ADVERTISEMENT

ಕಳಪೆ ಕಾಮಗಾರಿ: ಮುರಿದು ಬಿದ್ದ ಹೊಸ ಸೇತುವೆ

ಗಡಸಳ್ಳಿ ಗ್ರಾಮದಲ್ಲಿ ವಾಹನ ಸಂಚಾರಕ್ಕೆ ತೊಂದರೆ: ಸೂಕ್ತ ತನಿಖೆ ಕೈಗೊಳ್ಳಲು ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 11:07 IST
Last Updated 9 ಅಕ್ಟೋಬರ್ 2015, 11:07 IST

ಕನಕಪುರ: ನೂತನವಾಗಿ ಚರಂಡಿ ಮೇಲೆ ನಿರ್ಮಿಸಿದ್ದ ಸೇತುವೆ(ಡಕ್‌) ಕಳಪೆಯಾಗಿದ್ದರಿಂದ ಮುರಿದು ಬಿದ್ದು ರಸ್ತೆಯಲ್ಲಿ ಓಡಾಡುವ ಜನಕ್ಕೆ, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಗಡಸಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

ನಗರದ ಹೊರ ವಲಯದಲ್ಲಿರುವ ಗಡಸಳ್ಳಿ ಗ್ರಾಮದ ಬೀದಿಯೊಂದಕ್ಕೆ ಚರಂಡಿ ಮೇಲೆ ಇತ್ತೀಚೆಗೆ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಕಾಮಗಾರಿ ಮಾಡಿರುವ ಗುತ್ತಿಗೆದಾರ ಹಣ ಪಡೆದ ಸ್ವಲ್ಪ ದಿನದಲ್ಲೇ ಡಕ್‌ ಮುರಿದು ಮೋರಿಯೊಳಗೆ ಸೇರಿದೆ. ಇತ್ತೀಚೆಗೆ ನಿರ್ಮಿಸಿರುವ ಸೇತುವೆಯೇ ಪರಿಸ್ಥಿತಿಯೇ ಹೀಗಾಗಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಸ್ತೆಯಲ್ಲಿ ಓಡಾಡುವ ಜನಕ್ಕೆ ತೀವ್ರ ತೊಂದರೆಯಾಗಿದೆ. ಈ ರಸ್ತೆಯಲ್ಲಿ ವಾಹನಗಳು ಓಡಾಡಲು ಆಗದೆ ನಾಲ್ಕೈದು ರಸ್ತೆಗಳನ್ನು ಬಳಸಿಕೊಂಡು ಬರಬೇಕು. ರಾತ್ರಿಯಲ್ಲಿ ಗೊತ್ತಾಗದೆ ಬಂದ ವಾಹನಗಳು ಮತ್ತು ಜನತೆ ಚರಂಡಿಯೊಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ತೊಂದರೆಗೆ ಸಿಲುಕಿದ್ದಾರೆ ಎನ್ನುತ್ತಾರೆ ಗ್ರಾಮದ ಶಿವಲಿಂಗಯ್ಯ.

ಹೊಸದಾಗಿ ನಿರ್ಮಿಸಿದ್ದ ಸೇತುವೆ ಮುರಿದು ಬಿದ್ದಿರುವ ವಿಷಯವನ್ನು ಶಿವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತಿಳಿಸಿದರೆ ವೆಂಕಟರಾಯನದೊಡ್ಡಿ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಸೇತುವೆ ಮುರಿದು ಬೀಳದಿದ್ದರೂ ಅಗಲೀಕರಣದ ವೇಳೆ ಹೋಗುತ್ತಿತ್ತು, ಆದ್ದರಿಂದ ಅದರ ಬಗ್ಗೆ ಮಾತನಾಡುವುದು ಬೇಡವೆಂದು ಹೇಳುವುದಾಗಿ ಗ್ರಾಮದ ಬಸವರಾಜು ಎಂಬುವರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂಚೆಯೇ ರಸ್ತೆ ಅಗಲೀಕರಣದ ವೇಳೆ ಚರಂಡಿ, ಅದರ ಮೇಲೆ ನಿರ್ಮಿಸಿರುವ ಡಕ್‌ ಹೋಗುವುದು ಗೊತ್ತಿದ್ದರೂ ಪಂಚಾಯಿತಿಯಿಂದ ಎರಡು– ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ಚರಂಡಿ ಮತ್ತು ಡಕ್‌ ನಿರ್ಮಿಸುವ ಅವಶ್ಯಕತೆ ಏನಿತ್ತು, ಕಳಪೆ ಕಾಮಗಾರಿ ಮಾಡಿ ಸಾರ್ವಜನಿಕರ ಹಣ ವಂಚಿಸಲು ಕಾಮಗಾರಿ ಮಾಡಲಾಗಿದೆ. ಇಂತಹ ಕಳಪೆ ಕಾಮಗಾರಿಗಳ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗುತ್ತಿಗೆದಾರರ ಮತ್ತು ಪಂಚಾಯಿತಿ ಅಧಿಕಾರಿಗಳು ಹಾಗೂ ಅಧ್ಯಕ್ಷರ ವಿರುದ್ದ ಕ್ರಮ ಕೈಗೊಂಡು ಕಾಮಗಾರಿಗೆ ಪಡೆದಿರುವ ಹಣವನ್ನು ಪಂಚಾಯಿತಿಗೆ ವಾಪಸ್ಸು ಕಟ್ಟಿಸಬೇಕೆಂದು ಗಡಸಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

***
ರಾತ್ರಿಯಲ್ಲಿ ಗೊತ್ತಾಗದೆ  ವಾಹನ ಸವಾರರು ಮತ್ತು ಜನರು ಚರಂಡಿ ಒಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಹಲವಾರು ಘಟನೆಗಳು ನಡೆದಿವೆ.
-ಶಿವಲಿಂಗಯ್ಯ,
ಗಡಸಳ್ಳಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.