ADVERTISEMENT

ಸೆ. 2ರ ಮುಷ್ಕರಕ್ಕೆ ರೈತ ಸಂಘಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 12:54 IST
Last Updated 29 ಆಗಸ್ಟ್ 2016, 12:54 IST
ಸೆ. 2ರ ಮುಷ್ಕರಕ್ಕೆ ರೈತ ಸಂಘಗಳ ಬೆಂಬಲ
ಸೆ. 2ರ ಮುಷ್ಕರಕ್ಕೆ ರೈತ ಸಂಘಗಳ ಬೆಂಬಲ   

ರಾಯಚೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ವಿದೇಶಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸಿರುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಸೆ. 2ರಂದು ನಡೆಸುತ್ತಿರುವ ದೇಶವ್ಯಾಪಿ ಮುಷ್ಕರಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಮತ್ತು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬೆಂಬಲ ಸೂಚಿಸಿವೆ.

ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಆರ್‌ಎಸ್‌ ಅಧ್ಯಕ್ಷ ಮಾರುತಿ ಮಾನ್ಪಡೆ, ಸೆ.2ರಂದು ರಾಜ್ಯದಲ್ಲಿ ರಸ್ತೆ ತಡೆ, ರೈಲು ರೋಕೊಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ರೈತರ ಸಾಲ ಮನ್ನಾ ಮಾಡಬೇಕು, ವಯಸ್ಸಾದ ಕೃಷಿ ಕಾರ್ಮಿಕರಿಗೆ ತಿಂಗಳಿಗೆ ₹ 3 ಸಾವಿರ ಪಿಂಚಣಿ ನೀಡಬೇಕು, ನರೇಗಾ ಕೂಲಿ ಹೆಚ್ಚಳ ಮಾಡಬೇಕು, ಕೈಗಾರಿಕಾ ಕಾರಿಡಾರ್‌ಗಾಗಿ ರೈತ ಭೂಮಿ ಸ್ವಾಧೀನ ಮಾಡಿಕೊಳ್ಳುವ ಅಪಾಯಕಾರಿ ಯೋಜನೆಯನ್ನು ಕೈಬಿಡಬೇಕು ಎಂದು ಈ ಮುಷ್ಕರದಲ್ಲಿ ಒತ್ತಾಯಿಸಲಾಗುವುದು ಎಂದರು.

ಕಾರ್ಪೊರೇಟ್‌ ಕಂಪೆನಿಗಳಿಗೆ ₹ 7.33 ಲಕ್ಷ ಕೋಟಿ ತೆರಿಗೆ ಮತ್ತು ₹ 1.63 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರಕ್ಕೆ ₹ 2 ಲಕ್ಷ ಕೋಟಿಯಷ್ಟಿರುವ ರೈತರ ಸಾಲ ಮನ್ನಾ ಮಾಡುವುದು ದೊಡ್ಡ ಹೊರೆಯಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾರ್ಪೊರೇಟ್‌ ಕಂಪೆನಿಗಳನ್ನು ಎದುರುಹಾಕಿಕೊಂಡು ರೈತರ ಸಂಕಷ್ಟ ದೂರು ಮಾಡುವಷ್ಟು ಬಲ ಅವರ ಸೊಂಟದಲ್ಲಿ ಇಲ್ಲ ಎಂದು ವ್ಯಂಗ್ಯವಾಡಿದರು.

ಕೃಷಿ ಕೂಲಿ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಮತ್ತು ರೈತರು ಎದುರಿಸುತ್ತಿರುವ ಬಿಕ್ಕಟನ್ನು ಹೋಗಲಾಡಿಸಲು ವಿಫಲವಾದ ಸರ್ಕಾರ, ಕೈಗಾರಿಕಾ ಕಾರಿಡಾರ್‌ಗಳ ನಿರ್ಮಾಣಕ್ಕಾಗಿ ರೈತರ ಭೂಮಿಯನ್ನು ಕಸಿದುಕೊಂಡ ವಿದೇಶಿಯರಿಗೆ ನೀಡುತ್ತಿದೆ. ಇದರಿಂದ ಬ್ರಿಟಿಷರ ಆಡಳಿತಕ್ಕಿಂತ ಹೀನಾಯವಾದ ಕಾಲವನ್ನು ದೇಶ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಂಬೈ– ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗಾಗಿ 1.43 ಲಕ್ಷ ಚದರ ಕಿ.ಮೀ. ಭೂಮಿಯನ್ನು ವಶಪಡಿಸಿಕೊಳ್ಳು ಯೋಜನೆ ಸಿದ್ಧವಾಗಿದೆ. ಅದೇ ರೀತಿ ಬೆಂಗಳೂರು– ಚೆನ್ನೈ ಕಾರಿಡಾರ್ ನಿರ್ಮಾಣ ಕಾರ್ಯಾರಂಭ ಮಾಡಿದೆ ಎಂದರು.

ಕೃಷಿ ಕ್ಷೇತ್ರದಲ್ಲಿ ಎಫ್‌ಡಿಐ ಆಕರ್ಷಣೆ ಮಾಡುವುದರಿಂದ ರೈತ ಮತಷ್ಟು ಸಂಕಷ್ಟಕ್ಕೆ ಸಿಲುಕುತ್ತಾನೆ. ಆದ್ದರಿಂದ ಎಂಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದು ಬೇಡ ಎಂದು ಒತ್ತಾಯಿಸಿದರು.

ಮುಕ್ತ ಮಾರುಕಟ್ಟೆ ಒಪ್ಪಂದದಿಂದಾಗಿಯೇ ಅಡಿಕೆ, ತೆಂಗು, ಏಲಕ್ಕಿ ಬೆಲೆ ಕುಸಿದಿದೆ. ಪ್ರಧಾನಿ ಮೋದಿ ಅವರ ಆಪ್ತ ಮತ್ತು ಉದ್ಯಮಿ ಆದಾನಿ ಹಾಗೂ ಇಟಿಜಿ ಕಂಪೆನಿಗಳಿಗೆ ಲಾಭ ಮಾಡಿಕೊಡಲು ಬೇಳೆಕಾಳುಗಳನ್ನು  ಅಗತ್ಯಕ್ಕಿಂತ ಹೆಚ್ಚು ಪಟ್ಟು ಆಮದು ಮಾಡಿಕೊಂಡು ರೈತರ ಹಿತವನ್ನು ಬಲಿಕೊಡಲಾಗಿದೆ. ದೇಶಕ್ಕೆ 24 ಲಕ್ಷ ಟನ್‌ ಬೇಳೆಕಾಳು ಅಗತ್ಯವಿದೆ. 20 ಲಕ್ಷ ಟನ್‌ ದೇಶದಲ್ಲೇ ಉತ್ಪಾದನೆ ಆಗುತ್ತದೆ. ಆದರೂ ಈ ವರ್ಷ 10.42 ಲಕ್ಷ ಟನ್‌ ಹಾಗೂ ಕಳೆದ ವರ್ಷ 20 ಲಕ್ಷ ಟನ್‌ ಬೇಳೆಕಾಳುಗಳನ್ನು ಆಮದು ಮಾಡಿಕೊಂಡು ದೇಶದ ಬೇಳೆಕಾಳು ಬೆಳೆಗಾರರನ್ನು ಸಂಕಷ್ಟದ ಕೂಪಕ್ಕೆ ತಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಮದು ಮಾಡಿಕೊಂಡಿರುವ ಬೇಳೆಕಾಳುಗಳ ಮೇಲೆ ಆಮದು ಸುಂಕ ಹಾಕಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ರಾಜ್ಯದ ಸಂಸದರ ಜೊತೆಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಿಯೋಗ ಪ್ರಧಾನಿ ಅವರನ್ನು ಭೇಟಿ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಚಾಮರಸಮಾಲಿ ಪಾಟೀಲ್‌, ಕಾರ್ಮಿಕ ಮುಖಂಡ ಕೆ.ಜಿ.ವೀರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.