ADVERTISEMENT

ಕನಕಪುರದಲ್ಲೂ ಮಹಿಳೆಯರಿಗಾಗಿ ಪ್ರತ್ಯೇಕ ಮತಗಟ್ಟೆ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 12 ಮೇ 2018, 7:18 IST
Last Updated 12 ಮೇ 2018, 7:18 IST

ಕನಕಪುರ: ಮತದಾನ ಯಶಸ್ವಿಗಾಗಿ ಸಕಲ ಸಿದ್ಧತೆ ಮಾಡಲಾಗಿದ್ದು, ಮಹಿಳಾ ಮತದಾರರನ್ನು ಆಕರ್ಷಿಸಲು ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 4 ಪಿಂಕ್‌ ಮತಗಟ್ಟೆ ಮತ್ತು 1 ಮಾದರಿ ಮತಗಟ್ಟೆ ಮಾಡಿರುವುದಾಗಿ ಸಹಾಯಕ ಚುನಾವಣಾಧಿಕಾರಿ ಇ.ಒ. ಶಿವರಾಮ್‌ ತಿಳಿಸಿದರು.

ಗುಲಾಬಿ ಬಣ್ಣ ಮಹಿಳೆಯರಿಗೆ ಅಚ್ಚುಮೆಚ್ಚು. ಎಲ್ಲಿ ಮಹಿಳೆಯರು ಹೆಚ್ಚಾಗಿರುತ್ತಾರೋ ಅಲ್ಲಿ ಪಿಂಕ್‌ ಮತಗಟ್ಟೆ ಮಾಡಲಾಗಿದೆ. ನಗರದ ಜಿ.ಟಿ.ಡಿ.ಸಿ.ಯಲ್ಲಿ 2, ಕೋಡಿಹಳ್ಳಿ ಹೋಬಳಿ ಹೊಸದೊಡ್ಡಿಯಲ್ಲಿ 1, ಕಸಬಾ ಹೋಬಳಿ ತುಂಗಣಿ ಪಂಚಾಯಿತಿಯ ಗೋಪಸಂದ್ರದಲ್ಲಿ 1 ಪಿಂಕ್‌ ಮತಗಟ್ಟೆಯನ್ನು ಮಾಡಲಾಗಿದೆ.

ಈ ಮತಗಟ್ಟೆಯಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಿಂಕ್‌ ಉಡುಪುಗಳೊಂದಿಗೆ ಮಹಿಳೆಯರೇ ಇರುತ್ತಾರೆ. ಅನಾರೋಗ್ಯ ಸಂಬಂಧ ತುರ್ತು ಸೇವೆಗೆ ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಬಾಣಂತಿ ತಾಯಂದಿರು ಬಂದರೆ ಅವರ ಮಕ್ಕಳನ್ನು ನೋಡಿಕೊಳ್ಳುವಂತ ವ್ಯವಸ್ಥೆ ಮಾಡಲಾಗಿದೆ ಎಂದರು.

ADVERTISEMENT

ನಗರದ ಮಾನಸ ಶಾಲೆಯಲ್ಲಿ ಮಾದರಿ ಮತಗಟ್ಟೆಯನ್ನು ಮಾಡಲಾಗಿದೆ. ಕ್ಷೇತ್ರದ 297 ಮತಗಟ್ಟೆಗಳಿಗಿಂತ ವಿಶೇಷವಾಗಿ ಈ ಮತಗಟ್ಟೆಯನ್ನು ನಿರ್ಮಾಣ ಮಾಡಿದ್ದು ಕ್ಷೇತ್ರಕ್ಕೆ ಮಾದರಿಯಾಗಿದೆ. ಅಂಗವಿಕಲರನ್ನು ಕರೆದುಕೊಂಡು ಬರಲು ವೀಲ್‌ಚೇರ್‌ ವ್ಯವಸ್ಥೆ ಮಾಡಲಾಗಿದೆ. ಕಣ್ಣಿನ ದೋಷ ಇರುವಂತವರಿಗೆ ಬೂದುಗನ್ನಡಿಯ ಅನುಕೂಲವಿರುತ್ತದೆ ಎಂದು ತಿಳಿಸಿದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಒಂದು ದೊಡ್ಡ ಹಬ್ಬವಾಗಿದೆ. ಪುರುಷರಿರಲಿ ಮಹಿಳೆಯರಿರಲಿ ಎಲ್ಲರೂ ಸ್ವಇಚ್ಛೆಯಿಂದ ಮತದಾನ ಮಾಡುವಂತಾಗಬೇಕು. ಅಂತಹ ವಾತಾವರಣವನ್ನು ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಆಯೋಗವು ನಿರ್ಮಾಣ ಮಾಡಿದೆ. ವಿಶೇಷವಾಗಿ ಮಹಿಳೆಯನ್ನು ಹೆಚ್ಚು ಆಕರ್ಷಿಸುವ ಹಾಗೂ ಸಂತೋಷದಿಂದ ಬಂದು ಮತದಾನ ಮಾಡುವಂತ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು. ನಗರಸಭೆ ಎ.ಇ.ಇ. ಚಂದ್ರಶೇಖರ್‌, ಸ್ವಚ್ಚಭಾರತ್‌ ಮಿಷನ್‌ನ ಶಶಿಕಲಾ ಉಪಸ್ಥಿತರಿದ್ದರು.

ಸಖಿ ಮತಗಟ್ಟೆ

ಮಾಗಡಿ: ಪಟ್ಟಣದ ಪುರಸಭೆ ಕಚೇರಿಯ ಆವರಣದಲ್ಲಿ ಸಖಿ ಮತಗಟ್ಟೆ(ಪಿಂಕ್‌ ಪೋಲಿಂಗ್‌ ಸ್ಟೇಷನ್‌) ಮತ್ತು ಕುದೂರಿನಲ್ಲಿ ಮಾದರಿ ಮತಗಟ್ಟೆ ರಚಿಸಲಾಗಿದೆ ಎಂದು ಚುನಾವಣಾಧಿಕಾರಿ ಕೃಷ್ಣಮೂರ್ತಿ ತಿಳಿಸಿದರು.

ಪುರಸಭೆ ಆವರಣದಲ್ಲಿ ನಿರ್ಮಿಸಿರುವ ಸಖಿ ಮತಗಟ್ಟೆ ವೀಕ್ಷಿಸಿ ಅವರು ಮಾತನಾಡಿದರು. ಸಖಿಮತಗಟ್ಟೆಯಲ್ಲಿ ಮಹಿಳೆಯರೇ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ಮುರುಡಯ್ಯ ಮಾತನಾಡಿ, ಕುದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾದರಿ ಮತಗಟ್ಟೆ ನಿರ್ಮಿಸಿದ್ದು, ಆಧುನಿಕ ಶೈಲಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ತಹಶೀಲ್ದಾರ್‌ ಎನ್‌.ಶಿವಕುಮಾರ್‌ ಮತ್ತು ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಸಖಿಮತಗಟ್ಟೆಗೆ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.