ADVERTISEMENT

‘ಸಮಾನತೆಯ ಸಮಾಜ ಶರಣರ ಕನಸು’

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:21 IST
Last Updated 21 ಏಪ್ರಿಲ್ 2017, 6:21 IST

ಸಿಂಧನೂರು: ‘ಬಸವಾದಿ  ಶರಣರು ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ನಿರ್ಮೂಲನೆಗೆ ಶ್ರಮಿಸಿದರು. ಸಮಾನತೆ  ಸಮಾಜ ಕಟ್ಟುವುದು ಅವರ ಕನಸಾಗಿತ್ತು’ ಎಂದು ಕೃಷಿ ಬೆಲೆ ಆಯೋಗದ ಸದಸ್ಯ ಹನುಮನಗೌಡ ಬೆಳಗುರ್ಕಿ ಅಭಿಪ್ರಾಯಪಟ್ಟರು.ಇಲ್ಲಿನ ಆರ್‌ಜಿಎಂ ಶಾಲಾ ಮೈದಾನದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಶರಣರ ಜೀವನ ಮಾರ್ಗ ಕುರಿತು ಪ್ರವಚನ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.  ‘ಬಸವಾದಿ ಶರಣರ ತತ್ವಾದರ್ಶಗಳನ್ನು ಎಲ್ಲರೂ ಸರಿಯಾಗಿ ಪಾಲಿಸಿದ್ದರೆ ಸಮಾಜ ಈ ಸ್ಥಿತಿಗೆ ತಲುಪುತ್ತಿರಲಿಲ್ಲ. ಶರಣರ ತತ್ವಗಳು ಅನುಷ್ಠಾನಗೊಂಡಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ’ ಎಂದು ಹೇಳಿದರು.

ನವದೆಹಲಿಯ ತೊಂಟದಾರ್ಯ ಮಠದ ಮಹಾಂತ ದೇವರು ಮಾತನಾಡಿ, ‘ನಮ್ಮ ನಂಬಿಕೆ ಆಧಾರದ ಮೇಲೆ ಧರ್ಮಗಳು ಹುಟ್ಟಿವೆ. ಎಲ್ಲ ಧರ್ಮಗಳು ಅಹಿಂಸೆ, ಸಮಾನತೆ, ಜಾತ್ಯತೀತತೆ ಬೋಧಿಸುತ್ತವೆ. ಆದರೆ ಅವುಗಳನ್ನು ಪಾಲಿಸದೇ ಅಸಹನೆ, ಜಾತಿ, ಧರ್ಮಗಳ ನಡುವೆ ಒಡಕು ಉಂಟು ಮಾಡುತ್ತಿರುವುದು ಸರಿಯಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ ಮಾತನಾಡಿ, 12ನೇ ಶತಮಾನದಲ್ಲಿ ದೇವರು, ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಮೌಢ್ಯಾಚರಣೆಗಳನ್ನು ನಿರ್ಮೂಲನೆ ಮಾಡಲು  ಬಸವಾದಿ ಶರಣರು ಶ್ರಮಿಸಿದರು ಎಂದು ಹೇಳಿದರು. ಪಿಎಸ್ಐ ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಕರುಣಾ ರೆಡ್ಡೆಪ್ಪ ಮತ್ತು ಮಹಾಂತಮ್ಮ ಧರ್ಮಣ್ಣ ಅವರಿಗೆ ‘ಕಾಯಕ ಯೋಗಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಅಮರೇಗೌಡ ವಿರೂಪಾಪುರ, ಕುರುಬ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕರಿಯಪ್ಪ, ವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರುಭೂಪಾಲ ನಾಡಗೌಡ, ವರ್ತಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ಕಾನಿಹಾಳ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಜಶೇಖರ ಪಾಟೀಲ, ಟಿಎಪಿಸಿಎಂಎಸ್ ನಿರ್ದೇಶಕ ಸಂಜಯ್ ಪಾಟೀಲ, ಬಸವ ಉತ್ಸವ ಸಮಿತಿ ಅಧ್ಯಕ್ಷ ಕರೇಗೌಡ ಕುರಕುಂದಿ, ಬಸವಕೇಂದ್ರದ ತಾಲ್ಲೂಕು ಘಟಕದ ಅಧ್ಯಕ್ಷ ಗುಂಡಪ್ಪ ಬಳಿಗಾರ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ಶಾಂತಪ್ಪ ಚಿಂಚಿರಿಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.