ADVERTISEMENT

ಸಮ್ಮೇಳನ ಸ್ವಾರಸ್ಯಗಳು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 9:17 IST
Last Updated 3 ಡಿಸೆಂಬರ್ 2016, 9:17 IST
ಸಾಹಿತ್ಯಾಸಕ್ತರಿಗೆ ಹುರಿದ ಶೇಂಗಾ ಬಿಕರಿ ಮಾಡಿದ ವ್ಯಾಪಾರಿ
ಸಾಹಿತ್ಯಾಸಕ್ತರಿಗೆ ಹುರಿದ ಶೇಂಗಾ ಬಿಕರಿ ಮಾಡಿದ ವ್ಯಾಪಾರಿ   

ಕಿಸೆಗಳ್ಳರ ಕೈ ಚಳಕ
ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಮುಖಂಡ ಎಂ. ದೊಡ್ಡಬಸವರಾಜ ಅವರ ಜೇಬು ಕತ್ತರಿಸಿದ ಕಳ್ಳರು ₹ 8 ಸಾವಿರ ಎಗರಿಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಮಂದಿಯ ಜೇಬಿಗೆ ಕಳ್ಳರು ಕತ್ತರಿಹಾಕಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಒಂದು ಲಕ್ಷ ಜನರ ಭೇಟಿ
ಮೊದಲ ದಿನದ ಸಮ್ಮೇಳನಕ್ಕೆ ಸುಮಾರು ಒಂದು ಲಕ್ಷ ಜನರು ಸೇರಿದ್ದರು. ಸಾರ್ವಜನಿಕರ ಊಟ ವಿತರಣೆಯಲ್ಲಿ ಪೇಪರ್‌ ತಟ್ಟೆ ಮತ್ತು ಅಡಿಕೆ ಹಾಳೆಗಳು ಸೇರಿ 60 ಸಾವಿರ ಖರ್ಚಾಗಿವೆ ಎಂದು ಆಹಾರ ಸಮಿತಿ ಮೂಲಗಳು ತಿಳಿಸಿವೆ. ಪ್ರತಿನಿಧಿಗಳು ಮತ್ತು ಗಣ್ಯರ ಭೋಜನ ವಿಭಾಗದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಭೋಜನ ಮಾಡಿದ್ದಾರೆ.

ಪ್ರಧಾನ ಸಭಾಂಗಣದ ಆರು ಕಡೆ ಜೋಡಿಸಿದ್ದ ಎಲ್ಇಡಿ ಪರದೆಗಳಲ್ಲೂ ಕಾರ್ಯಕ್ರಮ ಬಿತ್ತರವಾಗುತ್ತಿತ್ತು. ತಾರಾನಾಥ ಮಹಾಮಂಟಪದಲ್ಲಿ ಜೋಡಿಸಲಾಗಿದ್ದ ಸುಮಾರು 20 ಸಾವಿರದಷ್ಟು ಆಸನಗಳು ಭರ್ತಿಯಾಗಿ, ಸಭಾಂಗಣದ ಸುತ್ತಲೂ ಜನರು ನಿಂತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ವೇಳೆ ಕೂಗಾಟ, ಕೇಕೆ ಹಾಕುತ್ತಿದ್ದ ಜನರು ಮಾಹಿತಿ ಫಲಕ ಕಿತ್ತು ಹಾಕುತ್ತಿದ್ದ ಕಾರಣ ಪೋಲಿಸರು ಮಧ್ಯ ಪ್ರವೇಶ ಮಾಡಬೇಕಾಯಿತು.

ಭರ್ಜರಿ ವ್ಯಾಪಾರ
ಶೇಂಗಾ, ಕಡಲೆಪುರಿ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ, ಸಾಹಿತ್ಯ ಪ್ರೇಮಿಗಳಿಂದ ಪುಸ್ತಕ ಮಳಿಗೆಗಳು ತುಂಬಿದ್ದವು. ‘ಜಿಲ್ಲಾಡಳಿತವು ಮೈಕ್ರೊ ಎಟಿಎಂಗಳನ್ನು ತೆರೆಯಲಾಗಿರುತ್ತದೆ ಎಂದು ಮಾಹಿತಿ ನೀಡಿತ್ತು. ಆದರೆ, ಮಳಿಗೆಗಳ ವಿಭಾಗದಲ್ಲಿ ಇಂತಹ ಒಂದೂ ಎಟಿಎಂ ಕಾಣಲಿಲ್ಲ’ ಎಂದು ಮಾನ್ವಿಯಿಂದ ಬಂದಿದ್ದ ರಾಜಣ್ಣ ಅಸಮಾಧನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.