ADVERTISEMENT

ಇಂದಿನಿಂದ ಸಂಭ್ರಮದ ‘ಕನಕೋತ್ಸವ’ಆರಂಭ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 11:47 IST
Last Updated 11 ಜನವರಿ 2017, 11:47 IST
‘ಕನಕೋತ್ಸವ’ ಕಾರ್ಯಕ್ರಮದ ಅಂತಿಮ ತಯಾರಿ
‘ಕನಕೋತ್ಸವ’ ಕಾರ್ಯಕ್ರಮದ ಅಂತಿಮ ತಯಾರಿ   

ಕನಕಪುರ:  ತಾಲ್ಲೂಕಿನ ಜಾತ್ರೆಯೆಂದೇ ಬಿಂಬಿತವಾಗಿರುವ 5 ದಿನಗಳ ಕನಕೋತ್ಸವ 2017ರ ಕಾರ್ಯಕ್ರಮವು ಜನವರಿ 11ರಂದು ಪ್ರಾರಂಭಗೊಳ್ಳಲಿದೆ. ತಾಲ್ಲೂಕಿನ ಮೂರು ಮಠಗಳ ಮಠಾಧೀಶರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಡಿ.ಕೆ.ಎಸ್‌.ಚಾರಿಟೆಬಲ್‌ ಇನ್‌ಸ್ಟಿಟ್ಯೂಟ್‌ ಟ್ರಸ್ಟ್‌್ ಮೂಲಕ ಜಿಲ್ಲಾ ಮಟ್ಟದ ಕಾರ್ಯಕ್ರಮವಾಗಿ ತಾಲ್ಲೂಕಿನಲ್ಲಿ ಆಯೋಜಿಸಿದ್ದಾರೆ. ತಾಲ್ಲೂಕು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.

15ರ ನಿರಂತರ ಕಾರ್ಯಕ್ರಮಗಳೊಂದಿಗೆ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಆಡಳಿತವನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದು ಸರ್ಕಾರದ ಎಲ್ಲಾ ಇಲಾಖೆಗಳಿಗೂ ಜವಾಬ್ದಾರಿ ಕೊಟ್ಟಿದ್ದಾರೆ.

ವಿವಿಧ ಇಲಾಖೆಗಳ ವಸ್ತುಪ್ರದರ್ಶನ ಮಳಿಗೆ ಇಲ್ಲಿದ್ದು, ಇಲಾಖೆಯ ಸವಲತ್ತು, ಯೋಜನೆ ಮತ್ತು ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಿದ್ದಾರೆ. ಇದು ಮನರಂಜನೆ ಜತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದ್ದು, ರೈತ ಸಮ್ಮೇಳನ, ಜಾನಪದ ಸಾಂಸ್ಕೃತಿಕ ಸೌರಭ, ಕ್ರೀಡಾಸ್ಪರ್ಧೆ, ಯೋಗಾಸನ, ಪ್ರವಚನ, ಪ್ರತಿಭಾ ಪುರಸ್ಕಾರ, ನಗಸಂಜೆ, ರಸಮಂಜರಿ ಸೇರಿದಂತೆ ಕ್ರೀಡಾಸ್ಪರ್ಧೆ ಕಾರ್ಯಕ್ರಮಗಳಿವೆ. ಸಾಧಕ ಗಣ್ಯರು, ಗುರೂಜಿಗಳು, ಪ್ರವಚನಕಾರರು, ಸಿನಿಮಾ ತಾರೆಗಳು, ಹಾಸ್ಯ ಕಲಾವಿದರು, ಕವಿಗಳು, ಕ್ರೀಡಾಪಟುಗಳು, ಖ್ಯಾತ ಗಾಯಕರು, ಕುಸ್ತಿಪಟುಗಳು, ಸಿನಿ ತಾರೆಯರು ಪಾಲ್ಗೊಂಡು ಜನರನ್ನು ರಂಜಿಸಲಿದ್ದಾರೆ.

ಪ್ರಮುಖ ಬೀದಿಗಳ ಉದ್ದಕ್ಕೂ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ತಾಲ್ಲೂಕು ಕ್ರೀಡಾಂಗಣದಲ್ಲಿ ಬೃಹತ್‌ ವೇದಿಕೆ ನಿರ್ಮಿಸಿ ಸುತ್ತಲೂ ಕಾರ್ಯಕ್ರಮ ನಡೆಸಲು ಸಿದ್ಧಗೊಳಿಸಲಾಗಿದೆ. ವಿದ್ಯಾರ್ಥಿಗಳು, ಮಹಿಳೆಯರು, ಕ್ರೀಡಾಸಕ್ತರು, ಪುರುಷರು, ದಂಪತಿ, ಜಾನುವಾರು ಮಾಲೀಕರು ಸೇರಿದಂತೆ ಎಲ್ಲರನ್ನು ಉತ್ತೇಜಿಸುವ ಕಾರಣದಿಂದ ಜಿಲ್ಲಾ ಮಟ್ಟದ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಜನರು ಸಂಖ್ಯೆಯಲ್ಲಿ ಬಂದು ಪಂದ್ಯಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್ ಮನವಿ ಮಾಡಿದ್ದಾರೆ.

ಪ್ರತಿಭಾ ಪುರಸ್ಕಾರ
ಶನಿವಾರ:  ಬೆಳಿಗ್ಗೆ ಭಜನೆ, ಯೋಗಾಸನ, ಡಾ.ಆನಂದ ಗುರೂಜಿ ಪ್ರವಚನ. ಬೆಳಿಗ್ಗೆ 10ರಿಂದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನಡೆಯಲಿದೆ.

ಸಂಜೆ 4.30ರಿಂದ ತಾಲ್ಲೂಕು ಮಟ್ಟದಲ್ಲಿ ದಂಪತಿಗೆ ಭಾರತೀಯ ಸಾಂಪ್ರದಾಯಿಕ ಉಡುಗೆ–ತೊಡುಗೆ ಪ್ರದರ್ಶನ ಸ್ಪರ್ಧೆ. 6.30ರಿಂದ ಡ್ಯಾನ್ಸಿಂಗ್‌ ತಂಡಗಳಿಂದ ನೃತ್ಯ, ಹಿನ್ನೆಲೆ ಗಾಯಕ ನವೀನ್‌ಸಜ್ಜು ಮತ್ತು ಚಂದನ್‌ಶೆಟ್ಟಿ ಯವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ.

ಯೋಗ, ಪ್ರವಚನ
ಶುಕ್ರವಾರ: ಬೆಳಿಗ್ಗೆ ಭಜನೆ, ಯೋಗಾಸನ, ರವಿಶಂಕರ್‌ ಗುರೂಜಿಯವರಿಂದ ಪ್ರವಚನವಿದೆ. 9ರಿಂದ ರೈತ ಸಮ್ಮೇಳನ. 10ರಿಂದ  ರಾಸುಗಳು ಹಾಗೂ ಶ್ವಾನ ಪ್ರದರ್ಶನವಿದೆ. ಶ್ವಾನಗಳ ರ್‍ಯಾಂಪ್‌ ಷೋ, ಜೋಡಿ ಎತ್ತುಗಳು, ಉತ್ತಮ ಬಿತ್ತನೆ ಹೋರಿ, ಉತ್ತಮ ಓತ, ಉತ್ತಮ ಟಗರು ವಿಭಾಗವಿದೆ.  ಸಂಜೆ4.30ರಿಂದ ತಾಲ್ಲೂಕು ಮಟ್ಟದ ಕೇಶ ವಿನ್ಯಾಸ ಸ್ಪರ್ಧೆ, 6.30 ರಿಂದ 11 ಡ್ರಾಮಾ ಜೂನಿಯರ್‌್ಸ ತಂಡ, ಮಿಮಿಕ್ರಿ ದಯಾನಂದ್‌ ತಂಡ, ಮಜಾ ಟಾಕೀಸ್‌ ಮಂಡ್ಯ ರಮೇಶ್‌ ತಂಡದಿಂದ ನಗೆಸಂಜೆ ಕಾರ್ಯಕ್ರಮವಿದೆ.

ಕಾರ್ಯಕ್ರಮಗಳ ವಿವರ
ಬುಧವಾರ: ಬೆಳಿಗ್ಗೆ 5 ರಿಂದ 5.30 ಭಜನೆ, ಬಳಿಕ ಯೋಗಗುರು ವಿದ್ಯಾಶ್ರೀ ಚನ್ನಬಸವಣ್ಣರವರಿಂದ ಯೋಗಾಸನ , 7 ರಿಂದ ಪ್ರವಚನ: ದೇಗುಲಮಠ ಮುಮ್ಮಡಿ ನಿರ್ವಾಣಸ್ವಾಮಿ, ಮರಳೇಗವಿ ಮುಮ್ಮಡಿ ಶಿವರುದ್ರಸ್ವಾಮಿ, ಶಿವಗಿರಿ ಅನ್ನದಾನೇಶ್ವರನಾಥಸ್ವಾಮಿ.

ರಂಗೋಲಿ ಬಿಡಿಸುವ ಸ್ಪರ್ಧೆ: ಬೆಳಿಗ್ಗೆ 7.30 ರಿಂದ ಸ್ಥಳದಲ್ಲೇ ರಂಗೋಲಿ ಬಿಡಿಸುವ ಸ್ಪರ್ಧೆ. ಬೆಳಿಗ್ಗೆ 9ರಿಂದ ಸ್ಥಳದಲ್ಲೇ ಚಿತ್ರಬಿಡಿಸುವ ಸ್ಪರ್ಧೆ ನಡೆಯಲಿದೆ.
ಬೆಳಿಗ್ಗೆ 10.30 ರಿಂದ ಸಂಜೆ 6ರ ವರಗೆ ವಾಯ್ಸ್‌ ಆಫ್‌ ಕನಕೋತ್ಸವ–2017 ಕಾರ್ಯಕ್ರಮ ನಡೆಯಲಿದೆ. ಸಂಜೆ 6–30 ರಿಂದ ಕನಕಪುರ ತಾಲ್ಲೂಕು ಮಟ್ಟದ ವೇಷಭೂಷಣ ಸ್ಪರ್ಧೆ ಇದೆ.

ಸಾಂಸ್ಕೃತಿಕ ಮೇಳ
ಗುರುವಾರ: ಬೆಳಿಗ್ಗೆ ಭಜನೆ, ಬಳಿಕ ಯೋಗಾಸನ. 7ರಿಂದ ನರೇಂದ್ರಶರ್ಮ (ಬ್ರಹ್ಮಾಂಡ ಗುರೂಜಿ)  ಪ್ರವಚನ. 8.30ರಿಂದ ವರೆಗೆ ಓಟದ ಸ್ಪರ್ಧೆ, 9 ರಿಂದ ಜಾನಪದ, ಸಾಂಸ್ಕೃತಿಕ, ಕಲಾಮೇಳದ ಸ್ಪರ್ಧೆಗಳು ಕುಣಿತ ಮತ್ತು ವಾದ್ಯಮೇಳಗಳ ಸ್ಪರ್ಧೆ.  ಪೂಜಾ ಕುಣಿತ, ಪಟ್ಟದ ಕುಣಿತ, ತಮಟೆ ನಗಾರಿ ವಾದ್ಯಮೇಳ, ಡೊಳ್ಳುಕುಣಿತ, ವಾದ್ಯ, ಬ್ಯಾಂಡ್‌ಸೆಟ್‌್.

ADVERTISEMENT

9 ರಿಂದ ಸಂಜೆ 5 ಗಂಟೆವರೆಗೆ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯ ಮಹಿಳಾ ವಿಭಾಗ, ಪುರುಷ ವಿಭಾಗದಲ್ಲಿ ನಡೆಯಲಿದೆ.  ಬೆಳಿಗ್ಗೆ 10 ರಿಂದ ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮತ್ತು ಚರ್ಚಾಸ್ಪರ್ಧೆ ಇದೆ.
ಮಧ್ಯಾಹ್ನ 3 ರಿಂದ ಜಾನಪದ, ದೇಶಭಕ್ತಿ ಹಾಡುಗಳಿಗೆ ಸಮೂಹ ನೃತ್ಯ  ಸ್ಪರ್ಧೆ, ಸಂಜೆ 7ರಿಂದ ಚಲನಚಿತ್ರ ಗೀತೆಗಳಿಗೆ ಸಮೂಹ ನೃತ್ಯ ಸ್ಪರ್ಧೆ 16 ವರ್ಷದ ಒಳಗಿನ ಮತ್ತು ಮೇಲ್ಪಟ್ಟವರಿಗೆ ನಡೆಯಲಿದೆ.

ರಸಮಂಜರಿ ಕಾರ್ಯಕ್ರಮ
15ರ ಭಾನುವಾರ:  ಬೆಳಿಗ್ಗೆ ಭಜನೆ, ಯೋಗಾಸನ, 7 ರಿಂದ ಶ್ರೀ ರವಿಶಂಕರ್‌ ಗುರೂಜಿ ಅವರಿಂದ ಪ್ರವಚನ.

9 ರಿಂದ ಡರ್ಟ್‌ ಟ್ರ್ಟಾಕ್‌್ ಮೋಟಾರ್‌ ಬೈಕ್‌ ಸ್ಪರ್ಧೆ ಇದೆ. ಬೆಂಗಳೂರು ರಸ್ತೆಯ ವರಗೇರಹಳ್ಳಿ ಗೇಟ್‌ ಬಳಿ. ಬೆಳಿಗ್ಗೆ 9 ರಿಂದ ರಾಜ್ಯ ಮಟ್ಟದ ಆಹ್ವಾನಿತ ಕುಸ್ತಿ ಪಂದ್ಯಗಳು, ಮಹಿಳಾ ಕುಸ್ತಿ–5ಜೊತೆ, ಮಾರ್ಪಿಟ್‌ಕುಸ್ತಿ–5ಜೊತೆ, ಸ್ಥಳೀಯಕುಸ್ತಿ–25 ಜೊತೆಯಾಟದಲ್ಲಿ ನಡೆಯಲಿವೆ.

ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ವಿದೇಶಿ ಥಾಯ್‌ಲ್ಯಾಂಡ್‌, ಆಫ್ರಿಕಾ, ರಷ್ಯಾ ದೇಶದ ಅಂತರ ರಾಷ್ಟ್ರೀಯ ಖ್ಯಾತ ನೃತ್ಯ ಪಟುಗಳಿಂದ ಅಮೋಘ ನೃತ್ಯ ಕಾರ್ಯಕ್ರಮ, ಸಂಗೀತ ನಿರ್ದೇಶಕ ಗುರುಕಿರಣ್‌ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.