಹಾಕಲಾಗಿದೆ. ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿ ಇರುವುದರಿಂದ ಅತಿಹೆಚ್ಚಿನ ವಾಹನಗಳು ಸಾಮಾನ್ಯ ಜನರಿಗೆ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿವೆ. ವಾಹನ ಹೊಂದಿದ ಮಾಲೀಕರು ಕೂಡಾ ವಾಹನಗಳ ಹೆಚ್ಚಳದ ಸಮಸ್ಯೆಯನ್ನು ರಸ್ತೆಗಳಲ್ಲಿ ಎದುರಿಸುತ್ತಿದ್ದಾರೆ. ವಾಹನಗಳ ದಟ್ಟಣೆಯಿಂದ ಎಲ್ಲಿಯೂ ನಿಗದಿತ ವೇಳೆಗೆ ತಲುಪುವುದು ಕಷ್ಟಸಾಧ್ಯವಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಹೊಸದಾಗಿ ಸೇರ್ಪಡೆಯಾದ ವಾಹನ ವಿವರ
ವಾಹನಗಳು 2015–16 2016–17
ಬೈಕ್‌ಗಳು 22,567 24,245
ಕಾರುಗಳು 1,472 1,567
ಟ್ರ್ಯಾಕ್ಟರ್‌ 1,612 1,942
ವಾಣಿಜ್ಯ ಸಾರಿಗೆ 1,494 1,445
ಒಟ್ಟು 27,1,45 29,199

ಜಿಲ್ಲೆಯ ಒಟ್ಟು ವಾಹನಗಳ ಸಂಖ್ಯಾ ವಿವರ
(ಏಪ್ರಿಲ್‌ 1, 2002 ರಿಂದ ಮಾರ್ಚ್‌ 31, 2017)
* ಮೋಟರ್‌ ಸೈಕಲ್‌ 2,25,335
* ಕಾರುಗಳು 2,00,27
* ವಾಣಿಜ್ಯ ವಾಹನಗಳು 24,816
* ಟ್ರ್ಯಾಕ್ಟರ್‌ 26,688
* ಪ್ರಸಕ್ತ ಸಾಲಿನ ವಾಹನಗಳು 702
* ಹೊರ ರಾಜ್ಯ, ಹೊರ ಜಿಲ್ಲೆಯ ವಾಹನಗಳು 23,287
ಒಟ್ಟು ವಾಹನಗಳು 3,20,855

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.