ADVERTISEMENT

ತಾ.ಪಂ.ಗೆ ಅವಿರೋಧ ಆಯ್ಕೆ

ನೂತನ ಅಧ್ಯಕ್ಷರಾಗಿ ರಮ್ಯರವಿ, ಉಪಾಧ್ಯಕ್ಷರಾಗಿ ಪವಿತ್ರಾ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 11:28 IST
Last Updated 18 ಏಪ್ರಿಲ್ 2015, 11:28 IST

ಚನ್ನಪಟ್ಟಣ:  ತಾಲ್ಲೂಕು ಪಂಚಾಯಿತಿಯ ನೂತನ ಅಧ್ಯಕ್ಷ್ಷರಾಗಿ ರಮ್ಯರವಿ, ಉಪಾಧ್ಯಕ್ಷರಾಗಿ ಪವಿತ್ರಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಮ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಪವಿತ್ರ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧ ಆಯ್ಕೆ ನಡೆಯಿತು.

ಈ ಹಿಂದಿನ ಅಧ್ಯಕ್ಷ-ಉಪಾಧ್ಯಕ್ಷರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನಡೆಯಿತು. ಮುಂದಿನ ಹತ್ತು ತಿಂಗಳ ಅವಧಿಗೆ ಈ ಇಬ್ಬರು ಅಧ್ಯಕ್ಷ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಮ್ಯರವಿ ಮಳೂರುಪಟ್ಟಣ ಕ್ಷೇತ್ರದಿಂದ, ಪವಿತ್ರಾ ಹೊಂಗನೂರು ಕ್ಷೇತ್ರದಿಂದ ಆಯ್ಕೆಯಾಗಿದ್ದವರು. ಚುನಾವಣಾಧಿಕಾರಿಯಾಗಿ ರಾಜೇಂದ್ರಪ್ರಸಾದ್ ಕಾರ್ಯನಿರ್ವಹಸಿದರು.

ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ: ನೂತನ ತಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ರಮ್ಯರವಿ, ತಾಲ್ಲೂಕಿನಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಅಭಿನಂದನೆ: ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಜಿ.ಪಂ.ಸದಸ್ಯೆ ಯು.ಪಿ.ನಾಗೇಶ್ವರಿ, ತಾ.ಪಂ.ಸದಸ್ಯರಾದ ಮಾರೇಗೌಡ, ಗುರುಕುಮಾರ್, ಸವಿತಾ, ಜಯಮ್ಮ, ಪುಟ್ಟಮ್ಮ, ಲಕ್ಕಮ್ಮ, ಪವಿತ್ರ, ಲಕ್ಷ್ಮಮ್ಮ, ಭಾನುಪ್ರಸಾದ್, ಹನುಮಂತಯ್ಯ, ವೆಂಕಟೇಶ್, ಮುಖಂಡರಾದ ಸಿಂ.ಲಿಂ.ನಾಗರಾಜು, ಅರಳಾಳುಸಂದ್ರ ಶಿವಪ್ಪ, ತಮ್ಮಣ್ಣ ಅಭಿನಂದಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.