ADVERTISEMENT

ಸಾವಯವ, ಸಿರಿಧಾನ್ಯ ಮೇಳ: ಭರ್ಜರಿ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 5:52 IST
Last Updated 26 ಡಿಸೆಂಬರ್ 2017, 5:52 IST
ರಾಯಚೂರಿನಲ್ಲಿ ನಡೆದ ಸಾವಯವ, ಸಿರಿಧಾನ್ಯ ಮೇಳದ ಕೊನೆಯ ದಿನ ಸೋಮವಾರ ಮಳಿಗೆಗಳ ಎದುರು ಜನರು ವಿಚಾರಿಸುತ್ತಾ ನಿಂತಿದ್ದ ನೋಟ
ರಾಯಚೂರಿನಲ್ಲಿ ನಡೆದ ಸಾವಯವ, ಸಿರಿಧಾನ್ಯ ಮೇಳದ ಕೊನೆಯ ದಿನ ಸೋಮವಾರ ಮಳಿಗೆಗಳ ಎದುರು ಜನರು ವಿಚಾರಿಸುತ್ತಾ ನಿಂತಿದ್ದ ನೋಟ   

ರಾಯಚೂರು: ಸಿರಿಧಾನ್ಯಗಳ ಬಳಕೆ ಮತ್ತು ಬೆಳೆಯುವ ಬಗ್ಗೆ ಅರಿವು ಮೂಡಿಸುವ ಉದ್ದೇಶಕ್ಕಾಗಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಎರಡು ದಿನಗಳ ಸಾವಯವ ಮತ್ತು ಸಿರಿಧಾನ್ಯ ಮೇಳಕ್ಕೆ ಉತ್ತಮ ಜನಸ್ಪಂದನೆ ವ್ಯಕ್ತವಾಯಿತು.

ಮೇಳದಲ್ಲಿ ತೆರೆಯಲಾಗಿದ್ದ 80 ಮಳಿಗೆಗಳಲ್ಲಿ ಸಿರಿಧಾನ್ಯ ಮತ್ತು ಸಾವಯವ ಕೃಷಿ ಉತ್ಪನ್ನಗಳು ಭರ್ಜರಿ ಮಾರಾಟವಾಗಿವೆ. ಮೇಳ ಆರಂಭವಾದ ಮೊದಲ ದಿನ ಭಾನುವಾರ ಆಗಿದ್ದರಿಂದ ಸಾರ್ವಜನಿಕರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪ್ರದರ್ಶನ ಮತ್ತು ವ್ಯಾಪಾರಕ್ಕಾಗಿ ತಂದಿದ್ದ ಅನೇಕ ಉತ್ಪನ್ನಗಳು ಕೆಲವು ಮಳಿಗೆಗಳಲ್ಲಿ ಮೊದಲ ದಿನವೇ ಖಾಲಿಯಾಗಿದ್ದವು. ಎರಡನೇ ದಿನ ಮಾರಾಟಕ್ಕೆ ಸರಕುಗಳಿಲ್ಲದೆ ಕೆಲವರು ಮಳಿಗೆ ಖಾಲಿ ಮಾಡಿಕೊಂಡು ಹೋಗಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಯವ ಮತ್ತು ಸಿರಿಧಾನ್ಯ ವ್ಯಾಪಾರಿಗಳು, ಸಂಘ–ಸಂಸ್ಥೆಗಳು ಮತ್ತು ರೈತರ ಸಂಘಗಳು ಮೇಳದಲ್ಲಿ ಮಳಿಗೆ ತೆರೆದಿದ್ದರು. ಎರಡನೇ ದಿನವೂ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ವಿವಿಧ ಭಾಗಗಳಿಂದ ರೈತರು ಸರ್ಕಾರಿ ಬಸ್‌ಗಳು ಮೂಲಕ ಕರೆತರಲಾಗಿತ್ತು. ಸಾರ್ವಜನಿಕರೂ ಬರುತ್ತಿರುವುದು ಕಂಡುಬಂತು. ಮೊದಲ ದಿನದಷ್ಟು ಜನಸಂದಣಿ ಇರಲಿಲ್ಲ.

ADVERTISEMENT

‘ನಮ್ಮ ಗ್ರಾಮದಲ್ಲಿ ಸುಮಾರು 50 ರೈತರು ಕೂಡಿ ಸಾವಯವ ಕೃಷಿಕರ ಸಂಘ ಮಾಡಿಕೊಂಡಿದ್ದೇವೆ. 15 ರೈತರು ನವಣೆ ಬೆಳೆದಿದ್ದೇವೆ. ಇದೇ ಮೊದಲ ಸಲ ಸಿರಿಧಾನ್ಯ ಮೇಳದಲ್ಲಿ ಮಳಿಗೆ ತೆರೆದು ಮಾರಾಟಕ್ಕೆ ಬಂದಿದ್ದೇನೆ. ಮೂರು ಕ್ವಿಂಟಲ್‌ ನವಣೆ ತಂದಿದ್ದೆವು. ಎಲ್ಲವೂ ಮಾರಾಟವಾಗಿದೆ. ಭತ್ತದಿಂದ ನವಣೆ ತೆಗೆಯುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ಮತ್ತೆ ನವಣೆ ತಂದು ಮಾರಾಟಕ್ಕೆ ಇಡಲು ಆಗಲಿಲ್ಲ’ ಎಂದು ಮಾನ್ವಿ ತಾಲ್ಲೂಕು ಚಿಮಲಾಪುರ ಗ್ರಾಮದ ಶ್ರೀ ಬಸವೇಶ್ವರ ಸಾವಯವ ಕೃಷಿಕ ಸಂಘದ ಅಧ್ಯಕ್ಷ ಆನಂದಗೌಡ ಹೇಳಿದರು.

ಬಳ್ಳಾರಿ ಜಿಲ್ಲೆ ಸಿರಗುಪ್ಪಾ ತಾಲ್ಲೂಕು ಹಾವಿನಾಳ ಗ್ರಾಮದ ಶ್ರೀ ಕಲ್ಲೇಶ್ವರ ಸಾವಯವ ಭಾಗ್ಯ ಕೃಷಿಕರ ಸಂಘದ ಅಧ್ಯಕ್ಷ ಬಿ. ಸಿದ್ದರಾಮಪ್ಪ ಮಾತನಾಡಿ, ‘ಕ್ಯಾನ್ಸರ್‌ ರೋಗ ಗುಣಪಡಿಸುವ ಕಪ್ಪು ಅಕ್ಕಿಯನ್ನು ಉತ್ತರ ಕರ್ನಾಟಕದಲ್ಲಿ ಯಾರೂ ಬೆಳೆದಿಲ್ಲ. ಪ್ರಾಯೋಗಿಕ ನಾನು ಬೆಳೆದು ಯಶಸ್ವಿಯಾಗಿದ್ದೇನೆ. ಮೇಳದಲ್ಲಿ ತಂದಿದ್ದ ಕಪ್ಪು ಅಕ್ಕಿ ಎಲ್ಲವೂ ಮಾರಾಟವಾಗಿದೆ. ಜನರಿಗೆ ಸಮಗ್ರ ತಿಳಿವಳಿಕೆ ಕೊಟ್ಟು, ಅಕ್ಕಿ ಮಾರಾಟ ಮಾಡುತ್ತಿದ್ದೇನೆ. ವ್ಯಾಪಾರ ತುಂಬಾ ಚೆನ್ನಾಗಿ ಆಗಿದೆ’ ಎಂದು ತಿಳಿಸಿದರು.

‘ಮಳಿಗೆದಾರರೆಲ್ಲ ಸಂತುಷ್ಟರಾಗಿದ್ದಾರೆ. ಮೇಳದಲ್ಲಿ ನಡೆದಿರುವ ವ್ಯಾಪಾರದ ಬಗ್ಗೆ ಅಂದಾಜು ಲೆಕ್ಕ ಸಂಗ್ರಹ ಮಾಡಿಸಿದ್ದೇವೆ. ಎರಡು ದಿನಗಳಲ್ಲಿ ಸುಮಾರು ₹30 ರಿಂದ ₹35 ಲಕ್ಷ ವಹಿವಾಟು ನಡೆದಿದೆ’ ಎಂದು ರಾಯಚೂರು ಜಂಟಿ ಕೃಷಿ ನಿರ್ದೇಶಕ ಕಿರಣಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಒಂದು ತಿಂಗಳಿಗೆ ಬರುತ್ತಿದ್ದ ಧಾನ್ಯಗಳ ವ್ಯಾಪಾರ ಮೊತ್ತವು ಮೇಳ ಆರಂಭವಾದ ಮೊದಲ ದಿನವೇ ಸಂಗ್ರಹವಾಗಿದೆ. ಕೆಲವು ಧಾನ್ಯಗಳಿಗೆ ಬೇಡಿಕೆಯಿದ್ದರೂ ಕೊಡುವುದಕ್ಕೆ ನಮಗೆ ಸಾಧ್ಯವಾಗಲಿಲ್ಲ
ಬಸವರಾಜ
ಅಭಿ ಅರ್ಗ್ಯಾನಿಕ್‌ ಹಬ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.