ADVERTISEMENT

ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ: ಆರೋಪ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 5:52 IST
Last Updated 20 ಏಪ್ರಿಲ್ 2017, 5:52 IST

ದೇವದುರ್ಗ: ‘ಕೃಷಿ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ ಮಿಯ್ಯಾಪುರ ಆರೋಪಿಸಿದರು.
ಇಲ್ಲಿನ ಶಾಸಕರ ಭವನದಲ್ಲಿ ಬುಧವಾರ  ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.‘ತಾಲ್ಲೂಕಿನಲ್ಲಿ ಕೃಷಿ ನಿರ್ದೇಶಕರ ಹುದ್ದೆ ಖಾಲಿ ಇದೆ. ಸುಧಾ ಮಾಡಲಗೇರಿ ಅವರು ಪ್ರಭಾರ ಕೃಷಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸರಿಯಾಗಿ ಕಚೇರಿಗೆ ಬರುವುದಿಲ್ಲ. ಕರೆ ಮಾಡಿದರೂ ಸ್ವೀಕರಿಸುವುದಿಲ್ಲ’ ಎಂದು ತಾ.ಪಂ ಸದಸ್ಯರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹನುಮಂತಪ್ಪ ಮಿಯ್ಯಾಪುರ ಅವರು, ‘ಅಧ್ಯಕ್ಷ ನಾಗಿರುವ ನನ್ನ ಕರೆಯನ್ನೇ ಅವರು ಸ್ವೀಕರಿಸುವುದಿಲ್ಲ. ಇನ್ನು ರೈತರ ಸಮಸ್ಯೆ ಪರಿಹರಿಸುವುದು ದೂರ ಉಳಿಯಿತು’ ಎಂದರು.‘ಸಬ್ಸಿಡಿ ದರದಲ್ಲಿ  ರೈತರಿಗೆ ನೀಡಲು ಖರೀದಿಸಿರುವ ಕೃಷಿ ಉಪಕರಣಗಳು ಕಳಪೆಯಾಗಿವೆ. ಈ ಬಗ್ಗೆ ಸುಧಾ ಅವರು ಸಭೆಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

‘ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ವಿವಿಧ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ.  ಇರುವ ವೈದ್ಯರನ್ನು ಖಾಲಿ ಇರುವ ಕಡೆ ಸೇವೆಗೆ ನಿಯೋಜಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬನದೇಶ್ವರ ಮಾಹಿತಿ ನೀಡಿದರು.ಸದಸ್ಯ ಗೋವಿಂದರಾಜ ನಾಯಕ ಕೊತ್ತದೊಡ್ಡ ಅವರು ಮಾತನಾಡಿ, ‘ಕೊತ್ತದೊಡ್ಡಿ ಸೇರಿದಂತೆ   ಸುತ್ತಮುತ್ತಲಿನ ಗ್ರಾಮಗಳ ಜನರು ದೂರದ ಅರಕೇರಾ ಅಥವಾ ಮಸರಕಲ್‌ ಗ್ರಾಮದ  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆಯಬೇಕು.  ಹೀಗಾಗಿ ಕೊತ್ತದೊಡ್ಡಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು’ ಎಂದು  ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬನದೇಶ್ವರ ಅವರು, ‘ ಈ ಕುರಿತು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲದೆ, ಬಿ.ಗಣೇಕಲ್‌, ಎನ್‌.ಗಣೇಕಲ್‌, ಮುಂಡರಗಿ, ಜೋಳದಹೆಡ್ಗಿ ಗ್ರಾಮದಲ್ಲಿ ಉಪ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದರು.

ADVERTISEMENT

ತಾಲ್ಲೂಕಿನಲ್ಲಿ 12 ಜನ ಕಾರ್ಯಕರ್ತೆಯರು ಮತ್ತು 22 ಜನ ಸಹಾಯಕಿಯರ ಹುದ್ದೆಗಳು ಖಾಲಿ ಇವೆ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಶರಣಬಸವ ತಿಳಿಸಿದರು.
‘ಸರ್ಕಾರದ ನಿರ್ದೇಶನದಂತೆ ತಾಲ್ಲೂಕಿನಲ್ಲಿ ಈ ಬಾರಿ 100 ಶಾಲೆಗಳಲ್ಲಿ ಬೇಸಿಗೆ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗೆ ಪಾಠದ ಜತೆಗೆ ಆಟ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಂ. ಹತ್ತಿ ಸಭೆಗೆ ಮಾಹಿತಿ ನೀಡಿದರು.

ತಡವಾಗಿ ಸಭೆ ಅರಂಭ:  ಸಭೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಅರಂಭವಾಯಿತು. ಹೆಚ್ಚಿನ ಅಧಿಕಾ ರಿಗಳು ಸಭೆಗೆ ಬಂದಿರಲಿಲ್ಲ. ಇದರಿಂದ  ಕಾಟಾಚಾರಕ್ಕೆ ಎಂಬುವಂತೆ ಸಭೆ ನಡೆ ಯಿತು. ಸಭೆಯಲ್ಲಿ ಮಹಿಳಾ ಸದಸ್ಯರ ಬದಲಿಗೆ ಅವರ ಪತಿಯರು ಭಾಗವಹಿಸಿ ದ್ದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.