ADVERTISEMENT

‘ಜಿಲ್ಲೆಯಲ್ಲಿ ಕುತಂತ್ರದ ರಾಜಕೀಯ’

ಮಾದಿಗೊಂಡನ ಹಳ್ಳಿಯಲ್ಲಿ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 8:47 IST
Last Updated 30 ಜನವರಿ 2017, 8:47 IST
ಕುದೂರು(ಮಾಗಡಿ) ಹೋಬಳಿಯ ಮಾದಿಗೊಂಡನಹಳ್ಳಿಯಲ್ಲಿ ಭಾನುವಾರ ಎಂ.ಸಿ.ಸಿ. ಕ್ರಿಕೆಟರ್ಸ್‌ ವತಿಯಿಂದ  ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಮಂಜುನಾಥ ಕ್ರಿಕೆಟ್‌ ತಂಡದ ಸದಸ್ಯರನ್ನು ಪರಿಚಯ ಮಾಡಿಕೊಂಡರು
ಕುದೂರು(ಮಾಗಡಿ) ಹೋಬಳಿಯ ಮಾದಿಗೊಂಡನಹಳ್ಳಿಯಲ್ಲಿ ಭಾನುವಾರ ಎಂ.ಸಿ.ಸಿ. ಕ್ರಿಕೆಟರ್ಸ್‌ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಮಂಜುನಾಥ ಕ್ರಿಕೆಟ್‌ ತಂಡದ ಸದಸ್ಯರನ್ನು ಪರಿಚಯ ಮಾಡಿಕೊಂಡರು   

ಕುದೂರು(ಮಾಗಡಿ): ಕ್ರೀಡೆಗಳು ಯುವಜನತೆಯಲ್ಲಿ ಸೌಹಾರ್ದವನ್ನು ಮೂಡಿಸುತ್ತವೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಎ,ಮಂಜುನಾಥ ತಿಳಿಸಿದರು. ಮಾದಿಗೊಂಡನ ಹಳ್ಳಿಯಲ್ಲಿ ಭಾನುವಾರ ಎಂಸಿಸಿ ಕ್ರಿಕೆಟರ್ಸ್‌ ಏರ್ಪಡಿಸಿದ್ದ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನತೆ ಇಂದು ಕನಿಷ್ಠ ಪದವಿ ಗಳಿಸುವವರೆಗೆ ವಿದ್ಯಾಭ್ಯಾಸ ಮಾಡಬೇಕು. ಮತದಾನ ಮಾಡುವಾಗ ಪ್ರಜಾರಾಜ್ಯದ ಕಲ್ಪನೆ  ಗಮನಿಸಿ, ಉತ್ತಮರಿಗೆ ಮತ ನೀಡಬೇಕು ಎಂದರು.

ತಾಲ್ಲೂಕಿನ ಜನತೆಯನ್ನು ನಂಬಿ ಜನಸೇವೆ ಮಾಡಲು  ರಾಜಕೀಯಕ್ಕೆ ಬಂದಿದ್ದೇನೆ.  ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಕುತಂತ್ರದಿಂದಲೇ ರಾಜಕಾರಣ ನಡೆಯುತ್ತಿದೆ ಎಂಬುದು ಗೊತ್ತಿದೆ. ನಾನು ಜನರೊಡಗೂಡಿ ಹೋರಾಟ ಮಾಡುವವನು, ಹಣಕ್ಕಾಗಿ ಸ್ವಾಭಿಮಾನ ಮಾರಿಕೊಳ್ಳುವ ರಾಜಕಾರಣಿ ನಾನಲ್ಲ’ ಎಂದು ಅವರು ಹೇಳಿದರು.

‘ನಾನು ದೇವೇಗೌಡ,  ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ ಎಂದು ಶಾಸಕ  ರು ಸುಳ್ಳಿನ ಕಂತೆ ಕಟ್ಟುತ್ತಿದ್ದಾರೆ. ಅವರಲ್ಲಿ ಸಾಕ್ಷ್ಯಾಧಾರಗಳಿದ್ದರೆ ಸಾಬೀತು ಪಡಿಸಲಿ. ಅದು ಬಿಟ್ಟು ಒಂದು ಸುಳ್ಳನ್ನು ಪದೇ ಪದೇ ಹೇಳಿ ಜನರನ್ನು  ನಂಬಿಸುತ್ತೇನೆಂದು ಹೊರಟಿರುವುದು ಅವರಿಗೆ ಶೋಭೆ ತರುವಂತದ್ದಲ್ಲ’ ಎಂದು  ಹೇಳಿದರು.

ಶಾಸಕ ಬಾಲಕೃಷ್ಣ ಯಾವುದೇ ಪಕ್ಷದಲ್ಲಿರಲಿ ನಾನೇ ಅವರ ಎದುರಾಳಿಯಾಗುತ್ತೇನೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ದೇವೇಗೌಡರು, ಕುಮಾರಸ್ವಾಮಿಯವರಿಗೆ ತಿರುಗುಬಾಣವಾದ ಬಾಲಕೃಷ್ಣರವರು ಕಾಂಗ್ರೆಸ್ ಸೇರಿದರೆ ಅಲ್ಲಿಯೂ ಅವರ ಚಾಳಿ ಮುಂದುವರಿಸುವುದರಲ್ಲಿ ಅನುಮಾನವಿಲ್ಲವೆಂದು ಮಂಜು ಹೇಳಿದರು.
ಮಾದಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆಂಚೇಗೌಡ, ಸದಸ್ಯರಾದ ಮಾರುತಿ, ವೆಂಕಟೇಶ್, ಡಿಸಿಸಿ ಸದಸ್ಯ ಶ್ರೀನಿವಾಸ್, ತಗ್ಗಿಕುಪ್ಪೆ ರಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.