ADVERTISEMENT

ಜಾತಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಅಗತ್ಯ

ಆರ್ಯ ಈಡಿಗ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 9:36 IST
Last Updated 30 ಮಾರ್ಚ್ 2015, 9:36 IST
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವು ಸೋಲೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಬಡ್ಡಿ ಕ್ರೀಡಾಪಟು ಮಮತಾ ಪೂಜಾರಿ, ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ, ದಾನಿಗಳಾದ ಕೆ.ಚಂದ್ರಶೇಖರ್‌, ವಿ.ರಾಮಕೃಷ್ಣಯ್ಯ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದರು
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವು ಸೋಲೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಬಡ್ಡಿ ಕ್ರೀಡಾಪಟು ಮಮತಾ ಪೂಜಾರಿ, ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ, ದಾನಿಗಳಾದ ಕೆ.ಚಂದ್ರಶೇಖರ್‌, ವಿ.ರಾಮಕೃಷ್ಣಯ್ಯ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದರು   

ರಾಮನಗರ: ‘ಚಲನೆಯೇ ಇಲ್ಲದಂತಾಗಿರುವ ನಮ್ಮ ಜಾತಿ ವ್ಯವಸ್ಥೆಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ದೊರೆತಾಗ ಮಾತ್ರ ಚಲನೆ ಸಿಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಆರ್ಯ ಈಡಿಗ ಮಹಾಸಂಸ್ಥಾನ ಹಾಗೂ ರೇಣುಕ ಯಲ್ಲಮ್ಮ ದೇವಿ ದೇವಸ್ಥಾನ ಟ್ರಸ್ಟ್‌ ಜಂಟಿಯಾಗಿ ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆ, ಡಾ. ರಾಜ್‌ಕುಮಾರ್‌ ಕಲಾಮಂದಿರ ಸೇರಿದಂತೆ ವಿವಿಧ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಬಸವಾದಿ ಶರಣರಿಂದ ಹಿಡಿದು ಇಲ್ಲಿಯವರೆಗೂ ಜಾತಿ ವ್ಯವಸ್ಥೆ ಹೋಗಿಸಲು ಪ್ರಯತ್ನಗಳು ನಡೆದಿವೆ. ಆದರೆ ಜಾತಿ ಮತ್ತು ವರ್ಗ ರಹಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ, ಸಂಘಟನೆ, ಹೊರಾಟ: ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರು ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದಿದ್ದರು. ಹಿಂದುಳಿದ, ತುಳಿತಕ್ಕೆ ಒಳಗಾದ ಎಲ್ಲ ಜಾತಿಯವರು ಸಂಘಟಿತರಾಗಿ, ಶಿಕ್ಷಣ ಕಲಿತು ಹಕ್ಕುಗಳಿಗಾಗಿ ಹೋರಾಡಬೇಕಾಗಿದೆ ಎಂದು ಸಿ.ಎಂ ಹೇಳಿದರು.

ಜಾತಿ ಸಭೆ, ಸಮಾವೇಶಗಳು ನಡೆದಾಗ ಕೊಂಕು ನುಡಿಯುವವರು ಇದ್ದಾರೆ. ಆದರೆ ಕೆಳ ವರ್ಗದವರು ಜಾತಿ ಸಮಾವೇಶ, ಸಭೆಗಳ ಮೂಲಕವೇ ಸಂಘಟಿತರಾಗಲು ಸಾಧ್ಯ. ಸಂಘಟನೆಯಿಂದ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.
‘ಶೂದ್ರರ ಪ್ರವೇಶಕ್ಕೆ ಅವಕಾಶ ಕಲ್ಪಿಸದ ದೇವಾಲಯ ನಮಗೆ ಬೇಡ. ನಮ್ಮನ್ನು ಅಸ್ಪೃಶ್ಯತೆಯಲ್ಲಿ ಇಡುವ ದೇವರು ನಮಗೇಕೆ ಬೇಕು. ನಾವೇ ದೇವಾಲಯ ಕಟ್ಟಿಕೊಳ್ಳೋಣ ಎಂದು ಬ್ರಹ್ಮಶ್ರೀ ನಾರಾಯಣ ಗುರು ಅವರು ಆಗಲೇ ಕ್ರಾಂತಿ ಆರಂಭಿಸಿದ್ದರು. ಅದು ಇಂದಿಗೂ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ’ ಎಂದರು.

ಆತ್ಮ ಸಾಕ್ಷಿಯಂತೆ ನಡೆಯುವುದೇ ಧರ್ಮ: ‘ಧರ್ಮ ಎಂಬುದು ಜೀವನದ ವಿಧಾನವಾಗಿದೆ. ನಾವು ಹೇಗೆ ಇನ್ನೊಬ್ಬರಿಗೆ ಮಾದರಿಯಾಗಿ ಬದುಕ ಬೇಕು ಎಂಬುದನ್ನು ಧರ್ಮ ಹೇಳುತ್ತದೆ. ಆತ್ಮ ವಂಚನೆ ಮಾಡಿಕೊಳ್ಳದೆ, ಆತ್ಮ ಸಾಕ್ಷಿಗೆ ಅನುಗುಣವಾಗಿ ನಡೆಯುವುದೇ ಧರ್ಮ. ಇದಿರುವುದು ನಮಗಾಗಿಯೇ ಹೊರತು ನಾವಿರುವುದು ಧರ್ಮಕ್ಕಾಗಿ ಅಲ್ಲ. ಧರ್ಮ ಮಾನವ ಕಲ್ಯಾಣ ಕಾರ್ಯ ಮಾಡಬೇಕು ಎಂದರು.

‘ಶಿಕ್ಷಣಕ್ಕಿಂತ ಪ್ರಬಲವಾದ ಅಸ್ತ್ರ ಹಿಂದುಳಿದ ಮತ್ತು ತುಳಿತಕ್ಕೆ ಒಳಗಾದವರಿಗೆ ಇಲ್ಲ. ಹಾಗಾಗಿ ಹೆಚ್ಚು ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಬೇಕು. ಅವುಗಳಿಗೆ ಪ್ರೋತ್ಸಾಹ, ಸಹಕಾರ ನೀಡಲೆಂದು ಬಜೆಟ್‌ನಲ್ಲಿ ರೂ 100 ಮೀಸಲಿಟ್ಟಿದ್ದೇನೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

ಸಿ.ಎಂ ಕೈ ಬಲಪಡಿಸಬೇಕು: ನಗರಾಭಿವೃದ್ಧಿ ಸಚಿವ ವಿನಯ್‌ ಕುಮಾರ್‌ ಸೊರಕೆ ಮಾತನಾಡಿ, ಮುಖ್ಯಮಂತ್ರಿ ಸಿದ್ದ
ರಾಮಯ್ಯ ಅವರು ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಅದಕ್ಕಾಗಿ ಅವರ ಕೈಬಲಪಡಿಸುವ ಕೆಲಸ ಆಗಬೇಕು ಎಂದರು. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರಿಗೆ ಜನಸಂಖ್ಯೆ ಆಧಾರದ ಮೇಲೆ ಅನುದಾನ ನಿಗದಿಪಡಿಸಬೇಕು ಎಂಬ ಆಶಯ ಸಿ.ಎಂ ಅವರಿಗಿದ್ದು, ಅದನ್ನು ಅವರು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.