ADVERTISEMENT

ಹಣಕ್ಕಾಗಿ ಬಿಜೆಪಿ ಟಿಕೆಟ್‌ ಮಾರಾಟ

ಕಾಂಗ್ರೆಸ್ ಮುಖಂಡ ಮಹಾದೇವಪ್ಪಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 12:58 IST
Last Updated 26 ಏಪ್ರಿಲ್ 2018, 12:58 IST

ಮಸ್ಕಿ: ‘ಬಿಜೆಪಿಯಲ್ಲಿ ನಿಷ್ಠೆಯಿಂದ ದುಡಿದ ಹಿರಿಯ ಮುಖಂಡರ ಬೆನ್ನಿಗೆ ಚೂರಿ ಹಾಕಿ ಹಣವಂತರಿಗೆ ಬಿ.ಎಸ್‌.ಯಡಿಯೂರಪ್ಪ ಟಿಕೆಟ್ ಮಾರಾಟ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ ಆರೋಪಿಸಿದರು

ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು ‘ಕಳೆದ ಹತ್ತು ವರ್ಷಗಳಿಂದ ನಾನು, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಸಿದ್ದುಬಂಡಿ ಸೇರಿದಂತೆ ಜಿಲ್ಲೆಯ ಅನೇಕ ಹಿರಿಯ ಮುಖಂಡರು ಯಡಿಯೂರಪ್ಪ ಅವರ ಕಷ್ಟದ ಕಾಲದಲ್ಲಿ ಜೊತೆಗಿದ್ದವು. ಪಕ್ಷವನ್ನು ಬಲವಾಗಿ ಸಂಘಟಿಸಿದ್ದೆವು. ಅವರು ಕೆಜೆಪಿಗೆ ಸೇರಿದಾಗ, ಅವರೊಂದಿಗೆ ನಾವು ಹೋದೆವು. ಆದರೆ, ಈಗ ಯಡಿಯೂರಪ್ಪ ಅವರ ಬಣ್ಣ  ಬಯಲಾಗಿದೆ’ ಎಂದರು.

‘ಮೊದಲಿನಿಂದಲೂ ನಮಗೆ ಬಿಜೆಪಿ ಟಿಕೆಟ್ ನೀಡುವುದಾಗಿ ನಂಬಿಸಿದರು. ಅವರ ಮೇಲೆ ನಂಬಿಕೆ ಇಟ್ಟು ತಳ ಹಂತದಿಂದ ಪಕ್ಷ ಕಟ್ಟಿದ ನಮಗೆ ಕೊನೆ ಕ್ಷಣದಲ್ಲಿ ಟಿಕೇಟ್ ನಿರಾಕರಿಸುವ ಮೂಲಕ ವಂಚನೆ ಮಾಡಿದರು. ಲಿಂಸಗುಗೂರಿನಲ್ಲಿ ಬಿಜೆಪಿಗೆ ಶಕ್ತಿ ಕೊಟ್ಟಿದ್ದ ಸಿದ್ದು ಬಂಡಿಗೆ ನೀಡಬೇಕಿದ್ದ ಟಿಕೆಟ್ ಅನ್ನು ಮಾನಪ್ಪ ವಜ್ಜಲ್ ಅವರ ಮೂಲಕ ಕೋಟಿಗಟ್ಟಲೇ ಹಣ ಕಿಕ್ ಬ್ಯಾಕ್ ಪಡೆದು ಅವರಿಗೆ ಟಿಕೆಟ್ ಮಾರಾಟ ಮಾಡಿ ಸಿದ್ದುಬಂಡಿಗೆ ಮೋಸ ಮಾಡಿದರೆ, ಸಿಂಧನೂರಿನಲ್ಲಿ ಹಿಂದುಳಿದ ವರ್ಗದ ರಾಜ್ಯ ನಾಯಕ ಕೆ. ವಿರುಪಾಕ್ಷಪ್ಪ ಅವರಿಗೆ ಮೋಸ ಮಾಡಿದರು, ನನ್ನ ವಿರುದ್ಧ ಪಿತೂರಿ ನಡೆಸಿ ನಿನ್ನೆ ಮೊನ್ನೆ ಬಂದವರಿಗೆ, ಕ್ಷೇತ್ರದ ಪರಿಚಯ ಇಲ್ಲದವರಿಗೆ ಟಿಕೆಟ್ ನೀಡಿದರು’ ಎಂದು ಟೀಕಿಸಿದರು.

ADVERTISEMENT

ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿದರು. ಮುಖಂಡರಾದ ಎ. ವಸಂತಕುಮಾರ, ಶರಣಪ್ಪ ಕಲ್ಮಲಾ. ಕರಿಯಪ್ಪ ಸಿಂಧನೂರು, ಶರಣಪ್ಪ ಮೇಟಿ, ಸಿದ್ಧರಾಮಣ್ಣ ಸಾಹುಕಾರ, ಅಂದಾನಪ್ಪ ಗುಂಡಳ್ಳಿ, ಬಸವಂತರಾಯ ಕುರಿ, ನಿರುಪಾದಿ ವಕೀಲ, ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ಉಪಾಧ್ಯಕ್ಷ ರವಿಕುಮಾರ ಪಾಟೀಲ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.