ADVERTISEMENT

ಜಾನಪದದ ಸಮಗ್ರ ಅಧ್ಯಯನ ಅಗತ್ಯ

ವಿಶ್ವ ಜಾನಪದ ದಿನಾಚರಣೆಯಲ್ಲಿ ಕನ್ನಡ ಪರಿಷತ್ತಿನ ರಾಜ್ಯ ಕಾರ್ಯಾಧ್ಯಕ್ಷ ಎಸ್‌. ಬಾಲಾಜಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2015, 9:32 IST
Last Updated 23 ಆಗಸ್ಟ್ 2015, 9:32 IST

ರಾಮನಗರ: ‘ಜಾನಪದ ಕ್ಷೇತ್ರಕ್ಕೆ ತನ್ನದೇ ಆದ ವಿನ್ಯಾಸ ಹಾಗೂ ವಿಸ್ತೀರ್ಣವಿದೆ,  ಜಾನಪದ ಕ್ಷೇತ್ರವನ್ನು ಹಾಡು, ಕುಣಿತಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ’ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಕಾರ್ಯಾಧ್ಯಕ್ಷ  ಡಾ. ಎಸ್. ಬಾಲಾಜಿ ವಿಷಾದಿಸಿದರು.

ಬಿಡದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಾತೃಭೂಮಿ ಸಂಸ್ಥೆ ಜಂಟಿಯಾಗಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ‘ಜಾನಪದ ಕ್ಷೇತ್ರವು ಗಣಿತ, ಜ್ಞಾನ, ಔಷಧಿ ಹಾಗೂ ಇನ್ನಿತರೇ ವಿಷಯಗಳನ್ನೊಳಗೊಂಡಿದ್ದು, ಇದನ್ನು ಕೆಲವೇ ಕ್ಷೇತ್ರಕ್ಕೆ ಸೀಮಿತಗೊಳಿಸಲಾಗಿದೆ. ಈ ಬಗ್ಗೆ ಸಂಶೋಧಕರು ಹೆಚ್ಚಿನ ಚಿಂತನೆ ನಡೆಸಬೇಕಾಗಿದೆ’ ಎಂದು ಅವರು ಹೇಳಿದರು.

‘ಜಾನಪದ ಕ್ಷೇತ್ರವನ್ನು ಪ್ರೋತ್ಸಾಹಿಸುವ ಕೆಲಸ ಸರ್ಕಾರಗಳಿಂದ ನಡೆಯಬೇಕು. ಜನಪದ ಚಟುವಟಿಕೆಗಳು ಜನರಿಗೆ ಮನರಂಜನೆ ಜತೆಗೆ ಮಾನವೀಯ ಮೌಲ್ಯ, ಜೀವನೋತ್ಸಾಹ, ಶಾಂತಿ, ನೆಮ್ಮದಿಯನ್ನು ನೀಡುತ್ತದೆ. ಆಧುನಿಕ ಜಗತ್ತಿನಲ್ಲಿ ಮಾನವ ಯಾಂತ್ರಿಕ ಜೀವನ ಕ್ರಮದಿಂದ ಒತ್ತಡಗಳಿಂದ ಹೊರಬರಲು ಜನಪದ ಕಲೆಗಳು ಪರಿಣಾಮಕಾರಿಯಾಗಿ ನೆರವಾಗುತ್ತವೆ’ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕನಕತಾರ ಮಾತನಾಡಿ, ‘ಉತ್ತಮ ಗುಣಗಳನ್ನು ರೂಢಿಸಿಕೊಳ್ಳುವ ಯುವ ಸಮುದಾಯದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಯುವ ಸಮುದಾಯ ಸರಿಯಾದ ಮಾರ್ಗದಲ್ಲಿ ಸಾಗಬೇಕು, ದೇಶಾಭಿಮಾನ ಹೊಂದಿರಬೇಕು ಹಾಗೂ ಸಂಸ್ಕೃತಿಯನ್ನು ಗೌರವಿಸಬೇಕು’ ಎಂದರು.

ಕನ್ನಡ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಂಗಳ ಹಾರೋಕೊಪ್ಪ ಮಾತನಾಡಿ, ‘ಭಾರತೀಯ ಜಾನಪದ ಸಂಸ್ಕೃತಿಯು ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ. ಅಲ್ಲದೆ ಇದು ಸಮಾಜದಲ್ಲಿ ಬದುಕುವ ರೀತಿ, ನೀತಿ ತಿಳಿಸಿಕೊಡುತ್ತದೆ’ ಎಂದು ಹೇಳಿದರು.

ಜಾನಪದ ಮಹಾಕಾವ್ಯ ಗಾಯಕ ಕೊನಮಾನಹಳ್ಳಿ ಲಕ್ಷ್ಮಣ ಸ್ವಾಮಿಯವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಎನ್ಎಸ್ಎಸ್. ಅಧಿಕಾರಿ ಜಗದಾಂಬ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಪ್ರಾಂಶುಪಾಲರಾದ ಡಾ.ಗಾಯಿತ್ರಿ ಈ ಮಂಡಿ ಅಧ್ಯಕ್ಷತೆ ವಹಿಸಿದ್ದರು, ಕಲಾವಿದ ರಾಮು ಮತ್ತು ತಂಡದವರು ಪರಶೂರಾಮ್ ಚೌಡಿಕೆ ಪದಗಳನ್ನು, ಜನಪದ ಗೀತೆಗಳನ್ನು ಹಾಗೂ ಕೊನಮಾನಹಳ್ಳಿ ಲಕ್ಷ್ಮಣಸ್ವಾಮಿ ಅವರು ಜನಪದ ಮಹಾಕಾವ್ಯ ಕಥನಗೀತೆಗಳನ್ನು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.