ADVERTISEMENT

ಸಂಚಾರ ಸಂಕಷ್ಟಕ್ಕೀಡು ಮಾಡಿದ ರಸ್ತೆ

ನಾಗರಾಜ ಚಿನಗುಂಡಿ
Published 24 ಏಪ್ರಿಲ್ 2017, 6:19 IST
Last Updated 24 ಏಪ್ರಿಲ್ 2017, 6:19 IST
ಎನ್‌ಎಚ್ 167: : ಕರ್ನಾಟಕದ ಹಗರಿಯಿಂದ ತೆಲಂಗಾಣದ ಜಡಚರ್ಲಾವರೆಗೂ ಇರುವ ಹೆದ್ದಾರಿ; ಸುಗಮ ಸಂಚಾರಕ್ಕೆ ಸಮಸ್ಯೆ
ಎನ್‌ಎಚ್ 167: : ಕರ್ನಾಟಕದ ಹಗರಿಯಿಂದ ತೆಲಂಗಾಣದ ಜಡಚರ್ಲಾವರೆಗೂ ಇರುವ ಹೆದ್ದಾರಿ; ಸುಗಮ ಸಂಚಾರಕ್ಕೆ ಸಮಸ್ಯೆ   

ರಾಯಚೂರು: ನಗರದ ಸ್ಟೇಷನ್ ಮಾರ್ಗದ ರಾಮಮಂದಿರ ಬಳಿ ಹೆದ್ದಾರಿಯಲ್ಲಿ ನಿರ್ಮಾಣವಾದ ತಗ್ಗುಗುಂಡಿ ಮುಚ್ಚುವುದಕ್ಕೆ ನಗರಸಭೆ ಸಿಬ್ಬಂದಿ ಪ್ರತಿ ವಾರ ಪ್ರಯತ್ನಿಸುತ್ತಿದ್ದರೂ ಅದು ಮತ್ತೆ ಮತ್ತೆ ತೆರೆದುಕೊಳ್ಳುತ್ತಿದೆ!

ಸಮಸ್ಯೆಯ ಆಳ ಹೆಚ್ಚಾಗುತ್ತಲೇ ಇದೆ. ಪರಿಹಾರ ಮಾತ್ರ ಬಕಾಸುರನ ಬಾಯಿಗೆ ಅರೆಕಾಸಿನ ಮಜ್ಜಿಗೆ ಸುರಿದಂತೆ ಆಗುತ್ತಿದೆ. ತಗ್ಗು ಭರ್ತಿಗಾಗಿ ಕಟ್ಟಡದ ಅವಶೇಷಗಳನ್ನು ತಂದು ಸುರಿಯುತ್ತಾರೆ. ರಂಗೋಲಿ ಮರಳು ತುಂಬಿಸಲಾಗುತ್ತದೆ. ಕೆಲವೊಮ್ಮೆ ಕಿರಿದಾದ ಕಲ್ಲುಗಳನ್ನು ಹಾಕಿದರೂ ನಿಲ್ಲುವುದಿಲ್ಲ. ಒಂದೇ ವಾರದಲ್ಲಿ ಮತ್ತೆ ತಗ್ಗು ಕಾಣಿಸುತ್ತದೆ. ತಗ್ಗು ನಿರ್ಮಾಣಕ್ಕೆ ಕಾರಣವಾಗಿರುವ ಮೂಲ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಿಲ್ಲ. ಹೀಗಾಗಿ ಸಮಸ್ಯೆ ಹಲವು ವರ್ಷಗಳಿಂದ ಜೀವಂತವಾಗಿದೆ.

ಈ ಹೆದ್ದಾರಿ ಅಡಿಯಲ್ಲಿ ನೀರಿನ ಕೊಳವೆಗಳನ್ನು ಅಳವಡಿಸಲಾಗಿದೆ. ಭೂಮಿಯಲ್ಲಿ ಕೊಳವೆ ಒಡೆದು ರಸ್ತೆಯ ಮೇಲೆ ನೀರು ಜಿನುಗುತ್ತದೆ. ಕ್ರಮೇಣ ರಾಡಿ ನಿರ್ಮಿಸುತ್ತದೆ. ಆ ರಾಡಿಯು ವಾಹನಗಳ ಚಕ್ರಗಳಿಗೆ ತಗುಲಿಕೊಂಡು ಹೋಗುತ್ತದೆ. ಹೀಗಾಗಿ ತಗ್ಗು ಮುಚ್ಚುವುದಕ್ಕೆ ಮಾಡಿದ ಪ್ರಯತ್ನವೆಲ್ಲವೂ ವ್ಯರ್ಥವಾಗುತ್ತಲೇ ಇದೆ. ಸಮಸ್ಯೆ ಶಾಶ್ವತ, ಪರಿಹಾರ ಪುನರಾರ್ತಿತವಾಗುತ್ತಿದೆ. ಈ ರಸ್ತೆಯ ನಿರ್ವಹಣೆ ಯಾರು ಮಾಡಬೇಕು ಎನ್ನುವ ಪ್ರಶ್ನೆ ಅಧಿಕಾರಿಗಳಲ್ಲಿ ಇರುವುದರಿಂದ ಶಾಶ್ವತ ಪರಿಹಾರ ಇಂದಿಗೂ ಅನುಷ್ಠಾನವಾಗುತ್ತಿಲ್ಲ.

ADVERTISEMENT

ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ರಸ್ತೆ ನಿರ್ಮಾಣ ಮತ್ತು ನಿರ್ವಹಣೆ ಎರಡೂ ಜವಾಬ್ದಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾಡುತ್ತದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಇಲ್ಲಿಯವರೆಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ರಸ್ತೆ ದುರಸ್ತಿಗಾಗಿ ಯಾವುದೇ ಕ್ರಮವನ್ನೂ ವಹಿಸಿಲ್ಲ.

**

ಹೆದ್ದಾರಿಯಲ್ಲಿ ವಾಹನ ದಟ್ಟಣೆ: ರಸ್ತೆ ದಾಟುವುದಕ್ಕೂ ಜನರಿಗೆ ಸಂಕಷ್ಟ

ರಾಮಮಂದಿರ ಎದುರೇ ಈ ತಗ್ಗು ಇದೆ. ವಾರಕ್ಕೊಮ್ಮೆ ಒಂದು ಟ್ರ್ಯಾಕ್ಟರ್ ಮಣ್ಣು ಸುರಿದು ಗಟ್ಟಿ ಮಾಡಿ ಹೋಗುತ್ತಾರೆ. ಒಮ್ಮೊಮ್ಮೆ ಒಂದು ಅಡಿಗೂ ಹೆಚ್ಚು ಆಳದ ತಗ್ಗು ನಿರ್ಮಾಣವಾಗುತ್ತದೆ.

ಈ ರಸ್ತೆ ತಗ್ಗಿನ ಆಸುಪಾಸು ಜನದಟ್ಟಣೆಯ ಕೇಂದ್ರಗಳಿವೆ. ಪಕ್ಕದಲ್ಲಿರುವ ರಾಮಮಂದಿರ, ತರಕಾರಿ ಅಂಗಡಿ ಹಾಗೂ ಪೆಟ್ರೊಲ್ ಬಂಕ್‌ನತ್ತ ವಾಹನಗಳು ಮತ್ತು ಜನರು ಓಡಾಡುತ್ತಾರೆ. ಈ ಜಾಗದಲ್ಲೆ ವಾಹನಗಳನ್ನು ತಿರುಗಿಸಿಕೊಳ್ಳುವುದಕ್ಕೂ ರಸ್ತೆ ವಿಭಜಕದ ಅಂತರ ಬಿಡಲಾಗಿದೆ.
ಈ ತಗ್ಗುಗುಂಡಿ ಕಾರಣದಿಂದ ವಾಹನದಟ್ಟಣೆ ಕಾಣುತ್ತದೆ. ವಾಹನಗಳು ಬೇಗನೆ ಸಂಚರಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ರಸ್ತೆ ದಾಟುವುದಕ್ಕೆ ಜನರು ಕಷ್ಟ ಅನುಭವಿಸುತ್ತಾರೆ. ಪಾದಚಾರಿಗಳು ಬಹಳ ಹೊತ್ತು ಇಲ್ಲಿ ಕಾದು ನಿಲ್ಲುವಂತಾಗಿದೆ.

**

ನಮ್ಮದಲ್ಲ...

‘ಸ್ಟೇಷನ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ದಿ ಮಾಡಲಾಗುತ್ತಿದೆ. ಅದು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ವ್ಯಾಪ್ತಿಗೆ ಹೋಗಿದೆ. ಹೀಗಾಗಿ ರಸ್ತೆ ನಿರ್ವಹಣೆಯನ್ನು ಅವರೇ ಮಾಡಿಕೊಳ್ಳಬೇಕು. ತಗ್ಗುಗುಂಡಿಗಳಿಂದ ಜನರಿಗೆ ತೊಂದರೆ ಆಗುತ್ತಿರುವುದನ್ನು ತಪ್ಪಿಸಲು ನಗರಸಭೆಯಿಂದ ಆಗಾಗ ಮುರುಮ್ ಹಾಕಿಸುತ್ತಿದ್ದೇವೆ’ ಎಂದು ನಗರಸಭೆ ಪೌರಾಯುಕ್ತ ಕೆ.ರಾಮಲಿಂಗಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

**

ಸ್ಪಂದನೆ ಇಲ್ಲ...

‘ಮೊದಲು ನೀರಿನ ಪೈಪ್ ಸರಿಪಡಿಸಿ ರಸ್ತೆ ದುರಸ್ತಿ ಮಾಡಿಸಿದರೆ ಸಮಸ್ಯೆ ಮುಗಿದು ಹೋಗುತ್ತದೆ. ಇದಕ್ಕಾಗಿ ಅನೇಕ ಸಂಘಟನೆಗಳು ಪ್ರತಿಭಟನೆಯನ್ನೂ ಮಾಡಿವೆ. ಯಾವುದಕ್ಕೂ ಸ್ಪಂದನೆ ಸಿಗದ ಕಾರಣದಿಂದ ಎಲ್ಲರೂ ಮೌನ ವಹಿಸಿದ್ದಾರೆ’ ಎಂದು ಸ್ಟೇಷನ್ ರಸ್ತೆ ಅಂಗಡಿಯೊಂದರ ಮಾಲೀಕ ರಾಚಪ್ಪ ಬಿರಾದಾರ ಹೇಳುವ ಮಾತಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.