ADVERTISEMENT

ಚುಚ್ಚು ಮದ್ದಿನಿಂದ ಮಗು ಸಾವು: ಆರೋಪ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 9:38 IST
Last Updated 10 ನವೆಂಬರ್ 2017, 9:38 IST

ಕನಕಪುರ: ಆಸ್ಪತ್ರೆ ವೈದ್ಯರು ನೀಡಿದ ಚುಚ್ಚುಮದ್ದಿನಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಸರ್ಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗ ಮಗುವಿನ ಪೋಷಕರು ಸಾರ್ವಜನಿಕರ ಜತೆಗೂಡಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಲಿಂಗಣ್ಣನ ಬೀದಿಯ ವಾಸಿ ವಿಜಯಲಕ್ಷ್ಮಿ ಮತ್ತು ಮಂಜು ದಂಪತಿಯ ಒಂದೂವರೆ ವರ್ಷದ ಖುಷಿ ಎಂಬ ಹೆಣ್ಣು ಮಗು ಸಾವನಪ್ಪಿದ್ದು, ಪ್ರತಿಭಟನೆಗೆ ಕಾರಣವಾಯಿತು. ಗುರುವಾರ ಮಧ್ಯಾಹ್ನ 12ಗಂಟೆ ವೇಳೆಗೆ ದಂಪತಿ ಮಗವಿಗೆ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪೆಂಟವೈಲ್‌ ಮತ್ತು ಪೋಲಿಯೊ ವ್ಯಾಕ್ಷಿನ್‌, ಡಿಪಿಟಿ ಇಂಜಕ್ಷನ್‌ ಕೊಡಿಸಿದ್ದಾರೆ.

ಮನೆಗೆ ಹೋದ ಮೇಲೆ ಮಗು ನಿತ್ರಾಣಗೊಂಡಿದೆ. ಮಗು ಸುಸ್ತಾಗಿ ಮಲಗಿರಬಹುದೆಂದು ಪೋಷಕರು ಸುಮ್ಮನಾಗಿ ಸಂಜೆ ವೇಳೆಗೆ ಮಗುವನ್ನು ಎಚ್ಚರಗೊಳಿಸಲು ಮುಂದಾದಾಗ ಮಗು ಸಾವನಪ್ಪಿರುವುದು ಗೊತ್ತಾಗಿದೆ. ವೈದ್ಯರು ನೀಡಿದ ಚುಚ್ಚುಮದ್ದೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಮುಂಭಾಗ ದಿಢೀರ್‌ ಪ್ರತಿಭಟನೆಗೆ ಮುಂದಾದರು.

ADVERTISEMENT

ರಸ್ತೆ ತಡೆದು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಕೂಡಲೇ ಟೌನ್‌ ಸಬ್‌ ಇನ್‌ಸ್ಪೆಕ್ಟರ್‌ ಅನಂತ್‌ರಾಮು ಹಾಗೂ ಟ್ರಾಫಿಕ್‌ ಪೊಲೀಸರು ರಸ್ತೆ ತಡೆ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಾಸು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ, ಪ್ರತಿಭಟನಾಕಾರರೊಂದಿಗೆ ಮಾತನಾಡಿದರು. ಮಗುವಿಗೆ  ವೈದ್ಯರು ನೀಡಿರುವ ಚುಚ್ಚುಮದ್ದೇ ಸಾವಿಗೆ ಕಾರಣವೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮಗುವಿಗೆ ಕೊಟ್ಟಿರುವ ಚುಚ್ಚುಮದ್ದನ್ನು ಬೆಂಗಳೂರಿನ ಲ್ಯಾಬ್‌ಗೆ ಕಳಿಸಿ ಪರೀಕ್ಷಿಸಲಾಗುವುದು ಎಂದು ಹೇಳಿದರು.

ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ನಂತರ ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗುವುದು. ಈಗಾಗಲೇ ಜಿಲ್ಲಾ ವೈದ್ಯಾಧಿಕಾರಿ ಗಮನಕ್ಕೆ ತಂದಿದ್ದು, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪೋಷಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟರು. ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಮಲ್ಲೇಶ್‌ ಆಸ್ಪತ್ರೆಗೆ ಭೇಟಿ ನೀಡಿದರು. ಈ ಸಂಬಂಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.