ADVERTISEMENT

ಆದಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮ–ಡಿಸಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 8:47 IST
Last Updated 8 ಫೆಬ್ರುವರಿ 2017, 8:47 IST

ರಾಮನಗರ: ‘ಜಿಲ್ಲೆಯಲ್ಲಿ ವಾಸಿಸುತ್ತಿರುವ ಅರ್ಹ ಆದಿವಾಸಿ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ’ ಎಂದು ಜಿಲ್ಲಾಧಿಕಾರಿ ಡಾ.ಬಿ.ಆರ್. ಮಮತಾ ತಿಳಿಸಿದರು. 

ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಸಮತಾ ಸೈನಿಕ ದಳದ ಪದಾಧಿಕಾರಿಗಳಿಂದ ಮಂಗಳವಾರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
‘ಈಗಾಗಲೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಅರ್ಹ ಆದಿವಾಸಿ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ’ ಎಂದರು.

‘ಕನಕಪುರ ತಾಲ್ಲೂಕಿನ ಮರಳವಾಡಿ ಹೋಬಳಿ ಬುಡಗಯ್ಯನದೊಡ್ಡಿಯಲ್ಲಿ ಅರಣ್ಯ ಹಕ್ಕು ಕಾಯ್ದೆಯಂತೆ ಅರ್ಜಿ ಸಲ್ಲಿಸಿರುವವರಿಗೆ ಇದೇ 13ರಂದು ಕನಕಪುರದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.

ಈ ಸಭೆಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಈಗಾಗಲೆ ಸರ್ವೆ ಕಾರ್ಯ ನಡೆಯುತ್ತಿದೆ’ ಎಂದು ಅವರು ತಿಳಿಸಿದರು. ‘ಸರ್ಕಾರದ ವತಿಯಿಂದ ಆದಿವಾಸಿಗಳಿಗೆ ಇರುವ ಯೋಜನೆಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾಡಳಿತ, ಅರಣ್ಯ ಇಲಾಖೆ, ಸರ್ವೇ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ.

ಆದಿವಾಸಿ ಕುಟುಂಬಗಳು ಯಾವುದೆ ರೀತಿಯ ಗೊಂದಲಕ್ಕೆ ಒಳಗಾಗಬಾರದು’ ಎಂದು ಅವರು ಮನವಿ ಮಾಡಿದರು. ‘ಅರ್ಹರಿಗೆ ಹಕ್ಕು ಪತ್ರ ಕೊಡುತ್ತೇವೆ, ಕಾಡಿನಲ್ಲಿ ಕುಳಿತು ಪ್ರತಿಭಟಿಸಿದರೆ ಸಮಸ್ಯೆ ಬಗೆಹರಿಯುವುದೇ’ ಎಂದು ಪ್ರಶ್ನಿಸಿದರು.

ಮನವಿ: 2006ರ ಅರಣ್ಯ ಕಾಯ್ದೆ ಪ್ರಕಾರ ಹಕ್ಕು ಪತ್ರಕ್ಕೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಆದಿವಾಸಿಗಳಿಗೆ ಜಿಲ್ಲಾಡಳಿತ ಸ್ಪಂದಿಸಬೇಕು.
ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಜನರಿಗೆ 2006ರ ಅರಣ್ಯ ಕಾಯಿದೆ ಪ್ರಕಾರ ಹಕ್ಕು ಪತ್ರ ನೀಡಬೇಕು ಎಂದು ಪದಾಧಿಕಾರಿಗಳು ಮನವಿ ಮಾಡಿದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಶಿವಕುಮಾರಸ್ವಾಮಿ, ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ. ಗೋವಿಂದಯ್ಯ, ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ಗುರುಮಲ್ಲಯ್ಯ, ಗೋವಿಂದ್ ಕೆಬ್ಬೆದೊಡ್ಡಿ, ಕಾಳರಾಜು, ಪುಟ್ಟಲಿಂಗಯ್ಯ, ಹೇಮಂತ್ ಬೈರಮಂಗಲ, ಸೋಮಶೇಖರ್, ತಮಟೆ ಗುಂಡ, ರಾಮಕೃಷ್ಣಪ್ಪ. ಬೈರಾಜು ಕೋಟೆ, ಕಾಳರಾಜು, ದಲಿತ ಮುಖಂಡರಾದ ಕೆ.ಸೋಮಸುಂದರ್‌ ಮೂರ್ತಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.