ADVERTISEMENT

‘ಜನರ ಬಳಿ ತೆರಳಿ ನ್ಯಾಯ ಕೇಳುವೆ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 9:46 IST
Last Updated 20 ಸೆಪ್ಟೆಂಬರ್ 2017, 9:46 IST

ರಾಮನಗರ: ‘ರಾಜಕೀಯವಾಗಿ ನನಗೆ ಆಗಿರುವ ಅನ್ಯಾಯಕ್ಕೆ ಜನತೆಯ ಮುಂದೆ ನ್ಯಾಯ ಕೇಳುತ್ತೇನೆ. ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು ಹೇಳಿದರು.

‘ಮಾಗಡಿ ತಾಲ್ಲೂಕಿನಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಹಿಂದಿನಿಂದಲೂ ದ್ವೇಷದ ರಾಜಕಾರಣ ಮಾಡಿಕೊಂಡೇ ಬಂದಿದ್ದಾರೆ. ತನಗಾಗದವರ ಮೇಲೆ ದೌರ್ಜನ್ಯ, ಕಿರುಕುಳ, ಶೋಷಣೆ ಮಾಡುತ್ತಿದ್ದಾರೆ. ಹೀಗಾಗಿಯೇ ಅವರು ಕಾಂಗ್ರೆಸ್ ಸೇರುವುದಕ್ಕೆ ಸ್ಥಳೀಯರೇ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ನನ್ನನ್ನು ಸ್ವಾಗತಿಸಲು ಜೆಡಿಎಸ್ ಕಾರ್ಯಕರ್ತರು ಖುಷಿಯಾಗಿದ್ದಾರೆ’ ಎಂದು ಅವರು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡರು ನಿರ್ಧರಿಸಿದ ದಿನದಂದೇ ಜೆಡಿಎಸ್‌ ಸೇರಲಿದ್ದೇನೆ. ಕಾಂಗ್ರೆಸ್ ಅನ್ನು ಈಗಾಗಲೇ ಮಾನಸಿಕವಾಗಿ ತೊರೆ ದಾಗಿದೆ’ ಎಂದರು.
‘ಮಾಗಡಿಯಲ್ಲಿ ಕಾಂಗ್ರೆಸ್ ಅನ್ನು ಬೆಳೆಸಿದ್ದಕ್ಕೆ ಪ್ರತಿಫಲವಾಗಿ ನನಗೆ ನ್ಯಾಯ ಸಿಕ್ಕಿಲ್ಲ. ಹಾಗಂತ ನಾನು ಪಕ್ಷದ ನಾಯಕರ ವಿರುದ್ಧ ತೊಡೆ ತಟ್ಟಿ ನಿಲ್ಲುವಷ್ಟು ಶಕ್ತಿವಂತನಲ್ಲ.

ADVERTISEMENT

ಮುಂಬರುವ ಚುನಾವಣೆಯಲ್ಲಿ ನನ್ನ ಅನುಯಾಯಿಗಳು, ಜೆಡಿಎಸ್‌ ಕಾರ್ಯ ಕರ್ತರೇ ತೊಡೆ ತಟ್ಟಿ ನಿಲ್ಲಲಿದ್ದಾರೆ’ ಎಂದರು. ‘ನಾನು ಜೆಡಿಎಸ್ ಸೇರಿದ ಬಳಿಕ ತಾಲ್ಲೂಕಿನ ಸ್ಥಳೀಯ ಪ್ರತಿನಿಧಿಗಳು, ಕಾರ್ಯಕರ್ತರು ಹಿಂಬಾಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಮನಗರ ಹಾಗೂ ಮಾಗಡಿ ತಾಲ್ಲೂಕು ಪಂಚಾಯಿತಿಗಳ ಹೊಸ ಅಧ್ಯಕ್ಷರ ವಿಚಾರದಲ್ಲಿ ಜೆಡಿಎಸ್ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುವುದಾಗಿ ಅವರು ಹೇಳಿದರು. ‘ಮಾಗಡಿ ತಾ.ಪಂ. ಹೊಸ ಅಧ್ಯಕ್ಷರ ಆಯ್ಕೆಗೆ ಈಗಾಗಲೇ ಮೂರು ಬಾರಿ ಚುನಾವಣೆ ನಿಗದಿಯಾಗಿ ಮುಂದೂಡಲ್ಪಟ್ಟಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಶಾಸಕರೇ ತಿಳಿಸಬೇಕು’ ಎಂದು ಆಗ್ರಹಿಸಿದರು.

ಅಭಿವೃದ್ಧಿ ಕಾರ್ಯಕ್ಕೆ ಸಾಥ್‌: ‘2013ರಲ್ಲಿ ಕಾಂಗ್ರೆಸ್ ನನ್ನನ್ನು ಗುರುತಿಸಿ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಿತು. ಕಾರಣಾಂತರಗಳಿಂದ ಸೋಲು ಕಂಡಾಗ್ಯೂ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿದ್ದೇನೆ. ಸಂಸದ ಡಿ.ಕೆ. ಸುರೇಶ್‌ ಜೊತೆಗೂಡಿ ಮಂತ್ರಿಗಳು, ಅಧಿಕಾರಿಗಳ ಮೇಲೆ ಒತ್ತಡ ತಂದು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇನೆ’ ಎಂದರು.

‘ಮಾಗಡಿಗೆ ಹೇಮಾವತಿ ನದಿ ನೀರು ಹರಿಯಬೇಕು ಎಂಬ ದಶಕಗಳ ಕನಸು ಈಗ ಈಡೇರುತ್ತಿದ್ದು, ಕಾಮಗಾರಿಯು ಮುಕ್ತಾಯದ ಹಂತದಲ್ಲಿ ಇದೆ. ಕುದೂರು, ತಿಪ್ಪಸಂದ್ರ ಹೋಬಳಿಗಳ ಬೆಸ್ಕಾಂ ಉಪಕೇಂದ್ರಗಳನ್ನು ತುಮಕೂರು ವ್ಯಾಪ್ತಿಯಿಂದ ಮಾಗಡಿ ವಲಯದ ವ್ಯಾಪ್ತಿಗೆ ತಂದಿದ್ದು, ನನೆಗುದಿಗೆ ಬಿದ್ದಿದ್ದ ತೂಬಿನಕೆರೆ 220ನ ಕೆ.ವಿ. ಸ್ಟೇಷನ್‌ ಕಾಮಗಾರಿಗೆ ಮರು ಚಾಲನೆ ನೀಡಿದ್ದರಲ್ಲಿ ನನ್ನ ಪಾಲೂ ಇದೆ’ ಎಂದು ಅವರು ಹೇಳಿದರು.

‘ವೃಷಭಾವತಿ ನದಿಯ ಕೊಳಚೆ ನೀರನ್ನು ಸಂಸ್ಕರಿಸಿ ಬಿಡದಿ, ಹಾರೋ ಹಳ್ಳಿ ಹಾಗೂ ಕಸಬಾ ಹೋಬಳಿಗಳ ಕೆರೆಯನ್ನು ತುಂಬಿ ಸುವುದು. ವೃಷಭಾವತಿ ಕಣಿವೆಯ 32 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಯೋಜನೆ ರೂಪಿಸಿದ್ದು, ಬಿಡದಿ ಪುರಸಭೆಯ ಉನ್ನತೀಕರಣ, ಯೋಜನಾ ಪ್ರಾಧಿಕಾರ ರಚನೆ ಮೊದಲಾದ ಕಾರ್ಯಗಳಿಗೆ ಸಾಥ್‌ ನೀಡಿದ್ದೇನೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.