ADVERTISEMENT

ಸರ್ಕಾರಿ ಆಸ್ಪತ್ರೆಗಳ ಸೌಲಭ್ಯ ಹೆಚ್ಚಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 9:03 IST
Last Updated 18 ನವೆಂಬರ್ 2017, 9:03 IST

ರಾಯಚೂರು: ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಹೊಸ ಕಾಯ್ದೆ ಜಾರಿಗೊಳಿಸುವ ಬದಲು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಿಸುವುದಕ್ಕೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ರಾಯಚೂರು ವಾಣಿಜ್ಯೋದ್ಯಮಗಳ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊಸ ತಿದ್ದುಪಡಿ ಕಾಯ್ದೆಯ ಎಲ್ಲವನ್ನೂ ವೈದ್ಯರು ವಿರೋಧಿಸುತ್ತಿಲ್ಲ. ಜಿಲ್ಲಾಮಟ್ಟದಲ್ಲಿ ವಿಚಕ್ಷಣ ಸಮಿತಿ ರಚಿಸುವುದು ಬೇಡ ಹಾಗೂ ಜೈಲು ಶಿಕ್ಷೆ ವಿಧಿಸುವ ಕ್ರಮವನ್ನು ಕಾಯ್ದೆಯಿಂದ ತೆಗೆದುಹಾಕಬೇಕು ಎನ್ನುವುದು ಅವರ ಪ್ರಮುಖ ಬೇಡಿಕೆಗಳಾಗಿವೆ

ಈಗಾಗಲೇ ಅಸ್ತಿತ್ವ ದಲ್ಲಿರುವ ಕೆಪಿಇಎಂ ಕಾಯ್ದೆ ಮೂಲಕ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣ ಮಾಡುವುದಕ್ಕೆ ಸಾಧ್ಯವಾಗುತ್ತಿದೆ. ಹೀಗಾಗಿ ಹೊಸ ಕಾಯ್ದೆ ಮಾಡಬೇಡಿ ಎನ್ನುವ ಅವರ ಬೇಡಿಕೆಯನ್ನು ಬೆಂಬಲಿಸುತ್ತೇವೆ’ ಎಂದು ತಿಳಿಸಿದರು.

ADVERTISEMENT

ಜಿಲ್ಲಾಮಟ್ಟದಲ್ಲಿ ವಿಚಕ್ಷಣ ಸಮಿತಿ ಮಾಡುವುದರಿಂದ ಶೋಷಣೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಪ್ರಾಮಾಣಿಕವಾಗಿರುವ ಖಾಸಗಿ ವೈದ್ಯರಿಗೆ ಇದು ಕಿರಿಕಿರಿ ಆಗುತ್ತದೆ. ಖಾಸಗಿ ಆಸ್ಪತ್ರೆಗಳೆಲ್ಲವೂ ಸರಿಯಾಗಿವೆ ಎಂದು ಹೇಳಲಾಗುವುದಿಲ್ಲ. ಕೆಲವು ಅಪವಾದ ಎನ್ನುವ ರೀತಿಯಲ್ಲಿ ವರ್ತನೆ ತೋರಿಸಿರಬಹುದು. ಕೆಲವರಿಗಾಗಿ ಇಡೀ ವ್ಯವಸ್ಥೆಯನ್ನು ಕಟ್ಟಿ ಹಾಕುವುದಕ್ಕೆ ಸರ್ಕಾರ ಮುಂದಾಗಿರುವ ಕ್ರಮ ಸರಿಯಾಗಿಲ್ಲ ಎಂದು ಹೇಳಿದರು.

ಯಾವುದೇ ಕಾಯ್ದೆ ಜಾರಿಗೊಳಿಸುವ ಪೂರ್ವದಲ್ಲಿ ಖಾಸಗಿ ವೈದ್ಯರ ಸಂಘದ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಖಾಸಗಿ ವೈದ್ಯಕೀಯ ಸೇವೆ ಎನ್ನುವುದು ಜನರ ಆಯ್ಕೆಗೆ ಬಿಟ್ಟಿರುವ ಸಂಗತಿಯಾಗಿದೆ. ಜನರು ತಮಗೆ ಅನುಕೂಲವಾದ ಕಡೆಗಳಲ್ಲಿ ಆರೋಗ್ಯ ಸೇವೆ ಪಡೆಯುತ್ತಾರೆ ಎಂದು ತಿಳಿಸಿದರು. ಸಂಘದ ಪದಾಧಿಕಾರಿಗಳಾದ ಎನ್‌.ಮೂರ್ತಿ, ಜಂಬಣ್ಣ, ಜಗದೀಶ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.