ADVERTISEMENT

‘ದೇಸಿ ಕಲೆಗಳ ಉಳಿವು ಅಗತ್ಯ’

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 10:28 IST
Last Updated 24 ಜನವರಿ 2017, 10:28 IST
‘ದೇಸಿ ಕಲೆಗಳ ಉಳಿವು ಅಗತ್ಯ’
‘ದೇಸಿ ಕಲೆಗಳ ಉಳಿವು ಅಗತ್ಯ’   

ರಾಮನಗರ: ‘ಆಧುನಿಕತೆಯ ಪ್ರಭಾವದಿಂದಾಗಿ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಲೆಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದು ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹರೂರು ರಾಜಣ್ಣ ಹೇಳಿದರು.

ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಚೆಗೆ ಹಮ್ಮಿಕೊಂಡಿದ್ದ ಜನಪರ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜನಪದ ಕಲೆಗಳಲ್ಲಿ ದೇಸಿಯ ಸೊಗಡು ಕಾಣಬಹುದು. ಈ ನೆಲದ  ಸಂಸ್ಕೃತಿ ಹಾಗೂ ಸಂಸ್ಕಾರ ಅದರಲ್ಲಿ ಅಡಕವಾಗಿದೆ. ಮುಂದಿನ ಪೀಳಿಗೆಗೆ ಅದನ್ನು ಉಳಿಸಿಕೊಂಡು ಹೋಗಬೇಕು’ ಎಂದರು.

‘ರಾಮನಗರ ಜಿಲ್ಲೆಯ ಜನಮಾನಸ ದಲ್ಲಿ ಜಿಲ್ಲೆಯ ಕಲೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಜನಪರ ಉತ್ಸವ ಉತ್ತಮ ಪ್ರಯತ್ನವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಸ್ಕೃತಿ ಉಳಿಸುವ ವಾತಾವರಣ ನಿರ್ಮಿಸಲು ಮುಂದಾಗಿರುವುದು ಶ್ಲಾಘನೀಯ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್‌ ಮಾತನಾಡಿ ‘ಕಲೆ ಸಂಸ್ಕೃತಿ ಉಳಿಸಲು ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ಸಂಗತಿ.ಜನಪದ ಸಂಸ್ಕೃತಿ ಪ್ರತೀಕವಾಗಿರುವ ಜನಪದ ವಾದ್ಯ, ಕಲೆಗಳು ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ’ ಎಂದು ಅವರು ತಿಳಿಸಿದರು.

ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ರಾ.ಸಿ. ದೇವರಾಜ್‌ ಮಾತನಾಡಿ ‘ದಲಿತ ಜನರ ಸಂಸ್ಕೃತಿಯ ಹಿಂದೆ ವಾದ್ಯ ಸಂಗೀತ, ಬದುಕುವ ಕಲೆ ಅಡಗಿದೆ’ ಎಂದು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು ಮಾತನಾಡಿ ‘ಜನಪದ ಕಲೆಗಳನ್ನು ಸಂರಕ್ಷಣೆ ಮಾಡುವ ದಿಸೆಯಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಕಲಾವಿದರು  ಯೋಜನೆಗಳ ಸದುಪಯೋಗ ಪಡೆಯಬೇಕು’ ಎಂದರು.

ರಸದೌತಣ ನೀಡಿದ ಕಾರ್ಯಕ್ರಮ: ‘ಜನಪರ ಉತ್ಸವ’ದಲ್ಲಿ ಜಿಲ್ಲೆಯ ಕಲಾವಿದರು ಜನಪದ ಕಲೆಗಳನ್ನು ಪ್ರದರ್ಶಿಸುವ ಮೂಲಕ  ಗಮನ ಸೆಳೆದರು. ಪೂಜಾಕುಣಿತ, ಡೊಳ್ಳುಕುಣಿತ, ತಮಟೆವಾದನ, ಗಾರುಡಿ ಗೊಂಬೆ ಕಲಾವಿದರು ನೃತ್ಯ ಪ್ರದರ್ಶಿಸಿ ಜನಪರ ಉತ್ಸವದ ಮೆರುಗು ಹೆಚ್ಚಿಸಿದರು. ಸೋಬಾನೆ ಪದ, ತತ್ವಪದ, ರಂಗಗೀತೆ, ಜಾನಪದ ಗೀತಗಾಯನವನ್ನು ಹಮ್ಮಿಕೊಳ್ಳಲಾಗಿತ್ತು. ಸೋಬಾನೆ ಗಾಯಕಿಯರಾದ ಮಾಯಮ್ಮ, ಬಾನಂದೂರು ಬೋರಮ್ಮ, ಸಂಘಟಕ ಗುರುಮಲ್ಲಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.