ADVERTISEMENT

ಅಕ್ರಮ ಸಂಗ್ರಹ: ವಸ್ತುಗಳ ವಶ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2014, 9:12 IST
Last Updated 23 ಸೆಪ್ಟೆಂಬರ್ 2014, 9:12 IST

ಚನ್ನಪಟ್ಟಣ:  ತಹಶೀಲ್ದಾರ್ ಅರುಣ ಪ್ರಭ ಅವರು ಅಂಗಡಿಯೊಂದರ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿ ಸಿಟ್ಟಿದ್ದ ಸೀಮೆಎಣ್ಣೆ, ಡಿಸೇಲ್, ಪೆಟ್ರೋಲ್ ಹಾಗೂ ದಿನಸಿ ಪದಾರ್ಥ ಗಳನ್ನು ವಶಪಡಿಸಿಕೊಂಡಿರುವ ಘಟನೆ ತಾಲ್ಲೂಕಿನ ಹೊಂಗನೂರು ಗ್ರಾಮ­ದಲ್ಲಿ ಸೋಮವಾರ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಗ್ರಾಮದ ಹಮೀದ್ ಸ್ಟೋರ್ ಮೇಲೆ ದಾಳಿ ನಡೆಸಿದ ತಹಶೀಲ್ದಾರ್ ಅವರು, ಅಕ್ರಮ­ವಾಗಿ ಸಂಗ್ರಹಿಸಿಟ್ಟಿದ್ದ 440 ಲೀಟರ್ ಸೀಮೆಎಣ್ಣೆ, 30 ಲೀಟರ್ ಪೆಟ್ರೋಲ್, 20 ಲೀಟರ್ ಡೀಸೆಲ್ ಹಾಗೂ 5 ಲೀಟರ್ ಆಯಿಲ್, 6 ಕ್ವಿಂಟಾಲ್ ಅಕ್ಕಿ, ಒಂದೂವರೆ ಕ್ವಿಂಟಾಲ್ ಗೋಧಿಯನ್ನು ವಶಪಡಿಸಿಕೊಂಡಿದ್ದಾರೆ.

ಅಂಗಡಿ ಮಾಲೀಕ ಹಮೀದ್ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಗತ್ಯವಸ್ತುಗಳ ಅಕ್ರಮ ದಾಸ್ತಾನು ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಪ್ರತಿರೋಧ ವ್ಯಕ್ತಪಡಿಸಿದ ಮತ್ತೊಬ್ಬ ಅಂಗಡಿ ಮಾಲೀಕ ಪೀರ್ ಎಂಬಾತನ ಮೇಲೆ ಕ್ರಮ ಜರುಗಿಸಲು ಆಹಾರ ಇಲಾಖಾ ಅಧಿಕಾರಿಗಳು ಮುಂದಾ­ಗಿದ್ದಾರೆ. ದಾಳಿಯಲ್ಲಿ ಆಹಾರ ನಿರೀಕ್ಷಕ ಮಲ್ಲಿಕಾರ್ಜುನ್, ರಮೇಶ್, ಎಸೈ ವೆಂಕಟೇಶ್ ಪಾಲ್ಗೊಂಡಿದ್ದರು.

ಇಂದು ಕೃಷಿ ವಸ್ತು ಪ್ರದರ್ಶನ
ರಾಮನಗರ:
ಬೆಂಗಳೂರಿನ ಕೃಷಿ ವಿಶ್ವವಿ­ದ್ಯಾನಿಲಯ, ಕೈಲಾಂಚದ ರೈತ ಸಂಪರ್ಕ ಕೇಂದ್ರ ಮಂಗಳವಾರ ನಾಗೋನಹಳ್ಳಿ­ಯಲ್ಲಿ ರೈತರ ತರಬೇತಿ ಮತ್ತು ಗ್ರಾಮೀ­ಣ ಕೃಷಿ ವಸ್ತು ಪ್ರದರ್ಶನ ಆಯೋಜಿ­ಸಿವೆ. ಅಂದು ಬೆಳಿಗ್ಗೆ 10.30 ಗಂಟೆಗೆ ಸಂಸದ ಡಿ.ಕೆ.ಸುರೇಶ್‌ ಅವರು ಕಾರ್ಯ­ಕ್ರಮ ಉದ್ಘಾಟಿಸುವರು. ಕೆಎಂಎಫ್‌ ಅಧ್ಯಕ್ಷ ಪಿ.ನಾಗರಾಜು, ಗ್ರಾ,ಪಂ ಅಧ್ಯಕ್ಷ ಪುಷ್ಪ, ಉಪ ವಿಭಾಗಾಧಿಕಾರಿ ಡಾ. ಎಂ.ಎನ್.ರಾಜೇಂದ್ರ ಪ್ರಸಾದ್, ಜಿ.ಪಂ. ಅಧ್ಯಕ್ಷ ಇಕ್ಬಾಲ್ ಹುಸೇನ್, ವಿಸ್ತರಣಾ ನಿರ್ದೇಶಕ ಡಾ. ಎನ್. ನಾಗರಾಜು, ಮಾಜಿ ಶಾಸಕ ಕೆ. ರಾಜು, ಸಹಾಯಕ ಕೃಷಿ ನಿರ್ದೇಶಕ ಎನ್.ಎಲ್.ನಾಗ­ರಾಜಯ್ಯ ಭಾಗವಹಿಸುವರು.

25ರಿಂದ ಶರನ್ನವರಾತ್ರಿ ಮಹೋತ್ಸವ
ಮಾಗಡಿ: 
 ಜಯನಾಮ ಸಂವ ತ್ಸರದ ಶ್ರೀದುರ್ಗಾ ಶರನ್ನವರಾತ್ರಿ ಮಹೋತ್ಸವ ಗುರುವಾರ (ಸೆ.25 ರಿಂದ ಅ.5)ರ ವರೆಗೆ ನಡೆಯಲಿದೆ ಎಂದು ಅರ್ಚಕ  ಲಕ್ಷ್ಮೀನರ ಸಿಂಹಾಚಾರ್ಯ ತಿಳಿಸಿದ್ದಾರೆ. ಗುರುವಾರ (ಸೆ.25)ರಂದು ಬೆಳಿಗ್ಗೆ ಮಹಾ ಗಣಪತಿ ಪೂಜಾ ಪುಣ್ಯಾಹ ವಾಚನ, ಧ್ವಜಾ ರೋಹಣ, ಕಲಶ ಸ್ಥಾಪನೆ ಮತ್ತು ಅಗ್ನಿ ಪ್ರತಿಷ್ಠೆ ನಡೆಯಲಿದೆ. ಸಂಜೆ ಅರಿಶಿನ ಕುಂಕುಮ ಅಲಂಕಾರ ಏರ್ಪಡಿಸಲಾಗಿದೆ.

ಸೆ.26ರಂದು ಸಂಜೆ ಮಹಾಲಕ್ಷ್ಮೀ ಅಲಂಕಾರ, ಸೆ.27ರಂದು ವಾರಾಹಿ ಅಲಂಕಾರ, ಸೆ.28 ರಂದು ಶ್ರೀ ಮಹಾಗೌರಿ, ಸೆ.29 ರಂದು ಶ್ರೀ ಪಾರ್ವತಿ, ಸೇ.30 ರಂದು ಶ್ರೀ ಮಹಾರಾಜ್ಞಿ, ಅ.1ರಂದು ಶ್ರೀ ವಾಗೀಶ್ವರಿ ಅಲಂಕಾರ ಏರ್ಪಡಿಸ­ಲಾಗುವುದು ಎಂದು ಅರ್ಚಕ ಶ್ರೀ ಕೃಷ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT