ADVERTISEMENT

ವಿದ್ಯಾರ್ಥಿಗಳ ಬಂಧನ; ಬಿಡುಗಡೆ

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಕೊಠಡಿಗೆ ಬೀಗ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 7:11 IST
Last Updated 23 ಮಾರ್ಚ್ 2017, 7:11 IST

ರಾಯಚೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಕೊಠಡಿಗೆ ಬೀಗ ಹಾಕಿ ಬುಧವಾರ ಪ್ರತಿಭಟನೆ ನಡೆಸಿದ ಕೃಷಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ಆನಂತರ ಬಿಡುಗಡೆ ಮಾಡಿದರು.

‘ಪ್ರತಿಭಟನೆಯಲ್ಲಿ 90 ವಿದ್ಯಾರ್ಥಿನಿಯರು ಸೇರಿ ಸುಮಾರು 200 ಜನರಿದ್ದರು. ಪೊಲೀಸರು ನಮ್ಮನ್ನೆಲ್ಲ ಹೊರವಲಯ ಗ್ರಾಮೀಣ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನ ಊಟಕ್ಕೆ ವ್ಯವಸ್ಥೆ ಇತ್ತು. ಯಾವುದೇ ತೊಂದರೆ ಕೊಟ್ಟಿಲ್ಲ. ಸಂಜೆ 5 ಗಂಟೆಗೆ ಕ್ಯಾಂಪಸ್‌ಗೆ ಮರಳಿ ಬಿಟ್ಟಿದ್ದಾರೆ’ ಎಂದು ಪ್ರತಿಭಟನಾಕಾರರು ಹೇಳಿದರು.

‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯದ ತಲಾ ಮೂವರು ವಿದ್ಯಾರ್ಥಿ ನಾಯಕರು ಹಾಗೂ ಕೃಷಿ ವಿಶ್ವವಿದ್ಯಾಲಯದ ಮೂವರು ಉನ್ನತ ವ್ಯಕ್ತಿಗಳ ಮಧ್ಯೆ ಮಾತುಕತೆಗೆ ಎರಡು ದಿನದಲ್ಲಿ ಏರ್ಪಾಡು ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭರವಸೆ ನೀಡಿದ್ದಾರೆ. ಹೀಗಾಗಿ ಎರಡು ದಿನ ಕಾದು, ಬೇಡಿಕೆಗೆ ಸ್ಪಂದಿಸದಿದ್ದರೆ ಮತ್ತೆ ಹೋರಾಟ ಆರಂಭಿಸಲಾಗುವುದು’ ಎಂದು ವಿದ್ಯಾರ್ಥಿಗಳು ಹೇಳಿದರು.

‘ರಕ್ಷಣೆ ಕೋರಿ ಕುಲಪತಿ ಕರೆ ಮಾಡಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳನ್ನು ಬಂಧಿಸಿ ಕರೆದೊಯ್ಯಲಾಯಿತು. ಬೇಡಿಕೆಗಳ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಸೂಕ್ತ ತಿಳಿವಳಿಕೆ ನೀಡಿ ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನಸಿಂಗ್‌ ರಾಠೋಡ ‘ಪ್ರಜಾವಾಣಿ’ಗೆ ತಿಳಿಸಿದರು.

ಕೃಷಿ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕೃಷಿ ಎಂಜಿನಿಯರಿಂಗ್‌ ವಿದ್ಯಾರ್ಹತೆ ನಿಗದಿಪಡಿಸಿ ಸರ್ಕಾರವು ಹೊಸದಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿ ಕೃಷಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟವು ಬುಧವಾರ 36ನೇ
ದಿನಕ್ಕೆ ಕಾಲಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.