ADVERTISEMENT

ಗೊಲ್ಲಕುಂಟೆ ಕೆರೆ ಅಭಿವೃದ್ಧಿಗೆ ನೀಲನಕ್ಷೆ

ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ₹6 ಕೋಟಿ ಮೀಸಲು

ನಾಗರಾಜ ಚಿನಗುಂಡಿ
Published 1 ಜನವರಿ 2018, 10:49 IST
Last Updated 1 ಜನವರಿ 2018, 10:49 IST
ರಾಯಚೂರಿನ ಗೊಲ್ಲಕುಂಟೆ ಕೆರೆ
ರಾಯಚೂರಿನ ಗೊಲ್ಲಕುಂಟೆ ಕೆರೆ   

ರಾಯಚೂರು: ಅಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಯಿಂದ ಭರ್ತಿಯಾಗಿ ಗಮನ ಸೆಳೆದಿದ್ದ ಗೊಲ್ಲಕುಂಟೆ ಕೆರೆಯನ್ನು ವಿಹಾರತಾಣವಾಗಿ ಅಭಿವೃದ್ಧಿ ಮಾಡುವುದಕ್ಕೆ ಯೋಜಿಸಲಾಗಿದೆ.

ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ (ರುಡಾ) ಕೆರೆ ಅಭಿವೃದ್ಧಿ ಜವಾಬ್ದಾರಿ ವಹಿಸಿಕೊಂಡಿದೆ. ಇದಕ್ಕಾಗಿ ನೀಲನಕ್ಷೆಯೊಂದನ್ನು ಸಿದ್ಧಪಡಿಸಲಾಗಿದ್ದು, ಈ ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆಯುವ ಕೆಲಸ ಪ್ರಗತಿಯಲ್ಲಿದೆ. ಮುಂದಿನ ಮಳೆಗಾಲ ಬರುವುದರೊಳಗಾಗಿ ಕೆರೆ ಬಂಡುಗಳನ್ನು ಗಟ್ಟಿ ಮಾಡಬೇಕಿದೆ. ಅಲ್ಲದೆ ಉಸುಕಿನ ಹನುಮಾನ ದೇವಸ್ಥಾನಕ್ಕೆ ಹೋಗುವುದಕ್ಕೆ 30 ಅಡಿ ಅಗಲದ ಹೊಸ ರಸ್ತೆಯೊಂದನ್ನು ನಿರ್ಮಿಸುವುದು ರುಡಾ ಯೋಜನೆಯಲ್ಲಿದೆ.

ನಗರ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣವಾಗುವ ಪ್ರತಿ ಖಾಸಗಿ ಬಡಾವಣೆದಾರರಿಂದ ಕೆರೆ ಅಭಿವೃದ್ಧಿ ಶುಲ್ಕವನ್ನು ರುಡಾ ಸಂಗ್ರಹಿಸುತ್ತಾ ಬಂದಿದೆ. ಇಲ್ಲಿಯವರೆಗೂ ಅದು ಬಳಕೆಯಾಗಿಲ್ಲ.

ADVERTISEMENT

ಒಂದು ಎಕರೆ ವಿಸ್ತಾರದ ಬಡಾವಣೆಗೆ ಶೇ 1.5 ರಷ್ಟು ಶುಲ್ಕವನ್ನು ಬಡಾವಣೆ ಅಭಿವೃದ್ಧಿ ಮಾಡಿದ ಸಂಸ್ಥೆ ಅಥವಾ ಏಜೆನ್ಸಿಯಿಂದ ಕಟ್ಟಿಸಿಕೊಳ್ಳಲಾಗಿದೆ. ಇದೀಗ ಕೆರೆ ಅಭಿವೃದ್ಧಿ ಶುಲ್ಕವು ₹6.4 ಕೋಟಿಯಷ್ಟು ಸಂಗ್ರಹವಾಗಿದೆ.

‘ಕೆರೆ ಅಭಿವೃದ್ಧಿ ಮಾಡುವ ಉದ್ದೇಶಕ್ಕೆ ಪ್ರಾಧಿಕಾರದ ಖಾತೆಯಲ್ಲಿ ಈ ಶುಲ್ಕವು ಉಳಿದಿದೆ. ಜಿಲ್ಲಾಡಳಿತ ಸೂಚನೆಯಂತೆ ಅಭಿವೃದ್ಧಿ ಪ್ರಾಧಿಕಾರದಿಂದ ಕೆರೆ ಅಭಿವೃದ್ಧಿ ಮಾಡುವುದಕ್ಕೆ ಮುಂದಾಗಿದ್ದೇವೆ. ಈಗಾಗಲೇ ಕಚ್ಚಾ ನೀಲನಕ್ಷೆಯನ್ನು ತಯಾರಿಸಿ ಅನುಮೋದನೆಗಾಗಿ ಕಳುಹಿಸಿದ್ದೇವೆ. ಸರ್ಕಾರದಿಂದ ಪ್ರತ್ಯೇಕ ಅನುದಾನ ಬಿಡುಗಡೆ ಮಾಡುವ ಅಗತ್ಯ ಇಲ್ಲದೆ ಇರುವುದರಿಂದ ಯೋಜನೆಯು ಬೇಗನೆ ಒಪ್ಪಿಗೆ ಪಡೆಯುತ್ತದೆ. ಶೀಘ್ರದಲ್ಲೆ ಮುಂದಿನ ಕೆಲಸ ಆರಂಭವಾಗಲಿದೆ’ಎಂದು ಡಾ.ಅಧ್ಯಕ್ಷ ಅಬ್ದುಲ್‌ ಕರೀಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೀಲನಕ್ಷೆಯ ಪ್ರಕಾರ ಕೆರೆಯಲ್ಲಿ ಬೋಟಿಂಗ್, ಪಕ್ಕದಲ್ಲಿ ಈಜುಗೊಳಗಳು, ಉದ್ಯಾನಗಳು, ಹೊರಾಂಗಣ ಜಿಮ್ ಹಾಗೂ ವಿಹಾರಕ್ಕೆ ಬರುವವರಿಗೆ ಅನುಕೂಲವಾಗಲು ವ್ಯಾಪಾರಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಆದರೆ ಮೀಸಲಿಟ್ಟ ₹6 ಕೋಟಿ ಸಾಕಾಗುವುದಿಲ್ಲ. ಈಗ ಲಭ್ಯವಿದ್ದಷ್ಟು ಅನುದಾನದಲ್ಲಿ ಕಾಮಗಾರಿ ಆರಂಭಿಸಬೇಕೆನ್ನುವುದು ನಮ್ಮಉದ್ದೇಶ. ಆನಂತರ ಅನುದಾನ ಕೊರತೆಯಾದರೆ ಜಿಲ್ಲಾಡಳಿತದಿಂದ ಅನುದಾನ ಕೋರಲಾಗುವುದು’ ಎಂದರು.

ಮಳೆಗಾಲದಲ್ಲಿ ಗೊಲ್ಲಕುಂಟೆ ಕೆರೆ ಭರ್ತಿಯಾಗಿ ಸಾಕಷ್ಟು ಆತಂಕ ಸೃಷ್ಟಿಸಿತ್ತು. ಕೆರೆಯಿಂದ ನೀರು ಬಂದು ಸತ್ಯನಾಥ ಕಾಲೋನಿ, ನವೋದಯ ಕ್ಯಾಂಪಸ್ ಬಳಿ ಇರುವ ಬಡಾವಣೆಗಳಿಗೆ ನುಗ್ಗಿತ್ತು. ಕೆಲವು ಮನೆಗಳು ಜಲಾವೃತ್ತವಾಗಿದ್ದವು. ಈ ಸಮಸ್ಯೆಯು ಪ್ರತಿ ವರ್ಷವೂ ಪುನಾವರ್ತನೆ ಆಗಲಿದೆ. ಇದೇಮೊದಲ ಬಾರಿ ಉಸುಕಿನ ಹನುಮಾನ ದೇವಸ್ಥಾನದೊಳಗೆ ನೀರು ನುಗ್ಗಿತ್ತು. ಇವೆಲ್ಲವೂ ಅಪಾಯದ ಮುನ್ಸೂಚನೆ.

‘ಆದಷ್ಟು ಬೇಗ ಕೆರೆ ಬಂಡುಗಳನ್ನು ಗಟ್ಟಿಮಾಡಿ ಅಭಿವೃದ್ಧಿ ಮಾಡಬೇಕು. ರಾಯಚೂರು ನಗರದ ಜನರಿಗೆ ಒಳ್ಳೆಯ ವಿಹಾರ ತಾಣಗಳಿಲ್ಲ. ಕೆರೆ ಪಕ್ಕದಲ್ಲಿ ಸುಂದರ ವಿಹಾರತಾಣ ಮಾಡಬಹುದಾಗಿದೆ. ಆದರೆ, ಮಾವಿನಕೆರೆಗೆ ಚರಂಡಿ ನೀರು ಹರಿಬಿಟ್ಟು ಕಲ್ಮಶ ಮಾಡಿದಂತೆ ಈ ಕೆರೆಯನ್ನೂ ಕಲ್ಮಶ ಮಾಡುವುದಕ್ಕೆ ಅವಕಾಶ ನೀಡಬಾರದು’ ಎನ್ನುವ ಕಳಕಳಿಯನ್ನು ಐಡಿಎಸ್‌ಎಂಟಿ ಲೇಔಟ್ ನಿವಾಸಿ ಶ್ರೀನಿವಾಸ ವ್ಯಕ್ತಪಡಿಸಿದರು.

***

ಕೆರೆ ಅಭಿವೃದ್ಧಿಗಾಗಿ ಯೋಜನೆ ತಯಾರಿಸಿ ಅನುಮೋದನೆಗಾಗಿ ಲೋಕೋಪಯೋಗಿ ಇಲಾಖೆಯ ಮೂಲಕ ಬಳ್ಳಾರಿ ಅಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ.
– ಅಬ್ದುಲ್‌ ಕರೀಂ
ರುಡಾ ಅಧ್ಯಕ್ಷ

***

17 ಎಕರೆ ಒಟ್ಟು ಕೆರೆಯ ವಿಸ್ತಾರ

₹6.4 ಕೋಟಿ ಕೆರೆ ಅಭಿವೃಧ್ಧಿ ಶುಲ್ಕ ಸಂಗ್ರಹ

ನಗರದ ಜನರಿಗೆ ವಿಹಾರತಾಣವಾಗಲಿದೆ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.