ADVERTISEMENT

ಗರಿಗೆದರಿದ ಕೃಷಿ ಚಟುವಟಿಕೆ

ಪೂರ್ವ ಮುಂಗಾರು ಮಳೆ ಮೂಡಿಸಿದ ಮಂದಹಾಸ: ಬಿತ್ತನೆಗೆ ಸಿದ್ಧತೆಯಲ್ಲಿ ತೊಡಗಿರುವ ರೈತರು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2015, 8:25 IST
Last Updated 28 ಏಪ್ರಿಲ್ 2015, 8:25 IST

ರಾಮನಗರ:  ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಬೀಳುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಉಳುಮೆ ಕಾರ್ಯದಲ್ಲಿ ತೊಡಗುವ ಮೂಲಕ ಮುಂಗಾರು ಬಿತ್ತನೆಗೆ ಭೂಮಿಯನ್ನು ಸಜ್ಜುಗೊಳಿಸುತ್ತಿದ್ದಾರೆ.

ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಾದ್ಯಂತ ಈ ಬಾರಿ ಪೂರ್ವ ಮುಂಗಾರು ಹಂಗಾಮು ಉತ್ತಮವಾಗಿದ್ದು, ಏಪ್ರಿಲ್ ತಿಂಗಳಲ್ಲಿ ಸರಾಸರಿ 192 ಮಿಲಿ ಮೀಟರ್ (ಮಿ.ಮೀ) ಮಳೆ ಬೀಳಬೇಕಿತ್ತು. ಆದರೆ ಈ ಬಾರಿ ಜಿಲ್ಲೆಯಾದ್ಯಂತ ಇದುವರೆಗೂ ಸುಮಾರು 490.8 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯ ರೈತರ ಮೊಗದಲ್ಲಿ ಹರ್ಷ ಮೂಡಿದ್ದು, ಕೃಷಿ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನಲ್ಲಿ 51 ಮಿ.ಮೀ., ಕನಕಪುರ ತಾಲ್ಲೂಕಿನಲ್ಲ್ಲಿ 134.4 ಮಿ.ಮೀ., ಮಾಗಡಿ ತಾಲ್ಲೂಕಿನಲ್ಲಿ 148 ಮಿ.ಮೀ. ಹಾಗೂ ರಾಮನಗರ ತಾಲ್ಲೂಕಿನಲ್ಲಿ  116.6 ಮಿ.ಮೀ. ಮಳೆಯಾಗಿದೆ. ವಾಡಿಕೆಯಂತೆ ಏಪ್ರಿಲ್‌ನಲ್ಲಿ ಜಿಲ್ಲೆಯಾದ್ಯಂತ ಸರಾಸರಿ 48 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಬಾರಿ ಸುಮಾರು 112.5 ಮಿ.ಮೀ.ರಷ್ಟು ದಾಖಲೆಯ ಮಳೆಯಾಗಿದೆ.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಕಾರಣ ರೈತರು ಕೃಷಿ ಚಟುವಟಿಕೆಗಳನ್ನು ಬಿರುಸುಗೊಳಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರು ಪ್ರಮುಖವಾಗಿ ಎಳ್ಳು, ತೊಗರಿ, ಹೆಸರು, ಹಲಸಂದೆ ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಸುಮಾರು 4 ಸಾವಿರ ಹೆಕ್ಟೇರ್‌ಗೂ ಅಧಿಕ ಭೂಮಿಯಲ್ಲಿ ಎಳ್ಳನ್ನು ಬೆಳೆಯಲಾಗುತ್ತದೆ. ಕನಕಪುರ ತಾಲೂಕಿನಲ್ಲಿ ಅತಿಹೆಚ್ಚು ಪ್ರದೇಶದಲ್ಲಿ, ಅಂದರೆ ಸುಮಾರು 3,800 ಹೆಕ್ಟೇರ್ ಪ್ರದೇಶದಲ್ಲಿ ಎಳ್ಳನ್ನು ಬೆಳೆಯಲಾಗುತ್ತದೆ. ಚನ್ನಪಟ್ಟಣ ತಾಲ್ಲೂಕಿನಲ್ಲಿ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಎಳ್ಳನ್ನು ಬೆಳೆಯಲಾಗುತ್ತದೆ. ಮಾಗಡಿ ಮತ್ತು ರಾಮನಗರ ತಾಲ್ಲೂಕಿನಲ್ಲಿ ಚದುರಿದಂತೆ ಎಳ್ಳನ್ನು ರೈತರು ಬೆಳೆಯುತ್ತಾರೆ.

ಮುಂಗಾರು ಹಂಗಾಮಿನಲ್ಲಿ ಬೆಳೆಯುವ ದ್ವಿದಳ ಧಾನ್ಯಗಳಲ್ಲಿ `ತೊಗರಿ' ಪ್ರಮುಖ ಬೆಳೆಯಾಗಿದೆ. ಜಿಲ್ಲೆಯಾದ್ಯಂತ ಸುಮಾರು 3,900 ಹೆಕ್ಟೇರ್ ಪ್ರದೇಶದಲ್ಲಿ ತೊಗರಿಯನ್ನು ಬೆಳೆಯಲಾಗುತ್ತದೆ. ಮಾಗಡಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ತೊಗರಿಯನ್ನು ಬೆಳೆಯಲಾಗುತ್ತದೆ. ಇತರೆ ಮೂರು ತಾಲೂಕುಗಳಲ್ಲಿ ಚದುರಿದಂತೆ ತೊಗರಿಯನ್ನು ಬಿತ್ತನೆ ಮಾಡಲಾಗುತ್ತದೆ. ಹಲಸಂದೆ ಹಾಗೂ ಹೆಸರು ಸಹ ಮುಂಗಾರು ಹಂಗಾಮಿನ ಪ್ರಮುಖ ಬಿತ್ತನೆಯಾಗಿದ್ದು, ಮೇವಿಗಾಗಿ ಗೋವಿನ ಜೋಳವನ್ನು ಬಿತ್ತನೆ ಮಾಡಲಾಗುತ್ತದೆ.

ಬಿತ್ತನೆ ಬೀಜಕ್ಕೆ ಕೊರತೆಯಿಲ್ಲ: ಮುಂಗಾರು ಹಂಗಾಮಿಗೆ ಬಿತ್ತನೆ ಬೀಜದ ಕೊರತೆ ಎದುರಾಗಿಲ್ಲ. ಬಿತ್ತನೆ ಎಳ್ಳನ್ನು ಸ್ವತಃ ರೈತರೇ ಸಂಗ್ರಹಿಸಿಟ್ಟುಕೊಂಡಿದ್ದು, ಭೂಮಿ ಹದಗೊಂಡ ನಂತರ ಬಿತ್ತನೆ ಮಾಡಲಿದ್ದಾರೆ. ತೊಗರಿ ಬಿತ್ತನೆ ಬೀಜಕ್ಕೆ ಬೇಡಿಕೆ ಕಂಡು ಬಂದಿದ್ದು, ಕೃಷಿ ಇಲಾಖೆ ವತಿಯಿಂದ ಮಾಗಡಿ ತಾಲ್ಲೂಕಿಗೆ 19 ಕ್ವಿಂಟಾಲ್ ಬಿಆರ್ಜಿ-1 ತೊಗರಿ ಬಿತ್ತನೆ ಬೀಜವನ್ನು ಸರಬರಾಜು ಮಾಡಲಾಗಿದೆ. ಕೆ.ಜಿ. ತೊಗರಿ ಬಿತ್ತನೆ ಬೀಜಕ್ಕೆ ಸುಮಾರು ₨ 90 ದರ ಇದೆ. ಆದರೆ ರೈತರಿಗೆ ₨25 ಸಬ್ಸಿಡಿ ನೀಡುವ ಮೂಲಕ, ₨ 65 ಗೆ ಕೆ.ಜಿ. ಬಿತ್ತನೆ ತೊಗರಿಯನ್ನು ವಿತರಣೆ ಮಾಡಲು ಕೃಷಿ ಇಲಾಖೆ ಕ್ರಮ ಕೈಗೊಂಡಿದೆ.

ರಸಗೊಬ್ಬರ ದಾಸ್ತಾನು: ಜಿಲ್ಲೆಯಲ್ಲಿ ಸುಮಾರು 1,881 ಟನ್‌ಗಳಷ್ಟು ರಸಗೊಬ್ಬರ ದಾಸ್ತಾನಿದ್ದು, ಗೊಬ್ಬರಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ರಾಮನಗರ ತಾಲ್ಲೂಕಿನಲ್ಲಿ 210 ಟನ್, ಚನ್ನಪಟ್ಟಣ ತಾಲೂಕಿನಲ್ಲಿ 300 ಟನ್, ಕನಕಪುರ ತಾಲ್ಲೂಕಿನಲ್ಲಿ 500 ಹಾಗೂ ಮಾಗಡಿ ತಾಲ್ಲೂಕಿನಲ್ಲಿ 400 ಟನ್‌ಗ ಳಷ್ಟು ರಸಗೊಬ್ಬರ ದಾಸ್ತಾನಿದೆ.

`ಈ ಬಾರಿ ಜಿಲ್ಲೆಯಾದ್ಯಂತ ಏಪ್ರಿಲ್ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯಾದ್ಯಂತ ಬಹುತೇಕ ಖುಷ್ಕಿ ಭೂಮಿಯಾಗಿದ್ದು, ಮುಂಗಾರು ಬಿತ್ತನೆಗೆ ಭೂಮಿ ಹದ ಮಾಡಲು ಹೆಚ್ಚು ಸಹಕಾರಿಯಾಗಿದೆ. ಮುಂಗಾರಿನಲ್ಲಿ ರೈತರು ಎಳ್ಳು, ತೊಗರಿ, ಹಲಸಂಧೆ, ಹೆಸರು ಸೇರಿದಂತೆ ಇತರೆ ದ್ವಿದಳ ಧಾನ್ಯಗಳನ್ನು ಬೆಳೆಯಲಿದ್ದಾರೆ. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲು ಇಲಾಖೆ  ಸಕಲ ಸಿದ್ಧತೆ ನಡೆಸಿದೆ. ರೈತರಿಂದ ಹೆಚ್ಚು ಬೇಡಿಕೆ ಬಂದಲ್ಲಿ, ಮತ್ತಷ್ಟು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಲಾಗುವುದು' ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಣ್ಣಯ್ಯ ತಿಳಿಸಿದರು.

ಮುಖ್ಯಾಂಶಗಳು
* ಜಿಲ್ಲೆಯಲ್ಲಿ ಏಪ್ರಿಲ್‌ ತಿಂಗಳಲ್ಲಿ ಉತ್ತಮ ಮಳೆ
* ರೈತರ ಮೊಗದಲ್ಲಿ ಮೂಡಿದ ಮಂದಹಾಸ
*  1,881 ಟನ್‌ ರಸಗೊಬ್ಬರ ದಾಸ್ತಾನು

‘ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಾಕಷ್ಟು ದಾಸ್ತಾನಿದ್ದು, ಯಾವುದೇ ಕೊರತೆ ಇಲ್ಲ. ಹೀಗಾಗಿ ರೈತರು ಆತಂಕ ಪಡಬೇಕಾಗಿಲ್ಲ’
ಅಣ್ಣಯ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT