ADVERTISEMENT

ಜಲಾಶಯಕ್ಕೆ ಕಲುಷಿತ ನೀರು– ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 10:22 IST
Last Updated 9 ಸೆಪ್ಟೆಂಬರ್ 2017, 10:22 IST

ಮಾಗಡಿ: ತಿಪ್ಪಗೊಂಡನಹಳ್ಳಿಯ ಚಾಮರಾಜ ಸಾಗರ ಜಲಾಶಯದಿಂದ ಕಲುಷಿತ ನೀರು ಮಂಚನಬೆಲೆ ಜಲಾಶಯಕ್ಕೆ ಹರಿದು ಹೋಗುವುದನ್ನು ತಕ್ಷಣ ನಿಲ್ಲಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು. ಶುಕ್ರವಾರ ತಿಪ್ಪಗೊಂಡನ ಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ, ಜಲಾಶಯದ ನೀರು ಕಲುಷಿತಗೊಂಡಿರುವುದನ್ನು ವೀಕ್ಷಿಸಿ ಅವರು ಮಾತನಾಡಿದರು,

ಚಾಮರಾಜಸಾಗರ ಜಲಾಶಯದ ಕ್ರೆಸ್ಟ್‌ ಗೇಟ್‌ ಕೆಟ್ಟು ಹೋಗಿರುವುದರಿಂದ ಜಲಾಶಯದ ಮಲಿನ ನೀರು ಹೊರಗೆ ಹರಿದು ಮಂಚನಬೆಲೆ ಜಲಾಶಯ ಸೇರುತ್ತಿದೆ. ಮಂಚನಬೆಲೆ ಜಲಾಶಯದ ನೀರನ್ನು ಮಾಗಡಿ ಪಟ್ಟಣಕ್ಕೆ ಕುಡಿಯಲು ಬಳಸುತ್ತಿರುವುದರಿಂದ ಪಟ್ಟಣದ ಜನತೆಗೆ ಇನ್ನಿಲ್ಲದ ಸೋಂಕು ರೋಗಗಳು ಬರಲಿವೆ ಎಂದರು.

ತಕ್ಷಣ ತಿಪ್ಪಗೊಂಡನಹಳ್ಳಿ ಜಲಾಶಯದ ಕ್ರೆಸ್ಟ್‌ ಗೇಟ್‌ ಬದಲಿಸಿ, ನೀರು ನಿಲ್ಲಿಸಬೇಕು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ತಕ್ಷಣ ಸಭೆ ಕರೆದು ಜಲಾಶಯದ ನೀರಿನ ಶುದ್ಧೀಕರಣಕ್ಕಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಶಾಸಕ ಆರ್‌.ಅಶೋಕ್‌ ಮಾತನಾಡಿ, 2020ರ ವೇಳೆಗೆ ಏತ ನೀರಾವರಿ ಯೋಜನೆಯಡಿ ತಿಪ್ಪಗೊಂಡನ ಹಳ್ಳಿ ಜಲಾಶಯವನ್ನು ನವೀಕರಿಸಲಾಗುವುದು, ಜಲಮಂಡಳಿ ಅಧಿಕಾರಿಗಳು ಜಲಾಶಯಕ್ಕೆ ಕಾರ್ಖಾನೆಗಳಿಂದ ಹರಿದು ಬರುತ್ತಿರುವ ತ್ಯಾಜ್ಯವನ್ನು ನಿಲ್ಲಿಸಿ, ಕಾರ್ಖಾನೆಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಜಲಾಶಯದ ಸುತ್ತಮುತ್ತಲಿನ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಬೇಕು, ಜಲಾಶಯದ ಸುತ್ತಮುತ್ತಲಿನ ಇಟ್ಟಿಗೆ ಬಟ್ಟಿಗಳಿಂದ ಹರಿದು ಬರುವ ತ್ಯಾಜ್ಯವನ್ನು ನಿಯಂತ್ರಿಸಬೇಕು, ನಗರದ ಜನತೆಗೆ ಸಿಹಿನೀರು ಒದಗಿಸುತ್ತಿದ್ದ ಚಾಮರಾಜ ಸಾಗರ ಜಲಾಶಯವನ್ನು ಶುದ್ಧೀಕರಿಸಿ ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ಜನತೆ ಕುಡಿಯುವ ನೀರಿಗೆ ಯುದ್ದ ಮಾಡಬೇಕಾದೀತು ಎಂದು ತಿಳಿಸಿದರು.

ಶಾಸಕ ವಿ.ಸೋಮಣ್ಣ, ಮುಖಂಡರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಪುಟ್ಟಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಚೋಳನಾಯಕನ ಹಳ್ಳಿ ಹನುಮಂತಯ್ಯ , ಹುಲುವೇನಹಳ್ಳಿ ಕೆಂಪೇಗೌಡ ಬಿಬಿಎಂಪಿ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.