ADVERTISEMENT

ಎ.ಮಂಜುನಾಥ್‌ ಕೈ ಹಿಡಿದ ಜೆಡಿಎಸ್‌ ಪರ ಅಲೆ

ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆ ಅಂತರದ ಗೆಲುವು ಸಾಧನೆ

​ಪ್ರಜಾವಾಣಿ ವಾರ್ತೆ
Published 16 ಮೇ 2018, 9:45 IST
Last Updated 16 ಮೇ 2018, 9:45 IST

ರಾಮನಗರ: ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿನ ನಿರೀಕ್ಷೆ ಇತ್ತಾದರೂ ಈ ಪರಿಯ ಅಂತರದ ಗೆಲುವನ್ನು ಯಾರೂ ನಿರೀಕ್ಷಿಸಿರಲಿಲ್ಲ!

ಇಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎ.ಮಂಜುನಾಥ್‌ ಈ ಬಾರಿಯ ಚುನಾವಣೆಯಲ್ಲಿ ಬರೋಬ್ಬರಿ 51,425 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವಿಧಾನಸಭೆಯ ಮೆಟ್ಟಿಲು ತುಳಿಯುವ ಅವಕಾಶ ಪಡೆದಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ, ಐದನೇ ಬಾರಿ ವಿಧಾನಸೌಧದ ಮೆಟ್ಟಿಲು ಏರುವ ಆಸೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಕನಸು ನುಚ್ಚುನೂರಾಗಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಜುನಾಥ್ ಬಾಲಕೃಷ್ಣ ಎದುರು ಪರಾಭವಗೊಂಡಿದ್ದರು. ನಂತರದಲ್ಲಿ ಕುದೂರು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ
ಆಯ್ಕೆಯಾಗಿ ಅಧ್ಯಕ್ಷ ಹುದ್ದೆಗೆ ಪ್ರಯತ್ನಿಸಿದ್ದರು. ಆದರೆ ಡಿ.ಕೆ. ಶಿವಕುಮಾರ್ ಹಾಗೂ ಸಿ.ಪಿ. ಯೋಗೇಶ್ವರ್‌ ಅವರ ಹೊಂದಾಣಿಕೆ ರಾಜಕಾರಣದಿಂದಾಗಿ ಅವರಿಗೆ ಆ ಹುದ್ದೆಯೂ ಕೈತಪ್ಪಿತ್ತು. ಈ ಎಲ್ಲ ಬೆಳವಣಿಗೆಗಳು ಕ್ಷೇತ್ರದ ಜನರಲ್ಲಿ ಅವರ ಬಗ್ಗೆ ಅನುಕಂಪ ಮೂಡಿಸಿದ್ದು, ಅದೇ ಮತಗಳಾಗಿ ಪರಿವರ್ತನೆ ಆಗಿದೆ.

ADVERTISEMENT

ಕ್ಷೇತ್ರದಲ್ಲಿ ಹಿಂದಿನಿಂದಲೂ ಜೆಡಿಎಸ್ ಪರವಾದ ಅಲೆ ಇದೆ. ಅದರಲ್ಲೂ ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಜಾತಿ ಬಲವೂ ಇದೆ. ಈ ಎಲ್ಲವೂ ಮಂಜು ಗೆಲುವಿಗೆ ವರವಾಗಿ ಪರಿಣಮಿಸಿತು.

ಬಿಡದಿ, ಕೂಟಗಲ್‌ ಹಾಗೂ ಕುದೂರು ಹೋಬಳಿಗಳಲ್ಲಿ ಜೆಡಿಎಸ್‌ ಬಲಿಷ್ಠವಾಗಿದೆ. ಹೀಗಾಗಿ ಈ ಹೋಬಳಿಗಳಲ್ಲಿ ಜೆಡಿಎಸ್‌ ಹಾಗೂ ಮಿಕ್ಕ ಕಡೆ ಕಾಂಗ್ರೆಸ್‌ ಮುನ್ನಡೆ ಪಡೆಯಬಹುದು ಎನ್ನುವ ಲೆಕ್ಕಾಚಾರ ಇತ್ತು. ಆದರೆ 22 ಸುತ್ತಿನ ಮತ ಎಣಿಕೆಯಲ್ಲಿ ಮಂಜುನಾಥ್ ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡರು.

1994ರಲ್ಲಿ ಮೊದಲ ಬಾರಿಗೆ ಇಲ್ಲಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಚ್.ಸಿ. ಬಾಲಕೃಷ್ಣ ನಂತರದಲ್ಲಿ ಜೆಡಿಎಸ್ ಸೇರಿ ಮತ್ತೆ ಮೂರು ಬಾರಿ ಚುನಾಯಿತರಾಗಿದ್ದರು. ಆದರೆ ಕುಮಾರಸ್ವಾಮಿ ಜೊತೆಗಿನ ಮುನಿಸಿನಿಂದಾಗಿ ಕಾಂಗ್ರೆಸ್‌ಗೆ ವಲಸೆ ಹೋಗಿದ್ದರು. ಜನರು ಈ ಪಕ್ಷಾಂತರದ ವಿರುದ್ಧ ತೀರ್ಪು ಬರೆದಿದ್ದಾರೆ. ‘ಕಾಂಗ್ರೆಸ್‌ಗೆ ಹೋದ ಮೇಲೆ ಕ್ಷೇತ್ರದ ಅಭಿವೃದ್ಧಿಯಾಯಿತು’ ಎಂಬ ಅವರ ಮಾತನ್ನು ಮತದಾರರು ಒಪ್ಪಿದಂತೆ ಇಲ್ಲ.

ಮಾಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆ ಇತಿಹಾಸದಲ್ಲಿಯೇ ಇದು ದಾಖಲೆಯ ಅಂತರದ ಗೆಲುವು. ಸ್ವತಃ ಮಂಜುನಾಥ್ ಸಹಿತ ಅಲ್ಲ ಕಾರ್ಯಕರ್ತರಲ್ಲೂ ಈ ಫಲಿತಾಂಶ ಅಚ್ಚರಿ ಮೂಡಿಸಿದೆ. ಹೊಸ ಹುಮ್ಮಸ್ಸು ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.