ADVERTISEMENT

ವಿಮೆಯ ಮೇಲಿನ ಜಿಎಸ್‌ಟಿ ಜಾರಿ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 7:22 IST
Last Updated 13 ಸೆಪ್ಟೆಂಬರ್ 2017, 7:22 IST

ರಾಯಚೂರು: ‘ವಿಮಾ ಕಂತುಗಳ ಮೇಲೆ ಕೇಂದ್ರ ಸರ್ಕಾರವು ವಿಧಿಸಿರುವ ಶೇ 18 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತುಂಬಾ ಹೊರೆಯಾಗುತ್ತಿದ್ದು, ಕೂಡಲೇ ಇದನ್ನು ತೆಗೆದುಹಾಕಬೇಕು’ ಎಂದು ವಿಮಾ ನೌಕರರ ಸಂಘವು ಆಗ್ರಹಿಸಿತು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ರವಿ, ‘ವಿಮಾ ಮೇಲಿನ ತೆರಿಗೆ ರದ್ದುಗೊಳಿಸುವಂತೆ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ಕೇಂದ್ರದ ಹಣಕಾಸು ಸಚಿವರಿಗೆ ಮತ್ತು ರಾಜ್ಯದ ಜಿಎಸ್‌ಟಿ ಸಮಿತಿ ಸದಸ್ಯರಿಗೆ ಕಳುಹಿಸಲಾಗುವುದು’ ಎಂದು ತಿಳಿಸಿದರು.

‘ಜಿಎಸ್‌ಟಿ ಅಸಂಘಟಿತ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಂಘಟಿತರಿಗೂ ಹೊರೆಯಾಗಿ ಉಳಿತಾಯ ಪ್ರವೃತ್ತಿ ಕ್ಷೀಣಿಸುತ್ತಿದೆ’ ಎಂದು ಹೇಳಿದರು. ‘ಜನಸಾಮಾನ್ಯರು ಕೂಡಾ ವಿಮೆಗಳನ್ನು ಮಾಡಿಸುತ್ತಿದ್ದರು. ಈಗ ತೆರಿಗೆ ಭಾರ ವಾಗಿರುವು ದರಿಂದ ಉಳಿತಾಯಕ್ಕೆ ಮನಸ್ಸು ಮಾಡುತ್ತಿಲ್ಲ. 2014 ಕ್ಕಿಂತ ಮೊದಲು ವಿಮಾ ಕಂತುಗಳ ಮೇಲೆ ಯಾವುದೇ ತೆರಿಗೆ ವಿಧಿಸುತ್ತಿರಲಿಲ್ಲ’ ಎಂದು ಅವರು ತಿಳಿಸಿದರು.

ADVERTISEMENT

‘2016–17ನೇ ಸಾಲಿನಲ್ಲಿ ಶೇ 15 ಸೇವಾ ತೆರಿಗೆ ಹಾಕಲಾಗಿತ್ತು. ಇದೀಗ ಶೇ 18 ರಷ್ಟು ತೆರಿಗೆ ಹಾಕಿದರೆ, ಉಳಿತಾಯ ಮತ್ತು ಲಾಭದ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ’ ಎಂದು ಅವರು ವಿವರಿಸಿದರು.

ಒಟ್ಟಾರೆ ಸರಕು ಮತ್ತು ಸೇವಾ ತೆರಿಗೆ ಹೊರೆಯಾಗಿದ್ದು ಇದನ್ನು ಕೂಡಲೇ ತೆಗೆದು ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು. .
ಸಂಘದ ಪದಾಧಿಕಾರಿಗಳಾದ ಎಂ.ಶರಣೇಗೌಡ, ವಿ.ಎಚ್‌.ರಾಘವೇಂದ್ರ, ವಿರೇಶ, ಎ.ಶ್ರೀಧರ, ಎಸ್‌. ಜಗನ್ನಾಥ ಇದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.