ADVERTISEMENT

‘ಜೀವನ ಶಗುನ್‌’ ನೂತನ ಪಾಲಿಸಿ ಜಾರಿ

ಎಲ್‌ಐಸಿ 58ನೇ ವಾರ್ಷಿಕೋತ್ಸವ ಆಚರಣೆ: ರಂಗರಾವ್‌

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 6:21 IST
Last Updated 2 ಸೆಪ್ಟೆಂಬರ್ 2014, 6:21 IST

ರಾಯಚೂರು: ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) 58ನೇ ವಾರ್ಷಿಕೋತ್ಸವ ಅಂಗವಾಗಿ ವಿಮಾ ಸಪ್ತಾಹ  ಆಚರಿಸಲಾಗುತ್ತಿದೆ ಎಂದು ಎಲ್‌ಐಸಿ ವಿಭಾಗೀಯ ಹಿರಿಯ ವ್ಯವಸ್ಥಾಪಕ ಎಸ್‌.ವಿ.ಕೆ. ರಂಗರಾವ್‌ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಮಾ ಸಪ್ತಾಹ ಆಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗಾಗಿ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

12ನೇ ಪಂಚವಾರ್ಷಿಕ ಯೋಜನೆಯಡಿ ಎಲ್‌ಐಸಿ 4.51 ಸಾವಿರ ಕೋಟಿ ಹಣ ಹೂಡಿಕೆ ಮಾಡಿದೆ. 2013– 14ನೇ ಸಾಲಿನ ಆರ್ಥಿಕ ವರ್ಷದಲ್ಲಿ ಎಲ್‌ಐಸಿ 345.12 ಲಕ್ಷಕ್ಕೂ ಅಧಿಕ ನೂತನ ಪಾಲಿಸಿ­ಗಳೊಂದಿಗೆ ರೂ 90,123, 75ಕೋಟಿಗಳಷ್ಟು ಪ್ರಥಮ ಪ್ರಿಮಿಯಂ ಸಂಗ್ರಹಿಸಿದೆ. ವಿಮಾ ಕ್ಷೇತ್ರದಲ್ಲಿಯೇ ನೂತನ ಪಾಲಿಸಿಗಳಲ್ಲಿ  ಶೇ 84.44ರಷ್ಟು ಮತ್ತು ಪ್ರಥಮ ಪ್ರಿಮಿಯಂ ಹಣದಲ್ಲಿ ಶೇ 75.33 ಪಾಲನ್ನು ಪಾಲನ್ನು ಹೊಂದುವ ಮೂಲಕ ಸಾಧನೆ ಮಾಡಿದೆ ಎಂದು ಹೇಳಿದರು.

2013– 14ನೇ ಸಾಲಿನಲ್ಲಿ ರಾಯಚೂರು ವಿಭಾಗವು 2.80 ಲಕ್ಷ ಪಾಲಿಸಿಗಳನ್ನು ಹೊಂದಿದ್ದು, ಪ್ರಿಮಿಯಂ  ರೂ 179 ಕೋಟಿ ಹಣ ಸಂಗ್ರಹಿಸಿದೆ. 2014– 15ನೇ ಸಾಲಿನಲ್ಲಿ 35 ಸಾವಿರ ಪಾಲಿಸಿಗಳನ್ನು ಮಾರಾಟ ಮಾಡಿ ರೂ 99 ಕೋಟಿ ಸಂಗ್ರಹಿಸಿದೆ. ಮರಣದಾವೆ (ಡೆತ್‌ ಕ್ಲೇಮ್) ಸಂಬಂಧಿಸಿದಂತೆ 3 ಸಾವಿರ ಪಾಲಿಸಿಗಳ ಇತ್ಯಾರ್ಥ­ಗೊಳಿಸಿ, ರೂ  22 ಕೋಟಿ ಪಾವತಿಸಲಾಗಿದೆ ಎಂದು ವಿವರಿಸಿದರು.
ಎಲ್‌ಐಸಿ ದಕ್ಷಿಣ ವಲಯದ 17 ವಿಭಾಗಗಳಲ್ಲಿ 12ನೇ ಸ್ಥಾನದಲ್ಲಿದೆ. ಪ್ರಿಮೀಯಂ ಸಂಗ್ರಹಣೆಯಲ್ಲಿ 15ನೇ ಸ್ಥಾನದಲ್ಲಿದೆ. ಒಂದೇ ಕಂತು ಇರುವ ಪಾಲಿಸಿಗಳ ಮಾರಾಟದಲ್ಲಿ ರಾಯಚೂರು ವಿಭಾಗವು ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಬೀದರ್‌ನ ಮಾಣಿಕ ಪ್ರಭು ಅಂಧ ಮಕ್ಕಳ ವಸತಿ ಶಾಲೆಗೆ ಕಟ್ಟಡ ನಿರ್ಮಾಣಕ್ಕೆ  ರೂ 25 ಲಕ್ಷ ನೀಡ­ಲಾಗಿದೆ, ಈ ವಿಭಾಗದ ಆರು ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣ­ಕ್ಕಾಗಿ ಪ್ರತಿ ವರ್ಷ 10 ವಿದ್ಯಾರ್ಥಿಗಳಿಗೆ ಶಿಷ್ಯವೇತನ ರೂ 10 ಸಾವಿರ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ನೂತನ ಪಾಲಿಸಿ ಜಾರಿ: 58ನೇ ವರ್ಷಿಕೋತ್ಸವದ ಅಂಗವಾಗಿ ‘ಎಲ್‌ಐಸಿ ಜೀವನ್ ಶಗುನ್‘ ಎಂಬ ನೂತನ ಪಾಲಿಸಿ ಜಾರಿಗೆ ತರಲಾಗಿದೆ. ಈ ಪಾಲಿಸಿ ಅವಧಿ 90 ದಿನಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ವಿಮೆ ಪಾಲಿಸಿ ಯೋಜನೆಯಡಿ ಗ್ರಾಹಕರು ಒಂದೇ ಬಾರಿಗೆ ಪ್ರಿಮೀಯಂ ಪಾವತಿಸಬೇಕು. ಈ ವಿಮೆಯು 8ರಿಂದ 45 ವರ್ಷದವರೆಗಿನ ಗ್ರಾಹಕರಿಗೆ ಅನ್ವಯ­ವಾಗುತ್ತದೆ. ಆಕಸ್ಮಿಕವಾಗಿ ಮರಣ ಹೊಂದಿದರೆ ಕಂತಿನ ಹಣದ ಹತ್ತು ಪಟ್ಟು ಹಾಗೂ ವಿಮೆ ಹಣದೊಂದಿಗೆ ಪಾವತಿಸಲಾಗುವುದು ಎಂದು ತಿಳಿಸಿದರು.

ಎಲ್ಐಸಿ ವಿಭಾಗೀಯ ಕಚೇರಿಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ  ಜೆ.ಜಗದೀಶ, ಮುರಳಿಧರ, ವರಪ್ರಕಾಶ ಹಾಗೂ ಇತರರ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.