ADVERTISEMENT

ಅರ್ಕಾವತಿ ಜೊತೆ ಕೊಳಚೆ ನೀರು ಮಿಶ್ರಿತ !

ಕೈಲಾಂಚ ಭಾಗಕ್ಕೆ ಹರಿಯುತ್ತಿದೆ ಕಲುಷಿತ ಜೀವ ಜಲ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 8:53 IST
Last Updated 24 ಮಾರ್ಚ್ 2017, 8:53 IST
ರಾಮನಗರದ ಐಜೂರು ಪ್ರದೇಶದ ಕೊಳಚೆ ನೀರು ಕೈಗಾರಿಕಾ ಪ್ರದೇಶದ ಬಳಿ ನದಿಗೆ ಹರಿದಿರುವುದು.
ರಾಮನಗರದ ಐಜೂರು ಪ್ರದೇಶದ ಕೊಳಚೆ ನೀರು ಕೈಗಾರಿಕಾ ಪ್ರದೇಶದ ಬಳಿ ನದಿಗೆ ಹರಿದಿರುವುದು.   

ರಾಮನಗರ: ಮಂಚನಬೆಲೆ ಜಲಾಶಯದ ಗೇಟಿನಿಂದ ಬಿಡುಗಡೆಯಾಗಿ ಅರ್ಕಾವತಿ ನದಿಯುದ್ದಕ್ಕೂ ಹರಿಯುತ್ತಿರುವ ನೀರು ಜಿಲ್ಲೆಯ ಜನರ ಮುಖದಲ್ಲಿ ಮಂದಹಾಸ ತಂದಿದೆ.

ಜನ–ಜಾನುವಾರುಗಳ ಬಳಕೆಗಾಗಿ ಇದನ್ನು ವಿನಿಯೋಗಿಸಲಾಗುತ್ತಿದೆ. ಆದರೆ ನದಿಗೆ ಸೇರುತ್ತಿರುವ ಕಶ್ಮಲಗಳನ್ನು ಕಂಡರೆ ಜನ ಇದರ ಬಳಕೆಗೆ ಹಿಂದೇಟು ಹಾಕುವುದು ಖಚಿತ.

ರಾಮನಗರದ ವ್ಯಾಪ್ತಿಯಲ್ಲಿ ಚರಂಡಿ ನೀರನ್ನು ನದಿಗೆ ಹರಿಸುವ ಕಾರ್ಯವು ಇನ್ನೂ ನಿಂತಿಲ್ಲ. ಹೀಗಾಗಿ ನದಿಯ ನೀರಿನ ಜೊತೆಜೊತೆಗೆ ಇಲ್ಲಿನ ಸಕಲ ತ್ಯಾಜ್ಯವೂ ಅರ್ಕಾವತಿಯ ಒಡಲು ಸೇರಿಕೊಂಡು ಮುಂದುವರಿಯುತ್ತಲಿದೆ. ಅರ್ಕಾವತಿ ಬಡಾವಣೆಯ ಸೇತುವೆಯ ಬಳಿ, ಕೈಗಾರಿಕಾ ಪ್ರದೇಶದ ಹಿಂಭಾಗ, ಸಾಯಿಬಾಬಾ ದೇವಸ್ಥಾನ ಹಿಂಭಾಗ, ಸ್ಮಶಾನದ ಆಸುಪಾಸು... ಹೀಗೆ ಹತ್ತಾರು ಕಡೆ ಇಂದಿಗೂ ಚರಂಡಿ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಕುಡಿಯಲು ಯೋಗ್ಯವಲ್ಲ: ನಂದಿಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯು ಅಲ್ಲಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ದಾಟಿ ಮಾಗಡಿ ಮಾರ್ಗವಾಗಿ ರಾಮನಗರದಲ್ಲಿ ಹರಿದು, ಕನಕಪುರದ ಸಂಗಮದ ಬಳಿ ಕಾವೇರಿಯಲ್ಲಿ ವಿಲೀನಗೊಳ್ಳುತ್ತದೆ. ಈ ನಡುವೆ ವಿವಿಧ ಹಂತಗಳಲ್ಲಿ ಈ ನದಿಯ ನೀರು ಕಲುಷಿತಗೊಂಡಿದ್ದು, ಕುಡಿಯಲು ಹಾಗೂ ದಿನಬಳಕೆಗೂ ಯೋಗ್ಯವಲ್ಲ ಎಂಬ ಪರಿಸ್ಥಿತಿ ತಲುಪಿ ದಶಕವಾಗುತ್ತಿದೆ.

ಬೆಂಗಳೂರಿನ ಹೊಲಸು ತುಂಬಿಕೊಂಡಿರುವ ತಿಪ್ಪಗೊಂಡನಹಳ್ಳಿ ಜಲಾಶಯದ ನೀರನ್ನು ಮಂಚನಬೆಲೆ ಜಲಾಶಯಕ್ಕೆ ಹರಿಸುತ್ತಿರುವ ಕಾರಣ ಇಡೀ ನದಿಯ ನೀರು ಕಲುಷಿತಗೊಂಡಿದೆ. ಹೀಗಾಗಿ ಕಪ್ಪುಮಿಶ್ರಿತ ಬಣ್ಣದ ನೀರು ಜಲಾಶಯದಿಂದ ಹೊರ ಬರುತ್ತಿದೆ.

ಅಲ್ಲಿಂದ ಹೇಗೂ ರಾಮನಗರಕ್ಕೆ ಬಂದರೆ ಇಲ್ಲಿ ನಗರದ ಅರ್ಧ ಭಾಗದಷ್ಟು ಚರಂಡಿ ನೀರು ನದಿ ಸೇರಿ ಎಲ್ಲವೂ ಮಿಶ್ರಿತಗೊಂಡು ಮುಂದೆ ಸಾಗುತ್ತಿದೆ. ಇದ್ಯಾವುದರ ಅರಿವೆಯೂ ಇಲ್ಲದ ಕೆಲವರು ಇದರಲ್ಲಿಯೇ ಈಜುವುದು, ಬಟ್ಟೆ ತೊಳೆಯುವುದು ಮೊದಲಾದ ಕಾರ್ಯಗಳ ಮೂಲಕ ನದಿಯಲ್ಲಿ ನೀರು ಹರಿದಿದ್ದಕ್ಕೆ ಸಂಭ್ರಮಿಸತೊಡಗಿದ್ದಾರೆ.

ಹಳ್ಳ ಹಿಡಿದ ಯೋಜನೆ: ರಾಮನಗರದ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಚರಂಡಿ ನೀರನ್ನು ಸಂಸ್ಕರಿಸಿ ಅನ್ಯ ಉದ್ದೇಶಕ್ಕೆ ಬಳಸುವ ಸಲುವಾಗಿ ರಾಮನಗರದ ಹೊರವಲಯದಲ್ಲಿ ಶುದ್ಧೀಕರಣ ಘಟಕ ನಿರ್ಮಾಣವಾಗಿದ್ದರೂ ಜಲಮಂಡಳಿ ಅಧಿಕಾರಿಗಳ ಬೇಜವಾಬ್ದಾರಿ ತನದಿಂದಾಗಿ ಇಡೀ ಯೋಜನೆಯೇ ಹಳ್ಳ ಹಿಡಿದಿದೆ. ನದಿಗೆ ನೀರು ಬಿಡಬಾರದು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನೇಕ ಬಾರಿ ಇಲ್ಲಿನ ಜಲಮಂಡಳಿ ಹಾಗೂ ನಗರಸಭೆಗೆ ಎಚ್ಚರಿಕೆಯನ್ನೂ ನೀಡಿದೆ.

ಈ ನಿಟ್ಟಿನಲ್ಲಿ ನಗರದಲ್ಲಿನ ಒಳಚರಂಡಿ ವ್ಯವಸ್ಥೆಯ ಸುಧಾರಣೆ ಜೊತೆಗೆ ಚರಂಡಿ ನೀರು ಶುದ್ಧಿಕರಣ ಘಟಕಕ್ಕೆ ಕಾಯಕಲ್ಪ ನೀಡಲು ನಗರಸಭೆ ಮುಂದಾಗಿತ್ತಾದರೂ ಆಯೋಜನೆಯ ಕಾಮಗಾರಿ ಸದ್ಯ ಆರಂಭಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಚರಂಡಿ ನೀರು ನದಿಗೆ ಸೇರುವುದು ಇನ್ನೂ ತಪ್ಪಿಲ್ಲ.

ಈ ನಡುವೆ ನಗರಸಭೆಯು ಕೊತ್ತೀಪುರ ಬಳಿ ನದಿಯ ದಡದಲ್ಲಿಯೇ ಕಸ ವಿಲೇವಾರಿ ಕಾರ್ಯದಲ್ಲಿ ತೊಡಗಿಕೊಂಡಿದ್ದು ಆ ಕಸವೂ ನೀರಿನೊಂದಿಗೆ ಸೇರಿ ಹರಿಯಲು ಆರಂಭಿಸಿದೆ.

ಬಳಸಿದರೆ ಸಮಸ್ಯೆ ಏನು?:  ‘ಚರಂಡಿ ನೀರು ಮಿಶ್ರಿತ ನದಿ ನೀರು ಬಳಕೆಯಿಂದ ಹಲವಾರು ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇವೆ. ನೀರನ್ನು ಸ್ಪರ್ಶಿಸುವುದರಿಂದ ಇಲ್ಲವೇ ಅದರಲ್ಲಿನಿಂತುಕೊಳ್ಳುವುದರಿಂದ ಅಲರ್ಜಿ ಸಹಿತ ಚರ್ಮ ಸಂಬಂಧಿ ಸಮಸ್ಯೆಗಳು ಹೆಚ್ಚಾಗಬಹುದು.

ನೀರನ್ನು ಕುಡಿದ ಪಕ್ಷದಲ್ಲಿ ವಾಂತಿ–ಭೇದಿ ಆಗಬಹುದು. ಜಾನುವಾರುಗಳಿಗೂ ಸಹ ಇಂತಹ ನೀರನ್ನು ಕುಡಿಸುವುದು ಸೂಕ್ತವಲ್ಲ’ ಎಂದು ಸಲಹೆ ನೀಡುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ್‌ ಹೆಡೆ.

ನಗರದ ಮಂದಿಗೂ ಇದೇ ನೀರು ಗತಿ!
ನಗರ ಪ್ರದೇಶದ ಜನರ ಅಗತ್ಯ ಪೂರೈಸುವ ಸಲುವಾಗಿ ಕಳೆದ ಬೇಸಿಗೆ ಅವಧಿಯಲ್ಲಿ ಮಂಚನಬೆಲೆ ಜಲಾಶಯದಿಂದ ಅರ್ಕಾವತಿ ನದಿಗೆ ನೀರು ಬಿಡುಗಡೆ ಮಾಡಲಾಗಿತ್ತು. ಏಪ್ರಿಲ್‌ನಿಂದ ಜೂನ್‌ವರೆಗೆ ಹೀಗೆ ಸುಮಾರು 150 ಎಂಸಿಎಫ್‌ಟಿಯಷ್ಟು ನೀರು ರಾಮನಗರಕ್ಕೆ

ADVERTISEMENT

ಹರಿದಿತ್ತು. ದೇವರಸೇಗೌಡನ ದೊಡ್ಡಿ ಬಳಿ ಜಲಮಂಡಳಿಯು ನದಿಗೆ ಅಡ್ಡಲಾಗಿ ಬಂಡುಗಳನ್ನು ಹಾಕಿ ನೀರು ಸಂಗ್ರಹಿಸಿ ಅದನ್ನು ರಾಮನಗರದ 1ರಿಂದ 10ನೇ ವಾರ್ಡ್‌ವರೆಗೆ ಪೂರೈಕೆ ಮಾಡಿತ್ತು.

ಆದರೆ ನೀರು ಕಲುಷಿತಗೊಂಡಿರುವ ಕಾರಣ ಕುಡಿಯುವ ಸಲುವಾಗಿ ಇದನ್ನು ಬಳಸದಂತೆ ಜಲಮಂಡಳಿಯು ಮನವಿ ಮಾಡಿತ್ತು. ಈ ಬಾರಿ ಸಹ ನೀರಿನ ಕೊರತೆ ಎದುರಾದಲ್ಲಿ ಇದೇ ಕಲುಷಿತ ನೀರಿನ ಬಳಕೆಯು ಅನಿವಾರ್ಯವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.