ADVERTISEMENT

ಜನಸ್ನೇಹಿ ವ್ಯವಸ್ಥೆ ಅನುಕರಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 9:37 IST
Last Updated 18 ಮಾರ್ಚ್ 2017, 9:37 IST

ರಾಮನಗರ: ‘ಜನರ ಸೇವೆ ಹಾಗೂ ಸಮಾಜದ ಅಭಿವೃದ್ಧಿಗಾಗಿ ಕಂದಾಯ ಇಲಾಖೆ ಸದಾ ಶ್ರಮಿಸುತ್ತಿದೆ’ ಎಂದು ಜಿಲ್ಲಾಧಿಕಾರಿ ಬಿ.ಆರ್‌. ಮಮತಾ ಹೇಳಿದರು.
ಜಾನಪದ ಲೋಕದಲ್ಲಿ ಕಂದಾಯ ಇಲಾಖೆ ಜಿಲ್ಲಾ ನೌಕರರ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖೆ ನೌಕರರ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜನರಿಗೆ ಸರ್ಕಾರದ ಸೌಲಭ್ಯ ತಲುಪಿಸಲು ಕಂದಾಯ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ. ನೈಸರ್ಗಿಕ ವಿಕೋಪ ನಿಭಾಯಿಸುವಲ್ಲಿ ಈ ಇಲಾಖೆಯ ಪಾತ್ರ ಮುಖ್ಯ. ರಾಜ್ಯದಲ್ಲಿ ಸಕಾಲ ಯೋಜನೆಯಲ್ಲಿ ರಾಮನಗರ ಜಿಲ್ಲೆಗೆ ಎರಡನೇ ಸ್ಥಾನ ದೊರೆಯಲು ಈ ನೌಕರರ ಕೊಡುಗೆ ಅಪಾರ’ ಎಂದು ಶ್ಲಾಘಿಸಿದರು.

‘ಕಂದಾಯ ಇಲಾಖೆ ಎಲ್ಲ ಇಲಾಖೆಗಳ ಮಾತೃ ಇಲಾಖೆ. ಕಂದಾಯ ಅಧಿಕಾರಿಗಳು ಬಡವರ, ಶೋಷಿತರ ಪರವಾಗಿ ಸದಾ ಕಾರ್ಯನಿರ್ವಹಿಸಬೇಕು. ಈ ಮೂಲಕ  ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸಬೇಕು. ಯಾವುದೇ ಸಮಸ್ಯೆ ಕಂಡುಬಂದರೂ ತಕ್ಷಣವೇ ಬಗೆಹರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಉಪವಿಭಾಗಾಧಿಕಾರಿ ಎಂ.ಎನ್‌. ರಾಜೇಂದ್ರಪ್ರಸಾದ್‌ ಮಾತನಾಡಿ ‘ಜಿಲ್ಲೆಯಲ್ಲಿ 18 ನಾಡಕಚೇರಿಗಳಿವೆ. ರಾಜ್ಯದಲ್ಲಿ ಸಕಾಲ ಯೋಜನೆಯಲ್ಲಿ ಇನ್ನು ಸ್ವಲ್ಪ ದಿನಗಳಲ್ಲಿ ರಾಜ್ಯಕ್ಕೆ ಮೊದಲನೆ ಸ್ಥಾನ ದೊರೆಯಲಿದೆ. ಆಧುನಿಕ ಪರಿಸ್ಥಿತಿಗೆ ತಕ್ಕಂತೆ ನೌಕರರು ಕಂಪ್ಯೂಟರ್‌ ಕಲಿತು ಇ–ಜ್ಞಾನ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

‘1960–64ರ ನಡುವೆ ಕಂದಾಯ ಇಲಾಖೆಯ ವೃತ್ತಗಳನ್ನು ರಚಿಸಲಾಗಿದೆ. ಈ ವೃತ್ತಗಳು ಇಂದಿಗೂ ಚಾಲನೆಯಲ್ಲಿವೆ. ಮೊದಲಾದರೆ ಜನಸಂಖ್ಯೆ ಕಡಿಮೆ ಇತ್ತು. ಈಗ ಹಿಂದಿನ ಜನಸಂಖ್ಯೆಗಿಂತ ಹಲವು ಪಟ್ಟು ಜನಸಂಖ್ಯೆ ಹೆಚ್ಚಾಗಿದೆ. ಜತೆಗೆ ಎಲ್ಲರಿಗೂ ಒಂದೇ ದಿನದಲ್ಲಿ ಪ್ರಮಾಣ ಪತ್ರಗಳು ದೊರೆಯಬೇಕು ಎಂದು ಒತ್ತಡ ತರುತ್ತಾರೆ. ಇಂತಹ ಸಂದರ್ಭದಲ್ಲಿ ಕಂದಾಯ ಇಲಾಖೆಯ ವೃತ್ತಗಳನ್ನು ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ರಚಿಸುವ ಅವಶ್ಯಕತೆ ಇದೆ’ ಎಂದು ತಿಳಿಸಿದರು.

‘ಇತರೆ ಇಲಾಖೆಗಳಲ್ಲಿ ಮುಂಬಡ್ತಿಯನ್ನು ನೀಡುವಂತೆ ಗ್ರಾಮಲೆಕ್ಕಿಗರಿಗೂ ನೀಡಬೇಕು. ಆಗ ಮುಂಬಡ್ತಿಯಲ್ಲಿ ಇರುವ ತಾರತಮ್ಯ ನಿವಾರಣೆಯಾಗುತ್ತದೆ. ಕಂದಾಯ ಇಲಾಖೆಯ ನೌಕರರ ಸಾವಿರಾರು ಎಕರೆ ಭೂಮಿಯನ್ನು ಗುರುತಿಸಿ ನೀಡುತ್ತಾರೆ. ಆದರೆ ಜಿಲ್ಲೆಯಲ್ಲಿ ಕಂದಾಯ ನೌಕರರ ಕಚೇರಿ ಸೇರಿದಂತೆ ಇನ್ನಿತರ ವಿಷಯಗಳಿಗೆ ಅನುಕೂಲವಾಗುವಂತೆ ಭೂಮಿಯನ್ನು ಗುರುತಿಸಿ ಕೊಡಬೇಕು. ಇದರ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸಬೇಕು’ ಎಂದು ತಿಳಿಸಿದರು.

2017ರ ಸಾಲಿನ ದಿನಚರಿಯನ್ನು ಕಂದಾಯ ಇಲಾಖಾ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ. ವಿಜಯ್‌ಕುಮಾರ್ ಬಿಡುಗಡೆ ಮಾಡಿದರು. ಕಂದಾಯ ಇಲಾಖೆಯ ಹಿರಿಯ ನೌಕರರನ್ನು ಸನ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಪ್ರಶಾಂತ್‌, ನಿವೃತ್ತ ವಿಭಾಗಾಧಿಕಾರಿ ಟಿ. ತಿಮ್ಮೇಗೌಡ, ವಿಶೇಷ ಭೂಸ್ವಾಧೀನಾಧಿಕಾರಿ ಜಯಮಾಧವ, ಭೂದಾಖಲೆಗಳ ಉಪ ನಿರ್ದೇಶಕ ಬಿ.ಜಿ. ಉಮೇಶ್‌, ಗ್ರಾಮಲೆಕ್ಕಾಧಿಕಾರಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಪ್ರಸಾದ್‌, ತಹಶೀಲ್ದಾರ್‌ಗಳಾದ ಎನ್. ರಘುಮೂರ್ತಿ, ಆರ್. ಯೋಗಾನಂದ್‌, ಎಲ್‌. ಲಕ್ಷ್ಮೀ, ರಮೇಶ್, ಜಿಲ್ಲಾಧಿಕಾರಿ ಕಚೇರಿಗಳ ಸಹಾಯಕ ಶ್ರೀನಿವಾಸ್‌ ಪ್ರಸಾದ್‌, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ರಾಮಚಂದ್ರಯ್ಯ ಇತರರು ಇದ್ದರು.

ಶೀಲಾರಾಣಿ ಪ್ರಾರ್ಥಿಸಿದರು. ಬಿಜಿಎಸ್‌ ಅಂಧರಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎನ್‌. ರಮೇಶ್‌ ಸ್ವಾಗತಿಸಿದರು. ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು.

**

ಎಲ್ಲ ಅಧಿಕಾರಿಗಳು, ಸಿಬ್ಬಂದಿ ತಾಳ್ಮೆ ಹಾಗೂ ಶಿಸ್ತಿನಿಂದ ವರ್ತಿಸಬೇಕು. ಬಂದವರನ್ನು ಮೊದಲು ಸ್ವಾಗತಿಸಿ ನಂತರ ಇಲಾಖೆಯ ಕಾರ್ಯವೈಖರಿ ಕುರಿತು ತಿಳಿಸಿಕೊಡಬೇಕು.
-ಬಿ.ಆರ್‌. ಮಮತಾ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.