ADVERTISEMENT

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಒತ್ತಾಯ

ಚನ್ನಪಟ್ಟಣ ತಾಲ್ಲೂಕಿನ ಗ್ರಾಮಸ್ಥರಿಂದ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 7:15 IST
Last Updated 2 ಮಾರ್ಚ್ 2017, 7:15 IST
ರಾಮನಗರದ ಅರಣ್ಯ ಇಲಾಖೆ ಕಚೇರಿಯ ಎದುರು ಬುಧವಾರ ಚನ್ನಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಪ್ರತಿಭಟನೆ ನಡೆಸಿದರು
ರಾಮನಗರದ ಅರಣ್ಯ ಇಲಾಖೆ ಕಚೇರಿಯ ಎದುರು ಬುಧವಾರ ಚನ್ನಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಪ್ರತಿಭಟನೆ ನಡೆಸಿದರು   

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಹಾವಳಿಯನ್ನು ನಿಯಂತ್ರಿಸಬೇಕು. ಅವುಗಳಿಂದ ನಷ್ಟ ಅನುಭವಿಸಿದ ರೈತರಿಗೆ ಸ್ಥಳದಲ್ಲಿಯೇ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಬುಧವಾರ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅರಣ್ಯ ಇಲಾಖೆಯ ಎದುರು ಕೆಲಕಾಲ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.

ಸಿಂಗರಾಜಪುರದ ರೈತ ಮುಖಂಡ ಲಕ್ಷ್ಮಣಗೌಡ ಮಾತನಾಡಿ ‘ಸಿಂಗರಾಜಪುರ, ಬಿ.ವಿ. ಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ 4–5 ತಿಂಗಳಿನಿಂದ ಕಾಡಾನೆಗಳ ದಾಳಿ ವಿಪರೀತವಾಗಿದೆ. ಈ ಬಗ್ಗೆ ಹಿಂದೆಯೇ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಆದರೆ ಅವರಿಂದ ಭರವಸೆ ಬಿಟ್ಟರೆ ಬೇರೇನೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಮಂಗಳವಾರವೂ ಆನೆಗಳು ದಾಳಿ ನಡೆಸಿ ಹತ್ತಾರು ಎಕರೆಯಷ್ಟು ಬಾಳೆ, ಮಾವಿನ ತೋಟವನ್ನು ನಾಶಮಾಡಿವೆ. ಬರದ ನಡುವೆಯೂ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಿ ಬೆಳೆ ಉಳಿಸುವ ಯತ್ನದಲ್ಲಿದ್ದೇವೆ. ಹೀಗಿದ್ದರೂ ಆನೆ ದಾಳಿಯಿಂದ ವಿಪರೀತ ನಷ್ಟವಾಗುತ್ತಿದೆ’ ಎಂದು ದೂರಿದರು.

ಬೈರಶೆಟ್ಟಿಹಳ್ಳಿ ನಿವಾಸಿ ಪುಟ್ಟಸ್ವಾಮಿ ಎಂಬುವರು ಮಾತನಾಡಿ ‘ಒಂದು ಎಕರೆಯಲ್ಲಿ 1,200 ಬಾಳೆಗಡ್ಡೆ ನೆಟ್ಟಿದ್ದು, ಇದರಲ್ಲಿ 400 ಗಿಡಗಳನ್ನು ಆನೆಗಳು ಮಂಗಳವಾರ ತುಳಿದು ನಾಶ ಮಾಡಿವೆ. ಅಲ್ಲದೆ 1 ಎಕರೆಯಲ್ಲಿನ ಹನಿ ನೀರಾವರಿ ಪೈಪು ಹಾಗೂ ಮೋಟಾರ್‌ ಅನ್ನು ಕಿತ್ತೊಗೆದಿವೆ.

15 ಬಾರಿ ಕೊಳವೆ ಬಾವಿ ವಿಫಲವಾಗಿದ್ದು, ಹೇಗೂ ನೀರು ಸಿಕ್ಕಿತ್ತು. ಮನೆಯ ಹತ್ತಿರವೇ ಜಮೀನು ಇರುವುದರಿಂದ ಆನೆಗಳು ಬರುವುದಿಲ್ಲ ಎಂಬ ಧೈರ್ಯದಿಂದ ಬಾಳೆ ನೆಟ್ಟಿದ್ದೆ. ಅದರಿಂದ ಬಂದ ಹಣದಿಂದ ಮಗಳ ಮದುವೆ ಮಾಡಬೇಕಿತ್ತು. ಈಗ ದಿಕ್ಕು  ತೋಚದಂತಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಅರಣ್ಯ ಇಲಾಖೆಯು ಈಗ ನೀಡುತ್ತಿರುವ ಬೆಳೆ ಪರಿಹಾರವು ಯಾವುದಕ್ಕೂ ಸಾಲದು. ಇದನ್ನು ಹೆಚ್ಚಿಸಬೇಕು. ಕಾಡಂಚಿನಲ್ಲಿ ಸೌರ ವಿದ್ಯುತ್‌ ತಂತಿಗಳನ್ನು ಅಳವಡಿಸಿ ಆನೆಗಳು ಗ್ರಾಮಗಳಿಗೆ ಪ್ರವೇಶಿಸದಂತೆ ತಡೆ ಒಡ್ಡಬೇಕು’ ಎಂದು ರೈತರು ಆಗ್ರಹಿಸಿದರು.

ಪ್ರತಿಭಟನಾ ನಿರತರ ಜೊತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ಕುಮಾರ್‌ ಮಾತುಕತೆ ನಡೆಸಿದರು. ಬೆಳೆನಷ್ಟ ಪರಿಹಾರ ಹೆಚ್ಚಿಸುವ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ಸೋಲಾರ್ ತಂತಿಬೇಲಿಗಾಗಿ ರೈತರು ಅರ್ಜಿ ಸಲ್ಲಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಚನ್ನಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

*
ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರ ಹೆಚ್ಚಿನ ಪರಿಹಾರದ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು.
–ವಿಜಯಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT