ADVERTISEMENT

ಕಾಲುಬಾಯಿ ಜ್ವರ ಕುರಿತ ಬೀದಿ ನಾಟಕ 

ಲಸಿಕೆ ಹಾಕಿಸಿ, ಮಹಾಮಾರಿ ಜ್ವರದಿಂದ ಪಾರುಮಾಡಿ'

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 7:02 IST
Last Updated 18 ಜೂನ್ 2018, 7:02 IST

ಚನ್ನಪಟ್ಟಣ: ಜಾನುವಾರುಗಳಿಗೆ ಕಾಣಿಸಿಕೊಳ್ಳುತ್ತಿರುವ ಕಾಲುಬಾಯಿ ಜ್ವರದಿಂದ ಹೈನೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದು ರೈತರ ಜಂಘಾಬಲವೇ ಉಡುಗಿ ಹೋಗಿದೆ ಎಂದು ‘ನೇಗಿಲ ಯೋಗಿ ಸಾಂಸ್ಕೃತಿಕ ಟ್ರಸ್ಟ್’ ಕಾರ್ಯದರ್ಶಿ ವಿಜಯ್ ರಾಂಪುರ ತಿಳಿಸಿದರು.

ತಾಲ್ಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ಟ್ರಸ್ಟ್ ವತಿಯಿಂದ ಶನಿವಾರ ಏರ್ಪಡಿಸಿದ್ದ 'ಜಾನುವಾರುಗಳಿಗೆ ಲಸಿಕೆ ಹಾಕಿಸಿ, ಮಹಾಮಾರಿ ಕಾಲುಬಾಯಿ ಜ್ವರದಿಂದ ಪಾರುಮಾಡಿ' ಎಂಬ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತ ಸಮುದಾಯದ ಉಪ ಕಸುಬಾಗಿರುವ ಹೈನೋದ್ಯಮ ಆರ್ಥಿಕ ಸ್ವಾವಲಂಬನೆಗೆ ವರವಾಗಿ ಪರಿಣಮಿಸಿದೆ. ಆದರೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾಲುಬಾಯಿ ಜ್ವರದಿಂದ ಜಾನುವಾರುಗಳ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಉಚಿತ ಲಸಿಕೆ ಹಾಕಿಸುವುದರಿಂದ ಹಸುಗಳಿಗೆ ತೊಂದರೆಯಾಗಿ, ಗರ್ಭ ಕಳೆದುಕೊಳ್ಳುವುದು, ಹಾಲು ಕಡಿಮೆಯಾಗುವುದು, ನಿಶ್ಯಕ್ತಿ, ಮೇವು ತಿನ್ನುವುದಿಲ್ಲ ಎಂಬ ರೈತರ ನಂಬಿಕೆ ತಪ್ಪು ಎಂದರು.

ADVERTISEMENT

ಈ ಬಗ್ಗೆ ಅರಿವು ಮೂಡಿಸುವ ಭಿತ್ತಿ ಚಿತ್ರಗಳನ್ನು ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನಗಳನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳದಿರುವುದು ಪಶುವೈದ್ಯ ಇಲಾಖೆ ವೈಫಲ್ಯ. ಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆ ವತಿಯಿಂದ ಹಮ್ಮಿಕೊಳ್ಳುವ ಮೂಲಕ ಸಂಕಷ್ಟದ ಸ್ಥಿತಿ ಅನುಭವಿಸುತ್ತಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಸರ್ಕಾರಕ್ಕೆ ಮನವಿ
ಮಾಡಿದರು.

ಜನಪದ ಗಾಯಕ ಚೌ.ಪು.ಸ್ವಾಮಿ ಮಾತನಾಡಿ, ಬಡಕುಟುಂಬಗಳ ಪಾಲಿಗೆ ಕಾಮಧೇನು ಆದ ಹೈನುಗಾರಿಕೆಯಿಂದ ಲಕ್ಷಾಂತರ ರೈತ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಮೃತ್ಯು ಸ್ವರೂಪವಾಗಿರುವ ಕಾಲುಬಾಯಿ ಜ್ವರದಿಂದ ಕಂಗಾಲಾಗಿರುವ ರೈತ ಸಮುದಾಯವನ್ನು ಸಂರಕ್ಷಿಸಬೇಕಾದುದು ಸರ್ಕಾರದ ಆದ್ಯ ಕರ್ತವ್ಯ ಎಂದರು.

ಚೋಳಮಾರನಹಳ್ಳಿಯ ಮುಖಂಡ ಯೋಗಾ, ಗ್ರಾಮಸ್ಥರಾದ ಕೃಷ್ಣಮೂರ್ತಿ, ನಿಂಗಮ್ಮ, ಜಯಮ್ಮ, ಶಿವಣ್ಣ, ಗಿರಿಯಪ್ಪ, ಕಾಳಯ್ಯ, ರಂಗನಾಥ್, ಕಮಲಮ್ಮ ಭಾಗವಹಿಸಿದ್ದರು.

ರೈತ ಮಲ್ಲಣ್ಣನ ಪಾತ್ರದಲ್ಲಿ ವಿಜಯ್ ರಾಂಪುರ ಹಾಗೂ ಪಶುವೈದ್ಯ ಅಧಿಕಾರಿಯಾಗಿ ಚೌ.ಪು. ಸ್ವಾಮಿ ಅಭಿನಯಿಸಿದರು. ಜಾಗೃತಿ ಗೀತೆಗಳನ್ನು ಹಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.