ADVERTISEMENT

ಚನ್ನಪಟ್ಟಣ ಕೆರೆಗಳಲ್ಲೀಗ ‘ಕೋಡಿ’ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 10:06 IST
Last Updated 18 ಸೆಪ್ಟೆಂಬರ್ 2017, 10:06 IST
ಚನ್ನಪಟ್ಟಣ ತಾಲ್ಲೂಕಿನ ಮುಂಕ್ಕುಂದ ಗ್ರಾಮದ ಕೆರೆಗೆ ಪೈಪ್‌ಲೈನ್‌ ಮೂಲಕ ನೀರು ಹರಿದಿರುವುದು
ಚನ್ನಪಟ್ಟಣ ತಾಲ್ಲೂಕಿನ ಮುಂಕ್ಕುಂದ ಗ್ರಾಮದ ಕೆರೆಗೆ ಪೈಪ್‌ಲೈನ್‌ ಮೂಲಕ ನೀರು ಹರಿದಿರುವುದು   

ಚನ್ನಪಟ್ಟಣ: ಇಲ್ಲಿನ ಹತ್ತಾರು ಹಳ್ಳಿಗಳ ಕೆರೆಗಳು ಈಗಷ್ಟೇ ಭರ್ತಿಯಾಗತೊಡಗಿದ್ದು, ಜನರು ಬಾಗಿನ ಅರ್ಪಿಸಲು ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ ಕಣ್ವ ಕುಡಿಯುವ ನೀರಿನ ಯೋಜನೆಯ ವಿಸ್ತರಣೆ ಕಾರ್ಯವೂ ಚುರುಕಾಗಿದ್ದು, ಈ ವರ್ಷ ಇನ್ನೂ ಹತ್ತಾರು ಕೆರೆಗಳ ಒಡಲು ತುಂಬುವ ನಿರೀಕ್ಷೆ ಇದೆ.

ಶಿಂಷಾ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ತಾಲ್ಲೂಕಿನ ಗರಕಹಳ್ಳಿ ಏತ ನೀರಾವರಿ ಹಾಗೂ ಕಣ್ವ ಕುಡಿಯುವ ನೀರಿನ ಯೋಜನೆಗಳಿಗೆ ಒಂದು ವಾರದ ಹಿಂದಷ್ಟೇ ಚಾಲನೆ ದೊರೆತಿದೆ. ಇದರಿಂದಾಗಿ ಇಲ್ಲಿನ ಮತ್ತೀಕೆರೆ, ಗರಕಹಳ್ಳಿ, ಮಂಕ್ಕುಂದ, ಮುದಗೆರೆ, ಗೋವಿಂದಹಳ್ಳಿ, ಕೃಷ್ಣಾಪುರ, ತೂಬಿನಕೆರೆ ಹಾಗೂ ಸುತ್ತಲಿನ ಹತ್ತಾರು ಕೆರೆಗಳು ತುಂಬಿ ತುಳುಕುತ್ತಿವೆ. ಇದರಿಂದ ಖುಷಿಗೊಂಡು ಜನರು ಬಾಗಿನ ಅರ್ಪಿಸಿ ಸಂಭ್ರಮಿಸತೊಡಗಿದ್ದಾರೆ.

ಈಚೆಗೆ ಉತ್ತಮ ಮಳೆಯಿಂದಾಗಿ ತಾಲ್ಲೂಕಿನ ಇಗ್ಗಲೂರು ಸಮೀಪ ಇರುವ ಎಚ್‌.ಡಿ. ದೇವೇಗೌಡ ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹವಾಗತೊಡಗಿದೆ. ಹೀಗೆ ಸಂಗ್ರಹವಾಗುವ ನೀರನ್ನು 1650 ಅಶ್ವಶಕ್ತಿ ಸಾಮರ್ಥ್ಯದ ಶಕ್ತಿಶಾಲಿ ಮೋಟಾರುಗಳ ಮೂಲಕ ಹೊರಗೆತ್ತಿಕೊಂಡು ಕಿಲೋಮೀಟರ್‌ಗಟ್ಟಲೆ ಉದ್ದದ, ಭಾರಿ ವ್ಯಾಸದ ಪೈಪುಗಳ ಮೂಲಕ ಕೆರೆಯ ಅಂಗಳಕ್ಕೇ ತಂದು ಚೆಲ್ಲಲಾಗುತ್ತಿದೆ. ತಿಂಗಳಿಡೀ ಮಳೆ ಸುರಿದರೂ ತುಂಬದ ಕೆರೆಗಳು ಎರಡು–ಮೂರು ದಿನಕ್ಕೆಲ್ಲ ಕೋಡಿ ಬೀಳತೊಡಗಿವೆ.

ADVERTISEMENT

ಯೋಜನೆಯ ವಿಸ್ತರಣೆ: ಬಯಲು ಸೀಮೆಯ ಗುಣಲಕ್ಷಣಗಳುಳ್ಳ ಚನ್ನಪಟ್ಟಣ ತಾಲ್ಲೂಕಿಗೆ ವರವಾಗಿ ಬಂದಿದ್ದು ಇಲ್ಲಿನ ಏತ ನೀರಾವರಿ ಯೋಜನೆಗಳು. 2011ರಲ್ಲಿ ಗರಕಹಳ್ಳಿ ನೀರಾವರಿ ಯೋಜನೆ ಕಾರ್ಯರೂಪಕ್ಕೆ ಬಂತು. ಕಣ್ವ ನೀರಾವರಿ ಯೋಜನೆಯು 2014–15ರಲ್ಲಿ ಚಾಲನೆ ಪಡೆದುಕೊಂಡಿತು. ಮೊದಲ ಹಂತದಲ್ಲಿ ₹160 ಕೋಟಿ ವೆಚ್ಚದಲ್ಲಿ ಸುಮಾರು 45 ಕಿಲೋಮೀಟರ್‌ ಉದ್ದದ ಪೈಪ್‌ಲೈನ್‌ಗಳನ್ನು ಅಳವಡಿಸುವ ಮೂಲಕ 60ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಯಿತು.

‘ಇದೀಗ ಈ ಯೋಜನೆಯನ್ನು ಇಡೀ ತಾಲ್ಲೂಕಿಗೆ ವಿಸ್ತರಿಸಲಾಗುತ್ತಿದೆ. ಹೊಸತಾಗಿ 85 ಕಿಲೋಮೀಟರ್‌ ಉದ್ದದ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಇದೇ ವರ್ಷ ಜೂನ್‌ನಲ್ಲಿ ಚಾಲನೆ ದೊರೆತಿದ್ದು, ಇದರಲ್ಲಿ 45 ಕಿ.ಮೀ. ಕಾಮಗಾರಿಯು ಈಗಾಗಲೇ ಮುಗಿದಿದೆ. ಇದಕ್ಕಾಗಿ ₹44 ಕೋಟಿ ವ್ಯಯಿಸಲಾಗುತ್ತಿದೆ. ಇನ್ನೆರಡು ತಿಂಗಳಿನಲ್ಲಿ ಈ ಕಾಮಗಾರಿ ಮುಗಿಯುವ ನಿರೀಕ್ಷೆ ಇದೆ. ಇದರಿಂದ ಹೊಸತಾಗಿ 62 ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಲಿದೆ’ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ವೆಂಕಟೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಉದ್ದೇಶಿತ ಯೋಜನೆಯು ಪೂರ್ಣಗೊಂಡಲ್ಲಿ ತಾಲ್ಲೂಕಿನ ಬಹುತೇಕ ಕೆರೆಗಳಿಗೆ ಪೈಪ್‌ಲೈನ್ ಸಂಪರ್ಕ ಸಿಕ್ಕಂತೆ ಆಗುತ್ತದೆ. 120ಕ್ಕೂ ಹೆಚ್ಚು ಮಧ್ಯಮ ಹಾಗೂ ದೊಡ್ಡ ಗಾತ್ರದ ಕೆರೆಗಳನ್ನು ಇದರಿಂದ ತುಂಬಿಸಬಹುದಾಗಿದೆ.

ದಿನಕ್ಕೆ 20 ಎಂಸಿಎಫ್‌ಟಿ ನೀರು: ಇಗ್ಗಲೂರು ಬ್ಯಾರೇಜ್‌ನಿಂದ ಸದ್ಯ ದಿನಕ್ಕೆ ಸುಮಾರು 20 ದಶಲಕ್ಷ ಘನ ಅಡಿ (ಎಂಸಿಎಫ್‌ಟಿ) ಪ್ರಮಾಣದ ನೀರನ್ನು ಪೈಪ್‌ಲೈನ್‌ ಮೂಲಕ ಕೆರೆಗಳಿಗೆ ಹರಿಸಲಾಗುತ್ತಿದೆ. ಹೀಗೆ ಕಳೆದ ಆರು ದಿನಗಳಲ್ಲಿ ಬ್ಯಾರೇಜ್‌ನಿಂದ 0.12 ಟಿಎಂಸಿ ಪ್ರಮಾಣದ ನೀರನ್ನು ಪಡೆದುಕೊಳ್ಳಲಾಗಿದೆ.

‘ಇಗ್ಗಲೂರು ಬ್ಯಾರೇಜ್‌ 0.18 ಟಿಎಂಸಿಯಷ್ಟು ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಮಾರ್ಕಂಡೇಯ ಜಲಾಶಯದಿಂದ ನೀರು ಹರಿದು ಬರುತ್ತಿರುವ ಕಾರಣ ಅನುಕೂಲವಾಗಿದೆ. ಕೆಆರ್ಎಸ್‌ನಿಂದ ಹೆಚ್ಚಿನ ಪ್ರಮಾಣದ ನೀರು ದೊರೆತಲ್ಲಿ ಇನ್ನಷ್ಟು ಕೆರೆಗಳಿಗೆ ನೀರು ತುಂಬಿಸಬಹುದು’ ಎಂದು ವೆಂಕಟೇಗೌಡ ತಿಳಿಸಿದರು.

‘ಕಣ್ವ ಯೋಜನೆಯ ಅಡಿ 2015ರ ಆರಂಭದಲ್ಲಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗಿತ್ತು. ಕಳೆದ ವರ್ಷ ಬರಗಾಲದ ಕಾರಣ ಹೆಚ್ಚಿನ ಕೆರೆಗಳಿಗೆ ನೀರು ಸಿಗಲಿಲ್ಲ. ಈ ವರ್ಷ ಉತ್ತಮವಾಗಿ ಮಳೆ ಆಗುತ್ತಿದ್ದು, ಎಲ್ಲಿಯವರೆಗೂ ಬ್ಯಾರೇಜ್‌ನಲ್ಲಿ ನೀರಿನ ಲಭ್ಯತೆ ಇರುತ್ತದೆಯೋ ಅಲ್ಲಿಯವರೆಗೂ ಪೈಪ್‌ಲೈನ್‌ ಮೂಲಕ ಕೆರೆಗಳನ್ನು ತುಂಬಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿ ಇರುತ್ತದೆ’ ಎಂದು ಅವರು ವಿವರಿಸಿದರು.

ವಿದ್ಯುತ್‌ ಬಿಲ್‌ನದ್ದೇ ಚಿಂತೆ: ಪೈಪ್‌ಲೈನ್‌ ಮೂಲಕ ನೀರು ಹರಿಸಲು ವಾರ್ಷಿಕ ಕೋಟಿ ರೂಪಾಯಿ ವಿದ್ಯುತ್‌ ಬಿಲ್‌ ಭರಿಸಬೇಕಾಗುತ್ತಿದೆ. ಇದನ್ನು ಭರಿಸುವುದು ನೀರಾವರಿ ನಿಗಮಕ್ಕೆ ಹೊರೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸ್ಥಳೀಯ ಶಾಸಕ ಸಿ.ಪಿ. ಯೋಗೇಶ್ವರ್‌ ನೇತೃತ್ವದಲ್ಲಿ ಬಳಕೆದಾರರ ಸಂಘವೊಂದನ್ನು ಸ್ಥಾಪಿಸಿ, ಅದರ ಮೂಲಕ ಯೋಜನೆಯ ನಿರ್ವಹಣೆ ಮಾಡುವ ಉದ್ದೇಶವನ್ನೂ ನಿಗಮವು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.