ADVERTISEMENT

‘ಕಸಾಯಿ ಖಾನೆ ಹಿಂಪಡೆಯದಿದ್ದರೆ ಉಗ್ರ ಹೋರಾಟ’

ಹಾರೋಹಳ್ಳಿ: ರಾಘವೇಶ್ವರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 8:26 IST
Last Updated 25 ಮಾರ್ಚ್ 2017, 8:26 IST
ಹಾರೋಹಳ್ಳಿ ಪಟ್ಟಣದಲ್ಲಿ ಶುಕ್ರವಾರ ನಡೆದ ಉಪವಾಸ ಸತ್ಯಾಗ್ರಹದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಮಾತನಾಡಿದರು. ಆನಂದ ಭಾರತಿ ಸ್ವಾಮೀಜಿ, ಆರೂಢ ಭಾರತಿ ಸ್ವಾಮೀಜಿ ಇತರರು ಇದ್ದಾರೆ
ಹಾರೋಹಳ್ಳಿ ಪಟ್ಟಣದಲ್ಲಿ ಶುಕ್ರವಾರ ನಡೆದ ಉಪವಾಸ ಸತ್ಯಾಗ್ರಹದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಮಾತನಾಡಿದರು. ಆನಂದ ಭಾರತಿ ಸ್ವಾಮೀಜಿ, ಆರೂಢ ಭಾರತಿ ಸ್ವಾಮೀಜಿ ಇತರರು ಇದ್ದಾರೆ   

ಹಾರೋಹಳ್ಳಿ (ರಾಮನಗರ): ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ನಿರ್ಮಿಸುತ್ತಿರುವ ಕಸಾಯಿ ಖಾನೆಯನ್ನು ಹಿಂಪಡೆಯದೇ ಹೋದಲ್ಲಿ ಹೋರಾಟವನ್ನು ತೀವ್ರಗೊಳಿಸಲು ಶುಕ್ರವಾರ ನಡೆದ ಉಪವಾಸ ಸತ್ಯಾಗ್ರಹದ ವೇದಿಕೆಯಲ್ಲಿ ನಿರ್ಧರಿಸಲಾಯಿತು.

ರಾಮಚಂದ್ರಾಪುರ ಮಠ, ಹಾರೋಹಳ್ಳಿ ಕಸಾಯಿಖಾನೆ ವಿರೋಧಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ಹಾಗೂ ಮೇಕೆದಾಟು ಹೋರಾಟ ಸಮಿತಿಯ ನೇತೃತ್ವದಲ್ಲಿ ಪಟ್ಟಣದ ಗ್ರಾಮಾಂತರ ಬಸ್‌ ನಿಲ್ದಾಣದ ಸಮೀಪ ನಡೆದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ  ಕಸಾಯಿಖಾನೆ ನಿರ್ಮಾಣದ ವಿರುದ್ಧ ಹರಿಹಾಯ್ದರು.

‘ಕಸಾಯಿ ಖಾನೆ ತೆರೆಯುವುದೇ ಆದರೆ ಮೊದಲು ನಮ್ಮಂಥ ಸಂತರ ಕಸಾಯಿ (ಸಂಹಾರ) ಮಾಡಿ ನಂತರ ನಮ್ಮ ಸಮಾಧಿಯ ಮೇಲೆ ಕಾರ್ಖಾನೆ ಕಟ್ಟಿ. ನಮಗೆ ಗೋಮಾತೆಯ ಹಾಲು ಕುಡಿಯಲು ಬಿಡಿ. ಇಲ್ಲವಾದರೆ ರಕ್ತ ಹರಿಸಲೂ ನಾವು ಸಿದ್ಧರಿದ್ದೇವೆ’ ಎಂದು ಕಿಡಿಕಾರಿದರು. ಇದಕ್ಕಾಗಿ ಜನರು ಪ್ರಾಣತ್ಯಾಗಕ್ಕೂ ಸಿದ್ಧರಾಗುವಂತೆ ಕೋರಿದರು.

‘ಗೋಮಾಳದ ಜಾಗದಲ್ಲಿ ಗೋವುಗಳ ವಧೆಗೆ ಸರ್ಕಾರವು ಅವಕಾಶ ಕಲ್ಪಿಸುತ್ತಿರುವುದು ವಿಪರ್ಯಾಸ. ಇಲ್ಲಿ ಮಾಂಸದ ದುರ್ಗಂಧಕ್ಕೆ ಮೊದಲೇ ಅವ್ಯವಹಾರದ ದುರ್ಗಂಧ ಬೀರಲಾರಂಭಿಸಿದೆ. ಹಣದ ಹರಿವು ಹೆಚ್ಚಾಗಿರುವ ಕಾರಣ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಜನತೆಯ ಆಶೋತ್ತರವನ್ನೂ ಧಿಕ್ಕರಿಸಿ ಹುಚ್ಚರಂತೆ ವರ್ತಿಸುತ್ತಿವೆ’ ಎಂದು ಆರೋಪಿಸಿದರು.

‘ವಧಾಲಯದಲ್ಲಿ ಕಾರ್ಯ ನಿರ್ವಹಿಸುವ ಚೆನ್ನೈ ಮೂಲಕ ಕಂಪೆನಿಗೆ ವಾರ್ಷಿಕ ₹19.8 ಕೋಟಿಯಂತೆ 13 ವರ್ಷ ಕಾಲ ಸುಮಾರು ₹257 ಕೋಟಿಯಷ್ಟು ಹಣವನ್ನು ನೀಡಲು ಬಿಬಿಎಂಪಿ ಒಪ್ಪಿದೆ. ಇಷ್ಟು ಪ್ರಮಾಣದ ತೆರಿಗೆ ಹಣವನ್ನು ಕೇವಲ ಮಾಂಸದ ಉದ್ದೇಶಕ್ಕೆ ನೀಡುವ ಹಿಂದಿನ ಉದ್ದೇಶವಾದರೂ ಏನು?’ ಎಂದು ಅವರು ಪ್ರಶ್ನಿಸಿದರು.

‘ಬೆಂಗಳೂರಿನಲ್ಲಿ ಮಾಂಸ ತಿನ್ನುವವರಿಗಿಂತ ಐಸ್‌ಕ್ರೀಮ್‌ ತಿನ್ನುವವರ ಸಂಖ್ಯೆ ಹೆಚ್ಚಿದೆ. ಹಾಗಿದ್ದರೆ ಐಸ್‌ಕ್ರೀಮ್‌ ಕಾರ್ಖಾನೆಗಳಿಗೆ ಯಾಕೆ ನೆರವು ನೀಡಿಲ್ಲ’ ಎಂದರು.

‘ಈಗಾಗಲೇ ಹಲವು ಕಡೆ ವಿರೋಧ ವ್ಯಕ್ತವಾಗಿರುವ ಕಾರಣ ಕಸಾಯಿಖಾನೆಯನ್ನು ಇಲ್ಲಿಗೆ ವರ್ಗಾಯಿಸಲಾಗಿದೆ. ಹಾಗಿದ್ದರೆ ಇಲ್ಲಿನವರು ಮನುಷ್ಯರಲ್ಲವೇ?’ ಎಂದು ಅವರು ಪ್ರಶ್ನಿಸಿದರು. ಇಲ್ಲಿ ಮಾತ್ರವಲ್ಲ, ರಾಜ್ಯದ ಯಾವ ಯಾವ ಭಾಗದಲ್ಲೂ ಈ ವಧಾಲಯ ತೆರೆಯಲು ಅವಕಾಶ ಮಾಡಿಕೊಡುವುದಿಲ್ಲ’ ಎಂದು ಹೇಳಿದರು.

ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ: ‘ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕೆಲವೇ ದಿನಗಳಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲಿದೆ’ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.

‘ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಸಂದರ್ಭ ಸಂದರ್ಭದಲ್ಲಿ ಸದನದಲ್ಲಿ ಈ ಕುರಿತು ಮಸೂದೆ ಮಂಡಿಸಿ ಅಂಕಿತಕ್ಕಾಗಿ ರಾಷ್ಟ್ರಪತಿಗೆ ಕಳುಹಿಸಲಾಗಿತ್ತು. ಆದರೆ ನಂತರ ಬಂದ ಕಾಂಗ್ರೆಸ್‌ ಸರ್ಕಾರ ಆ ಬಗ್ಗೆ ಮನಸ್ಸು ಮಾಡಲಿಲ್ಲ. ಸಿದ್ದರಾಮಯ್ಯ ಸರ್ಕಾರಕ್ಕೆ ಇನ್ನೊಂದೇ ವರ್ಷ ಆಡಳಿತವಿದ್ದು, ಕಸಾಯಿಖಾನೆ ತೆರೆದಿದ್ದೇ ಆದಲ್ಲಿ ಸರ್ಕಾರಕ್ಕೆ ಕಂಟಕ ಖಂಡಿತ’ ಎಂದು ಎಚ್ಚರಿಸಿದರು.

‘ಗೋವುಗಳನ್ನು ಉಳಿಸದೇ ನಮ್ಮ ಕೃಷಿ ಸಂಸ್ಕೃತಿ ಉಳಿಯದು. ಗೋಹತ್ಯೆಯು ನಮ್ಮ ಸಂಸ್ಕೃತಿ–ಸಂವಿಧಾನಕ್ಕೆ ಮಾಡುವ ಅಪಮಾನ’ ಎಂದು ಶಾಸಕ ಸಿ.ಟಿ. ರವಿ ಹೇಳಿದರು.

‘ಜನರ ಬೇಡಿಕೆಗೆ ಸ್ಪಂದಿಸದ ಸರ್ಕಾರದ ಅಧಿಕಾರದ ದರ್ಪ ಸರಿಯಲ್ಲ. ವಧಾಲಯ ನಿರ್ಮಾಣ ತಡೆಯಲು ರಕ್ತ ಹರಿಸುತ್ತೇವೆ. ಸಾಧ್ಯವಾದರೆ ಎದುರಾಳಿಗಳ ರಕ್ತವನ್ನೂ ತೆಗೆದುಕೊಳ್ಳುತ್ತೇವೆ’ ಎಂದು ಶ್ರೀರಾಮ ಸೇನೆ ಸಂಘಟನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ಕಿಡಿಕಾರಿದರು.

ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ ‘ವಧಾಲಯ ನಿರ್ಮಾಣಕ್ಕಾಗಿ ಬಿಬಿಎಂಪಿಯು ₹68 ಕೋಟಿ ವಿನಿಯೋಗಿಸಲಿದೆ. ಇದಲ್ಲದೆ ನಿರ್ವಹಣೆ ರೂಪದಲ್ಲಿ ವಾರ್ಷಿಕ ₹19.8 ಕೋಟಿಯನ್ನೂ ನೀಡಲಿದೆ. ಈ ಸಂಬಂಧ ಚೆನ್ನೈ ಮೂಲದ ಕಂಪೆನಿಗೆ ₹ 5 ಕೋಟಿ ಮುಂಗಡವನ್ನೂ ನೀಡಿಯಾಗಿದೆ’ ಎಂದು ವಿವರಿಸಿದರು.

‘ಯಾಂತ್ರೀಕೃತ ಬೃಹತ್‌ ವಧಾಲಯ ಇದಾಗಿದ್ದು, ದಿನವೊಂದಕ್ಕೆ 400 ದನ–ಎಮ್ಮೆ, 4ಸಾವಿರ  ಕುರಿ ಹಾಗೂ 100 ಹಂದಿಯನ್ನು ಕಡಿದು ಮಾಂಸ ಸಿದ್ಧಪಡಿಸುವ ವ್ಯವಸ್ಥೆಯನ್ನು ಹೊಂದಲಿದೆ. ನಗರದೊಳಗಿನ ಮಾಂಸ ಮಾರಾಟಗಾರರಿಗೆ ಸಹಾಯಧನ ನೀಡುವುದಾಗಿ ರಾಜ್ಯ ಸರ್ಕಾರ ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿದೆ. ಹೀಗಿರುವಾಗ ಬೆಂಗಳೂರು ನಾಗರಿಕರ ತೆರಿಗೆ ಹಣವನ್ನು ಈ ಬೃಹತ್‌ ವಧಾಲಯಕ್ಕಾಗಿ ಪೋಲು ಮಾಡಲು ಹೊರಟಿರುವ ಕುರಿತು ಮೇಯರ್‌ ಉತ್ತರಿಸಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರಗಳ ಜಲ್ಲಿಕಟ್ಟು–ಕಂಬಳ ನಿಷೇಧದ ಹಿಂದೆ ಗೋವು ನಾಶದ ಹುನ್ನಾರ ಅಡಗಿದೆ. ಇದೀಗ ಮಾಂಸ ಮಾರಾಟ ದಂಧೆಗೆ ಪ್ರೋತ್ಸಾಹ ನೀಡುವ ಮೂಲಕ ಗೋ ಹತ್ಯೆಯನ್ನು ಉತ್ತೇಜಿಸುವ ಯತ್ನ ನಡೆದಿದೆ’ ಎಂದು ಬಲಪಂಥೀಯ ವಿಚಾರವಾದಿ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು.

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ, ಸಿದ್ಧಾರೂಢ ಶಾಖಾಮಠದ ಆರೂಢ ಭಾರತಿ ಸ್ವಾಮೀಜಿ, ಆರ್ಟ್‌ ಆಫ್‌ ಲಿವಿಂಗ್‌ನ ಶರಣ ಸ್ವಾಮೀಜಿ, ಬ್ರಹ್ಮಾಂಡ ಖ್ಯಾತಿಯ ಆನಂದ ಭಾರತಿ ಸ್ವಾಮೀಜಿ ಸೇರಿದಂತೆ ಐವತ್ತಕ್ಕೂ ಹೆಚ್ಚು ಸ್ವಾಮೀಜಿಗಳು, ಸುಳ್ಯ ಕ್ಷೇತ್ರದ ಶಾಸಕ ಎಸ್‌. ಅಂಗಾರ, ಜಾಗರಣ ವೇದಿಕೆಯ  ಜಗದೀಶ ಕಾರಂತ, ಹಾರೋಹಳ್ಳಿ ಕಸಾಯಿಖಾನೆ ವಿರೋಧಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ಮುಖಂಡರಾದ ಮಲ್ಲಪ್ಪ, ನಾಗರಾಜು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆ; ರಸ್ತೆ ತಡೆ
ಉಪವಾಸ ಸತ್ಯಾಗ್ರಹಕ್ಕೆ ಮುನ್ನ ಹಾರೋಹಳ್ಳಿಯಲ್ಲಿ ಬೃಹತ್‌ ಮೆರವಣಿಗೆ ನಡೆಯಿತು. ಕೈಗಾರಿಕಾ ಬಡಾವಣೆ ಪ್ರದೇಶದಿಂದ ಬೆಂಗಳೂರು–ಕನಕಪುರ ರಸ್ತೆ ಮಾರ್ಗವಾಗಿ ಮೆರವಣಿಗೆಯು ಸಾಗಿ ಬಂತು. ಗೋ ಸಂಸ್ಕೃತಿಯನ್ನು ಬಿಂಬಿಸುವ ಸಲುವಾಗಿ ಗೋವುಗಳನ್ನು ಹಿಡಿದು ರೈತರು ಹೆಜ್ಜೆ ಹಾಕಿದರು. ವಿವಿಧ ಮಠಾಧೀಶರು ಹಾಗೂ ಹೋರಾಟಗಾರರು ಪಾಲ್ಗೊಂಡರು.

ADVERTISEMENT

ಬಳಿಕ ಬಸ್‌ ನಿಲ್ದಾಣದ ಎದುರು ಸತ್ಯಾಗ್ರಹಿಗಳು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು. ಕಸಾಯಿಖಾನೆ ನಿರ್ಮಾಣದ ತೀರ್ಮಾನವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲಾಯಿತು. ಸತ್ಯಾಗ್ರಹ ಅಂಗವಾಗಿ ಪಟ್ಟಣದ ಅಂಗಡಿ–ಮುಂಗಟ್ಟುಗಳ ವರ್ತಕರು ಬಾಗಿಲು ಮುಚ್ಚುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

*
ಜನಾಭಿಪ್ರಾಯವನ್ನೂ ಧಿಕ್ಕರಿಸಿ ಸರ್ಕಾರ ಹಾಗೂ ಬಿಬಿಎಂಪಿಯು ಹಾರೋಹಳ್ಳಿಯಲ್ಲಿ ವಧಾಲಯ ಆರಂಭಿಸುತ್ತಿರುವುದು ಆಘಾತಕಾರಿ ಸಂಗತಿ. ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ.
-ರಾಘವೇಶ್ವರ ಭಾರತಿ ಸ್ವಾಮೀಜಿ,
ರಾಮಚಂದ್ರಾಪುರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.