ADVERTISEMENT

ಕಸಕ್ಕೆ ಬೆಂಕಿ: ಗ್ರಂಥಾಲಯಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2017, 13:15 IST
Last Updated 26 ಮಾರ್ಚ್ 2017, 13:15 IST
ಬೆಂಗಳೂರು ದಕ್ಷಿಣ ತಾಲ್ಲೂಕಿನ ವಾಜರಹಳ್ಳಿಯ ನಿವೇಶನಗಳಲ್ಲಿನ ತ್ಯಾಜ್ಯ ಬೆಂಕಿಯಿಂದ ಭಸ್ಮವಾಗಿರುವುದು
ಬೆಂಗಳೂರು ದಕ್ಷಿಣ ತಾಲ್ಲೂಕಿನ ವಾಜರಹಳ್ಳಿಯ ನಿವೇಶನಗಳಲ್ಲಿನ ತ್ಯಾಜ್ಯ ಬೆಂಕಿಯಿಂದ ಭಸ್ಮವಾಗಿರುವುದು   

ರಾಮನಗರ: ಪಕ್ಕದಲ್ಲಿನ ಖಾಲಿ ನಿವೇಶನಗಳಲ್ಲಿನ ತ್ಯಾಜ್ಯಕ್ಕೆ ಹೊತ್ತಿಕೊಂಡ ಬೆಂಕಿಯಿಂದಾಗಿ ಖಾಸಗಿ ಗ್ರಂಥಾಲಯ ಹಾಗೂ ಮನೆಗೆ ಹಾನಿಯಾದ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ತಲಘಟ್ಟಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ವಾಜರಹಳ್ಳಿಯಲ್ಲಿ ಭಾನುವಾರ ಮಧ್ಯಾಹ್ನ ನಡೆಯಿತು.

ವಾಜರಹಳ್ಳಿಯ ಬಿಸಿಸಿಎಚ್‌ಎಸ್‌ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಲೇಖಕ ಹರಿಹರಪ್ರಿಯ ಅವರು ತಮ್ಮ ಖಾಸಗಿ ಗ್ರಂಥಾಲಯದಲ್ಲಿ 3 ಲಕ್ಷಕ್ಕೂ ಹೆಚ್ಚು ಪುಸ್ತಕ ಹಾಗೂ ಪತ್ರಿಕೆಗಳ ಅಪರೂಪದ ಸಂಗ್ರಹ ಹೊಂದಿದ್ದಾರೆ. ಅವರ ನಿವಾಸದ ಪಕ್ಕದಲ್ಲಿ ಇರುವ ಖಾಲಿ ನಿವೇಶನಗಳಲ್ಲಿ ಆಳೆತ್ತರಕ್ಕೆ ಗಿಡಗಂಟಿಗಳು ಬೆಳೆದುಕೊಂಡಿವೆ. ಮಧ್ಯಾಹ್ನ ದುಷ್ಕರ್ಮಿಗಳು ಹಚ್ಚಿದ ಬೆಂಕಿಯಿಂದಾಗಿ ಈ ಗಿಡಗಳು ಹೊತ್ತಿ ಉರಿದು ಅಗ್ನಿಯ ಕೆನ್ನಾಲಿಗೆ ಹರಿಹರಪ್ರಿಯ ಅವರ ನಿವಾಸಕ್ಕೂ ವ್ಯಾಪಿಸಿತು.

ಮನೆಯ ಹಿಂಭಾಗದ ಶೆಡ್‌ಗೆ ಬೆಂಕಿ ತಗುಲಿದ್ದು, ಕೂಡಲೇ ಎಚ್ಚೆತ್ತ ಕುಟುಂಬದವರು ಸ್ಥಳೀಯರ ನೆರವಿನೊಂದಿಗೆ ಬೆಂಕಿ ಆರಿಸುವಲ್ಲಿ ನಿರತರಾದರು. ಅಗ್ನಿಶಾಮಕ ದಳದ ಸಿಬ್ಬಂದಿಯೂ ಧಾವಿಸಿ ಬೆಂಕಿಯನ್ನು ನಂದಿಸಿದರು. ಇದರಿಂದ ಹೆಚ್ಚಿನ ಹಾನಿ ತಪ್ಪಿತು.

ADVERTISEMENT

‘ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಗ್ರಂಥಾಲಯವೇ ಸುಟ್ಟು ಭಸ್ಮವಾಗಬಹುದು ಎಂದು ಹೆದರಿದ್ದೆ. ಸ್ಥಳೀಯರು ಹಾಗೂ ಪೊಲೀಸರ ಸಹಕಾರದಿಂದ ಬೆಂಕಿ ನಂದಿಸಲಾಯಿತು. ನಿವೇಶನಗಳು ಪಾಳು ಬಿದ್ದಿರುವ ಕಡೆ ಹೀಗೆ ಬೆಂಕಿ ಕಾಣಿಸಿಕೊಳ್ಳುವುದು ಬೇಸಿಗೆಯಲ್ಲಿ ಹೆಚ್ಚಾಗುತ್ತಿದೆ. ಈ ಕುರಿತು ಬಿಬಿಎಂಪಿ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.