ADVERTISEMENT

ಕೃಷ್ಣಾ ನದಿ ನೀರು ಕೊಟ್ಟರೂ ದಾಹ ತೀರದು

‘ನೀರು–ಭಾರತದ ಭವಿಷ್ಯ’ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಎಸ್‌.ಎಂ.ಜಾಮದಾರ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 9:39 IST
Last Updated 24 ಜುಲೈ 2017, 9:39 IST
ಎಸ್‌.ಎಂ. ಜಾಮದಾರ ಉಪನ್ಯಾಸ ನೀಡಿದರು  –ಪ್ರಜಾವಾಣಿ ಚಿತ್ರ
ಎಸ್‌.ಎಂ. ಜಾಮದಾರ ಉಪನ್ಯಾಸ ನೀಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಾವೇರಿ ನೀರಿನ ಹೆಚ್ಚು ಪಾಲು ನಗರದಲ್ಲಿಯೇ ಬಳಕೆಯಾಗುತ್ತಿದೆ. ಇದು ಹೀಗೆ  ಮುಂದುವರಿದರೆ ರಾಜ್ಯಕ್ಕೆ ಮೀಸಲಿಟ್ಟ ಕಾವೇರಿಯ ನೀರು ಬೆಂಗಳೂರಿಗೇ ಬೇಕಾಗುತ್ತದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್‌.ಎಂ. ಜಾಮದಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂವಾದ ಟ್ರಸ್ಟ್‌ ಮತ್ತು ಜಯರಾಮ ಸೇವಾ ಮಂಡಳಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ನೀರು ಮತ್ತು ಭಾರತದ ಭವಿಷ್ಯ’ ಕುರಿತು ಅವರು ಮಾತನಾಡಿದರು.

‘2011ರ ಜನಗಣತಿ ಪ್ರಕಾರ ಬೆಂಗಳೂರಿನ ಜನಸಂಖ್ಯೆ 88 ಲಕ್ಷ ಇತ್ತು. ಈಗ ಜನಸಂಖ್ಯೆ ಒಂದು ಕೋಟಿ ದಾಟಿದೆ. 2021ರ ಹೊತ್ತಿಗೆ 1.80 ಕೋಟಿ ಆಗಲಿದೆ. ನಗರಕ್ಕೆ 8 ಟಿಎಂಸಿ ಅಡಿ ಕಾವೇರಿ ನೀರು ನಿಗದಿಯಾಗಿದೆ. ಆದರೆ, ನಾವು ಈಗ 18 ಟಿಎಂಸಿ ಅಡಿ ನೀರು ಬಳಸುತ್ತಿದ್ದೇವೆ. ಒಂದೆರಡು ದಶಕಗಳಲ್ಲಿ ಕಾವೇರಿ ನೀರಿನೊಂದಿಗೆ ಕೃಷ್ಣಾ ನದಿ ನೀರನ್ನೂ ನಗರಕ್ಕೆ ಹರಿಸಿದರೂ ಆಶ್ಚರ್ಯವಿಲ್ಲ’ ಎಂದರು.

ADVERTISEMENT

‘ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇನ್ನೂ  ನೀರಿಗಾಗಿ ಹಾಹಾಕಾರ ಇದೆ. ಒಂದು ಕೊಡ ನೀರು ಬೇಕೆಂದರೆ ಐದಾರು ಕಿ.ಮೀ ದೂರ ನಡೆಯಬೇಕು. ಆದರೆ, ನಗರದಲ್ಲಿ ಬೇಕಾಬಿಟ್ಟಿಯಾಗಿ ನೀರು ಖರ್ಚು ಮಾಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಎಲ್ಲಾ ಭಾಗಗಳಿಗೂ ಸಮಾನ ನೀರು ಹಂಚಿಕೆ ಮಾಡಬೇಕು. ಅದಕ್ಕೆ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ತರಬೇಕು. ಬಳಕೆಯ ಪ್ರಮಾಣವನ್ನು ಅಳೆಯಲು ಮೀಟರ್‌ ಅಳವಡಿಸಬೇಕು. ಆಗ ಜನರು ತಮಗೆ ಅಗತ್ಯವಿದ್ದಷ್ಟೇ ನೀರನ್ನು ಬಳಸುತ್ತಾರೆ’ ಎಂದು ಸಲಹೆ ನೀಡಿದರು.

‘ಭತ್ತ ಮತ್ತು ಕಬ್ಬು ಬೆಳೆಯಲು ಸಾಕಷ್ಟು ನೀರು ಬೇಕು ಎಂಬ ತಪ್ಪು ಕಲ್ಪನೆ ರೈತರಲ್ಲಿ ಮನೆಮಾಡಿದೆ. ಹನಿ ನೀರಾವರಿಯಿಂದಲೇ ಭತ್ತ ಬೆಳೆಯಬಹುದು. ಇದರಿಂದ ಶೇ 50ರಷ್ಟು ನೀರು ಉಳಿತಾಯವಾಗುತ್ತದೆ. ಆ ಬಗ್ಗೆ ರೈತರಿಗೆ ಶಿಕ್ಷಣ ನೀಡಬೇಕು’ ಎಂದರು.

‘ದೇಶದಲ್ಲಿ ಶೇ 53ರಷ್ಟು ಮಂದಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಶೇ 83ರಷ್ಟು ನೀರನ್ನು ಕೃಷಿಗೆ ಹಂಚಿಕೆ ಮಾಡಲಾಗಿದೆ.  ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ (ಜಿಡಿಪಿ) ಶೇ 28ರಷ್ಟು ಕೊಡುಗೆ ನೀಡುತ್ತಿರುವ ಕೈಗಾರಿಕೆಗಳಿಗೆ ಶೇ 12ರಷ್ಟು ನೀರು ಮಾತ್ರ ಲಭ್ಯವಾಗುತ್ತಿದೆ.’

‘ನದಿ, ಕೆರೆಗಳ ನೀರನ್ನು ಯಥೇಚ್ಛವಾಗಿ ಬಳಸಿದ್ದೇವೆ. ಲಕ್ಷಾಂತರ ಕೊಳವೆಬಾವಿಗಳನ್ನು ಕೊರೆಸುವ ಮೂಲಕ ಅಂತರ್ಜಲವನ್ನೂ ಕೊಳ್ಳೆ ಹೊಡೆದಿದ್ದೇವೆ. ಇದರಿಂದಾಗಿ ಅಪರೂಪವಾಗಿದ್ದ ಬರಗಾಲ ಪರಿಸ್ಥಿತಿ ಈಗ ಸಾಮಾನ್ಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.