ADVERTISEMENT

‘ವಿಸ್ಮಯಕಾರಿ ಕೀಟ ಪ್ರಪಂಚ’ ಪ್ರದರ್ಶನ

ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ; ವೀಕ್ಷಣೆಗೆ ವಿದ್ಯಾರ್ಥಿಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 6:11 IST
Last Updated 18 ಫೆಬ್ರುವರಿ 2017, 6:11 IST
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ‘ವಿಸ್ಮಯಕಾರಿ ಕೀಟ ಪ್ರಪಂಚ’ ಪ್ರದರ್ಶನ ವೀಕ್ಷಣೆ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿಗಳು
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ‘ವಿಸ್ಮಯಕಾರಿ ಕೀಟ ಪ್ರಪಂಚ’ ಪ್ರದರ್ಶನ ವೀಕ್ಷಣೆ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿಗಳು   
ರಾಯಚೂರು: ಕೃಷಿ ವಿಶ್ವವಿದ್ಯಾಲಯದ ಆಡಳಿತ ಭವನದ ನೆಲಮಾಳಿಗೆಯಲ್ಲಿ ಕೀಟಶಾಸ್ತ್ರ ವಿಭಾಗದ ಆಯೋಜಿಸಿರುವ ಮೂರು ದಿನಗಳ ಕಾಲದ ‘ವಿಸ್ಮಯಕಾರಿ ಕೀಟ ಪ್ರಪಂಚ’ ಪ್ರದರ್ಶನ ವೀಕ್ಷಣೆಗೆ ಮೊದಲ ದಿನವಾದ ಶುಕ್ರವಾರ ವಿದ್ಯಾರ್ಥಿಗಳ ಮಹಾಪೂರ ಹರಿದು ಬಂತು. ವಿವಿಧ ಶಾಲೆಗಳ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರದರ್ಶನವನ್ನು ವೀಕ್ಷಣೆ ಮಾಡಿದರು.
 
30 ಪ್ರಭೇದಗಳ ಕೀಟಗಳ ಮಾದರಿ ಜೊತೆಗೆ ನಾಲ್ಕೈದು ಜಾತಿಯ ಜೀವಂತ ಪಂತಗಗಳು, ದುಂಬಿಗಳು ಪ್ರದರ್ಶನದಲ್ಲಿದ್ದವು. ಪ್ರದರ್ಶನವು  ಕೀಟಗಳ ವೈವಿಧ್ಯ, ಮನುಷ್ಯ ಮತ್ತು ಪ್ರಾಣಿಗಳಿಗೆ ಹಾನಿ ಮಾಡುವ ಕೀಟಗಳು, ಕೀಟಗಳ ಸುಂದರಮುಖ, ಕೃಷಿಯಲ್ಲಿ ಕೀಟಗಳ ಪಾತ್ರ ಹೀಗೆ ಆರು ವಿಭಾಗಗಳಲ್ಲಿ (ಥೀಮ್‌) ತೆರೆದುಕೊಂಡಿತ್ತು. 
 
ಅರಣ್ಯಗಳಲ್ಲಿನ ಕೀಟ ಅದರಲ್ಲೂ ಮಳೆಕಾಡಿನಲ್ಲಿರುವ ಸಗಣಿ ಹುಳ, ಜೀರುಂಡೆ, ಎಲೆ ಮತ್ತು ಕಡ್ಡಿಕೀಟಗಳ ಮಾದರಿಗಳು ಇಲ್ಲಿದ್ದವು. ಮರುಭೂಮಿಯಲ್ಲಿ ಕೀಟಗಳ ಮಾದರಿಯಲ್ಲಿ ಮಿಡತೆ, ಕರಿದುಂಬಿಗಳು ಗಮನಸೆಳೆದವು.
 
ಗೆದ್ದಲು, ಇರುವೆ, ಮಿಡತೆಗಳ ಮಾದರಿ ಬಗ್ಗೆ ವಿದ್ಯಾರ್ಥಿಗಳು  ಮಾಹಿತಿ ಪಡೆದರು. ಸೊಳ್ಳೆ ಪರೆದೆಒಳಗೆ ಇದ್ದ ಚಿಟ್ಟೆಗಳು, ಸುಂದರ ಪಂತಗಳ ಡಿಸ್‌ಪ್ಲೇ ಬೋರ್ಡ್‌ಗಳ ಮುಂದೆ ಸೆಲ್ಫಿ ತೆಗೆದುಕೊಂಡ ಕಾಲೇಜು ವಿದ್ಯಾರ್ಥಿಗಳು, ನಾಗರಿಕರು ಸಂಭ್ರಮಿಸಿದರು.
 
ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯಕ್ಕೆ ಎರವಾಗುವ ಸೊಳ್ಳೆ, ನೊಣ, ತಿಗಣೆ, ಜಿರಲೆಗಳ ಮಾದರಿಗಳು, ಜೊತೆಗೆ ಉಪಯೋಗಕಾರಿಯಾದ ಜೇನುನೊಣ, ರೇಷ್ಮೆ, ಅರಗು, ಎರೆಹುಳ ಇಲ್ಲಿದ್ದವು. ಕೃಷಿಗೆ ಉಪಕಾರಿಯಾದ ಮತ್ತು ಉದ್ರವಕಾರಿಯಾದ ಹಲ ಬಗೆಯ ಪಂತಗಗಳು, ಬೆಳೆಯನ್ನು ಭಕ್ಷಿಸುವ ಮಿಡತೆ, ಹತ್ತಿ, ತೊಗರಿಯಲ್ಲಿ ಕಾಣಿಸಿಕೊಳ್ಳುವ ಕಾಯಿಕೊರಕ ಹುಳಗಳ ಮಾದರಿಗಳು ಪ್ರದರ್ಶನದಲ್ಲಿದ್ದವು.
 
ಈ ಕೀಟ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಭುರಾಜ್‌ ‘ಕೀಟಗಳಲ್ಲಿ ಶೇ 40ರಷ್ಟು ದುಂಬಿಗಳಿವೆ. ಪಂತಗಗಳು ಮತ್ತು ಚಿಟ್ಟೆ ಪ್ರಭೇದಗಳು ಶೇ 25, ನೊಣದ ಜಾತಿಗೆ ಸೇರಿದ ಶೇ 20 ಕೀಟಗಳು ಇವೆ. ಇವುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಈ ಪ್ರದರ್ಶನದಲ್ಲಿ ಮಾದರಿಗಳ ಮೂಲಕ, ವಿಡಿಯೋ, ಛಾಯಾಚಿತ್ರಗಳ ಮೂಲಕ ತೋರಿಸಲಾಗುತ್ತಿದೆ’ ಎಂದರು.
 
‘8ರಿಂದ 10 ಶಾಲೆಗಳಿಂದ 50ಕ್ಕೂ ಹೆಚ್ಚು ಮಾದರಿಗಳು ಬಂದಿವೆ. ಇವುಗಳನ್ನು ಪರಿಶೀಲಿಸಿ ಉತ್ತಮ ಮಾದರಿಗಳಿಗೆ ಬಹುಮಾನ ನೀಡುತ್ತೇವೆ. ಮೊದಲ ದಿನ ಪ್ರದರ್ಶನಕ್ಕೆ ವಿದ್ಯಾರ್ಥಿಗಳು ಹಿಂಡುಹಿಂಡಾಗಿ ಬರುತ್ತಿದ್ದಾರೆ. ನಾವು 50–60 ಶಾಲೆಗಳಿಗೆ ಈ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದ್ದೇವೆ. ಶನಿವಾರ ಮತ್ತು ಭಾನುವಾರ ಮಕ್ಕಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಹೇಳಿದರು.
 
ಗಮನ ಸೆಳೆದ ಬೃಹತ್‌ ಕೀಟ ಮಾದರಿ
 
ಕೀಟ ಪ್ರದರ್ಶನದಲ್ಲಿ ದೊಡ್ಡ ಗಾತ್ರದಲ್ಲಿ ತಲೆಎತ್ತಿ ನಿಂತ ಐದಾರು ಕೀಟಗಳು ಗಮನಸೆಳೆದವು. ಇದನ್ನು ಕಲಾವಿದ ಪ್ರಕಾಶ ಸಾಗರ ಮಿರ್ಜಾಪುರ ತಯಾರು ಮಾಡಿದ್ದರು. ಜೇನುನೊಣ, ತಿಂಗಣೆ, ಡ್ರ್ಯಾಗನ್‌ ಫ್ಲೈ, ನೊಣ, ಇರುವೆಗಳು ಥರ್ಮೋಕೋಲ್‌ನಿಂದ 3X6 ಅಳತೆಯಲ್ಲಿ ನಿರ್ಮಾಣಗೊಂಡಿದ್ದವು. ಇವುಗಳಲ್ಲಿ ಡ್ರ್ಯಾಗನ್‌ ಫೈ ಹೆಚ್ಚಿನ ಜನರ ಗಮನ ಳೆಯಿತು.

‘ಈ ಮಾದರಿಗಳನ್ನು ಮಾಡಲು 12 ದಿನಗಳು ಹಿಡಿಯತು. ₹30 ಸಾವಿರ ಖರ್ಚಾಗಿದ್ದು, ವಿಶ್ವವಿದ್ಯಾಲಯ ಅದನ್ನು ಭರಿಸಿದೆ. ಥರ್ಮೋಕೋಲ್‌, ಸ್ಪ್ರೈರ್‌ ಪೇಯಂಟ್‌, ವೈರ್‌ ತುಂಡಗಳು, ಬಿದಿರುಗಳನ್ನು ಬಳಕೆ ಮಾಡಲಾಗಿದೆ’ ಎಂದು ಪ್ರಕಾಶ ತಿಳಿಸಿದರು.
 
* ಕೀಟ ಪ್ರದರ್ಶನ ಚೆನ್ನಾಗಿದೆ. ಮಾಹಿತಿ ಪೂರ್ಣವಾಗಿದೆ. ಮಕ್ಕಳು ಶಾಲೆಯಲ್ಲಿ ಪಠ್ಯದಲ್ಲಿ ಓದಿದ್ದನ್ನು ಇಲ್ಲಿ ನೋಡಿ ತಿಳಿದುಕೊಂಡರು.
- ಜಯಶ್ರೀ, ಶ್ರೀಚೈತನ್ಯ ಟೆಕ್ನೊ ಶಾಲೆ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.