ADVERTISEMENT

ವಿವಿಧ ಬೇಡಿಕೆ: ಮೂರು ಎಂಜಿನಿಯರಿಂಗ್‌ ಕಾಲೇಜುಗಳು ಬಂದ್‌

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 6:57 IST
Last Updated 2 ಸೆಪ್ಟೆಂಬರ್ 2017, 6:57 IST

ರಾಯಚೂರು: ಎಂಜಿನಿಯರಿಂಗ್‌ 2010 ಸ್ಕೀಮ್ ವಿದ್ಯಾರ್ಥಿಗಳಿಗೆ ಇಯರ್ ಬ್ಯಾಕ್ ಮತ್ತು ಕ್ರಿಟಿಕಲ್‌ ಇಯರ್ ಬ್ಯಾಕ್‌ ತೆಗೆದು ಪ್ರಸ್ತುತ ಸಿಬಿಸಿಎಸ್‌ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲು ಒತ್ತಾಯಿಸಿ ಆಲ್‌ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್‌ ಆರ್ಗ್‌ನೈಜೆಷನ್ (ಎಐಡಿಎಸ್‌ಒ) ಜಿಲ್ಲಾ ಘಟಕದ ನೇತೃತ್ವದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಶುಕ್ರವಾರ ಕಾಲೇಜುಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ನಗರದ ಚಂದ್ರಮೌಳೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ನಡೆದ ಮೆರವಣಿಗೆಯಲ್ಲಿ ನವೋದಯ ಎಂಜಿನಿಯರಿಂಗ್‌ ಕಾಲೇಜು, ಎಸ್.ಎಲ್.ಎನ್‌ ಎಂಜಿನಿಯರಿಂಗ್‌ ಕಾಲೇಜು ಹಾಗೂ ಸರ್ಕಾರಿಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಕಚೇರಿ ಮೂಲಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗೆ ಮನವಿ ಸಲ್ಲಿಸಲಾಯಿತು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಮಹೇಶ್‌ ಚೀಕಲ್‌ಪರ್ವಿ ಮಾತನಾಡಿ, ಡಿಸೆಂಬರ್ 2016ರಲ್ಲಿ ನಡೆದ ಎಂಜಿನಿಯರಿಂಗ್ ಪರೀಕ್ಷೆಗಳ ಫಲಿತಾಂಶವನ್ನು ವಿಟಿಯು ಸಾಕಷ್ಟು ವಿಳಂಬವಾಗಿ ಪ್ರಕಟಿಸಿದ್ದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ನಿರ್ಮಾಣವಾಯಿತು. ಸಾವಿರಾರು ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು.

ADVERTISEMENT

ಆದರ ಫಲಿತಾಂಶ ಮತ್ತು ಮರುಮೌಲ್ಯಮಾಪನದ ಫಲಿತಾಂಶ ಪರೀಕ್ಷೆಯ ಹಿಂದಿನ ದಿನ ರಾತ್ರಿ ಪ್ರಕಟಗೊಂಡಿತ್ತು. ಇದರೊಂದಿಗೆ, ಕ್ರಾಷ್ ಸೆಮಿಸ್ಟರ್‌ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳಂತೂ ಕೇವಲ 50 ದಿನಗಳ ಅಂತರದಲ್ಲಿ 16 ರಿಂದ 20 ವಿಷಯಗಳ ಪರೀಕ್ಷೆ ಬರೆಯುವಂತಾಯಿತು. ಇನ್ನೂ ಕೆಲವು ವಿದ್ಯಾರ್ಥಿಗಳು ಒಂದೇ ದಿನ ಎರಡು ಪರೀಕ್ಷೆಗಳನ್ನು ಎದುರಿಸಬೇಕಾದ ಪರಿಸ್ಥಿತಿಯೂ ಇತ್ತು ಎಂದು ಹೇಳಿದರು.

‘ಪರೀಕ್ಷೆ ಫಲಿತಾಂಶದ ಪ್ರಕಟಣೆಯಲ್ಲಿ ಈ ಅನಿಶ್ಚಿತತೆ ಇದ್ದುದರಿಂದ ದಿನದಿಂದ ದಿನಕ್ಕೆ ಆತಂಕ ಹೆಚ್ಚುವಂತೆ ಮಾಡಿತು. ಇದು ಮತ್ತಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದಕ್ಕೆ ಕಾರಣವಾಯಿತು. ಇದರ ಸಂಪೂರ್ಣ ಹೊಣೆ ವಿ.ಟಿ.ಯು ಹೊತ್ತುಕೊಂಡು ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಅಗ್ರಹಿಸಿದರು.

ಎಐಡಿವೈಒ ಕಾರ್ಯದರ್ಶಿ ಚನ್ನಬಸವ ಜಾನೇಕಲ್, ಎಐಎಂಎಸ್ಎಸ್ ಚೇತನಾ ಬನಾರೆ ಮಾತನಾಡಿದರು. ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಪ್ರಮೋದ್‌ಕುಮಾರ ಜಿ. ಸದಸ್ಯರಾದ, ಉದಯ್ ಶಂಕರ್, ವೇಣೇಶ್, ಹನುಮಂತ ಹಾಗೂ ಕಾಲೇಜು ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.