ADVERTISEMENT

ನಿರಂತರ ವಿದ್ಯುತ್, ವನ್ಯಜೀವಿ ಹಾವಳಿ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 11:42 IST
Last Updated 11 ಜನವರಿ 2017, 11:42 IST

ರಾಮನಗರ: ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತು ನಿರಂತರ ವಿದ್ಯುತ್‌ ಪೂರೈಸಿ. ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಿ. ಜನರಿಗೆ ನೀರು, ದನಗಳಿಗೆ ಮೇವಿಗೆ ಕೊರತೆ ಆಗದಂತೆ ನೋಡಿಕೊಳ್ಳಿ. ರೇಷ್ಮೆ ಮಾರುಕಟ್ಟೆ, ಎಪಿಎಂಸಿಯಲ್ಲಿ ದಳ್ಳಾಳಿಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಿ...

ಇದು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಬಿ.ಆರ್. ಮಮತಾ ನೇತೃತ್ವದಲ್ಲಿ ನಡೆದ ಕುಂದುಕೊರತೆ ಆಲಿಕೆ ಸಭೆಯಲ್ಲಿ ರೈತ ಮುಖಂಡರು ಮಾಡಿದ ಆಗ್ರಹಗಳು. ಸುಮಾರು ಎರಡು ಗಂಟೆ ನಡೆದ ಈ ಸಭೆಯಲ್ಲಿ ರೈತರು–ಅಧಿಕಾರಿಗಳ ನಡುವೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.

ರೈತ ಸಂಘದ ಮುಖಂಡ ಲಕ್ಷ್ಮಿನಾರಾಯಣ್‌ ಮಾತನಾಡಿ, ‘ಜಿಲ್ಲೆಯಲ್ಲಿ ಬರದ ಪರಿಸ್ಥಿತಿಯಲ್ಲೂ ಅಧಿಕಾರಿಗಳು ರೈತರನ್ನು ಶೋಷಿಸುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡುತ್ತಿಲ್ಲ. ಬಿಡುಗಡೆಯಾದ ಸಬ್ಸಿಡಿ, ಅನುದಾನ ರೈತರ ಕೈ ಸೇರುತ್ತಿಲ್ಲ. ಮೇವು ಬ್ಯಾಂಕ್‌ಗಳು ತಾಲ್ಲೂಕು ಮಟ್ಟದಲ್ಲಿ ಸ್ಥಾಪನೆಯಾಗುತ್ತಿರುವುದರಿಂದ ರೈತರಿಗೆ ಯಾವುದೇ ಅನುಕೂಲವಾಗುತ್ತಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೇವಿನ ಬ್ಯಾಂಕುಗಳನ್ನು ತೆರೆಯಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲಾಡಳಿತ ನಿಯಮಿತವಾಗಿ ಸಭೆ ನಡೆಸಿ ರೈತ ಸಮಸ್ಯೆಗಳನ್ನು ಆಲಿಸಬೇಕು. ಬರದ ಹಿನ್ನೆಲೆಯಲ್ಲಿ ಈ ಬಾರಿ ಶೇ 100ರಷ್ಟು ಪರಿಹಾರ ಹಾಗೂ ಸಬ್ಸಿಡಿ ವಿತರಣೆಯಾಗಬೇಕು’ ಎಂದು ಹೇಳಿದರು.

ರೈತ ಸಂಘದ ಉಪಾಧ್ಯಕ್ಷ ಎಂ. ರಾಮು ಮಾತನಾಡಿ ‘ಅರಣ್ಯ ಇಲಾಖೆಯು ಕಾಡಿನಲ್ಲಿ ಅಕೇಶಿಯಾ, ನೀಲಗಿರಿ ತೋಪು ಬೆಳೆಸುತ್ತಿರುವ ಕಾರಣ ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗಿದೆ. ಹೀಗಾಗಿ ಅರಣ್ಯದಲ್ಲಿ ಆಲ, ಬಸರಿ, ಹಲಸು, ಬಿದಿರು ಮೊದಲಾದ ಮರಗಳನ್ನು ಬೆಳೆಸಲು ಸೂಚಿಸಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಮಲ್ಲಯ್ಯ ಮಾತನಾಡಿ ‘ಜಿಲ್ಲೆಯಲ್ಲಿ ರೈತರ ಜಮೀನನ್ನು ಮತ್ತೊಬ್ಬರ ಹೆಸರಿಗೆ ಖಾತೆ ಮಾಡಿಕೊಡುವ ದಂಧೆಯೇ ನಡೆಯುತ್ತಿದ್ದು, ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು. ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರಿಗೆ ಚೆಕ್‌ ಬದಲಾಗಿ ನಗದು ನೀಡುವಂತೆ ಸೂಚಿಸಬೇಕು. ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆದಿದ್ದು, ಪರವಾನಗಿ ಇಲ್ಲದೆಯೇ ಈ ಕೃತ್ಯದಲ್ಲಿ ತೊಡಗಿಕೊಂಡವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಹಿರಿಯ ರೈತ ಮುಖಂಡ ಸಿ. ಪುಟ್ಟಸ್ವಾಮಿ ಮಾತನಾಡಿ, ‘ಅರಣ್ಯ ನಾಶ ತಪ್ಪಿಸಿ, ಕಾಡಿನಲ್ಲೇ ವನ್ಯಜೀವಿಗಳಿಗೆ ನೀರು ಸರಬರಾಜು ಮಾಡಬೇಕು. ಕೈಗಾರಿಕೆಗಳ ಮೇಲೆ ನಿರ್ಬಂಧ ಹೇರುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಸಂವಾದ ಕಾರ್ಯಕ್ರಮಗಳ ಮೂಲಕ ಜನರಿಗೆ ಕಾನೂನಿನ ಅರಿವು ನೀಡಬೇಕು’ ಎಂದು ಸಲಹೆ ನೀಡಿದರು. ಮೇಕೆದಾಟು ಯೋಜನೆ ಅನುಷ್ಠಾನದ ಸಂಬಂಧ ಜಿಲ್ಲಾಡಳಿತವು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಆಗ್ರಹಿಸಿದರು.

‘ಜಿಲ್ಲೆಯ ಎಪಿಎಂಸಿ ಹಾಗೂ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ರೈತರನ್ನು ಶೋಷಿಸಲಾಗುತ್ತಿದೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣಸ್ವಾಮಿ ಒತ್ತಾಯಿಸಿದರು. ‘ಸರ್ಕಾರದ ವಿವಿಧ ಯೋಜನೆಗಳ ಸಬ್ಸಿಡಿ ಹಣವನ್ನು ರೈತರಿಗೆ ಶೀಘ್ರ ತಲುಪಿಸಬೇಕು. ಮಂಚನಬೆಲೆ ಜಲಾಶಯದಿಂದ ಸುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಶೀಘ್ರ ಕಾರ್ಯರೂಪಕ್ಕೆ ತರಬೇಕು’ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬೈರೇಗೌಡ ಕೋರಿದರು. ಕೃಷಿ ಹೊಂಡ ನಿರ್ಮಾಣ ಯೋಜನೆಯ ಅಡಿ ರೈತರಿಗೆ ನೀಡಿರುವ ಟಾರ್ಪಲ್‌ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸಂಪತ್‌ಕುಮಾರ್‌ ದೂರಿದರು.

‘ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಜನರ ನಡುವೆ ಸಮನ್ವಯ ಸಾಧಿಸಬೇಕು’ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಅನಸೂಯಮ್ಮ ಕಿವಿಮಾತುಹೇಳಿದರು. ‘ಅಧಿಕಾರಿಗಳು ನಿಯಮಿತವಾಗಿ ಸಭೆ ಆಯೋಜಿಸಿ ರೈತರ ಸಮಸ್ಯೆ ಆಲಿಸಬೇಕು’ ಎಂದು ಕೃಷಿಕ ಸಮಾಜದ ದೇವರಾಜು ಇತರರು ಮನವಿ ಮಾಡಿದರು.

ನರೇಗಾ ದುರುಪಯೋಗ ಆರೋಪ
ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಅಕ್ರಮ ಮತ್ತು ಜಾಬ್‌ ಕಾರ್ಡ್‌ ದುರುಪಯೋಗ ಕುರಿತು ರೈತ ಮುಖಂಡರು

ಸಭೆಯಲ್ಲಿ ದೂರಿದರು, ಇದಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪಿ. ಶೈಲಜಾ ಹಾಗೂ ಜಿಲ್ಲಾಧಿಕಾರಿ ಮಮತಾ ಪ್ರತಿಕ್ರಿಯೆ ನೀಡಿದರು. 
‘ನರೇಗಾ ಅನುಷ್ಠಾನದಲ್ಲಿ ಜಿಲ್ಲೆಯು ದೇಶಕ್ಕೇ ಮಾದರಿ ಆಗುವತ್ತ ಹೆಜ್ಜೆ ಇಟ್ಟಿದೆ. ಆಗಿರುವ ಲೋಪಗಳ ಕುರಿತು ನಿರ್ದಿಷ್ಟ ದೂರು ನೀಡಿದಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಉಪವಿಭಾಗಾಧಿಕಾರಿ ರಾಜೇಂದ್ರ ಪ್ರಸಾದ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೀಪಜಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಕೆ.ಎನ್‌. ರೂಪಶ್ರೀ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಸಿದ್ದರಾಮಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರೈತರು ಸಭೆಯಲ್ಲಿ ಭಾಗವಹಿಸಿದ್ದರು.

ರೈತರ ಬೇಡಿಕೆಗಳು
* ಹಗಲು ಹೊತ್ತು 3 ಪೇಸ್‌ ವಿದ್ಯುತ್‌ ‌ನೀಡಿ

* ವನ್ಯಜೀವಿಗಳ ಹಾವಳಿ ನಿಯಂತ್ರಿಸಿ

* ಗ್ರಾ.ಪಂ. ಮಟ್ಟದಲ್ಲಿ   ಮೇವುಬ್ಯಾಂಕ್ ಸ್ಥಾಪಿಸಿ*ಮೇಕೆದಾಟು ಯೋಜನೆ ಕಾರ್ಯರೂಪಕ್ಕೆ ತನ್ನಿ

*ಎಪಿಎಂಸಿ, ರೇಷ್ಮೆಗೂಡು ಮಾರುಕಟ್ಟೆಯಲ್ಲಿ ದಳ್ಳಾಳಿಗಳ ಹಾವಳಿ ನಿಯಂತ್ರಿಸಿ

*ಎಪಿಎಂಸಿ ಚುನಾವಣೆಯಲ್ಲಿ ಎಲ್ಲ ರೈತರಿಗೂ ಮತದಾನದ ಹಕ್ಕು ನೀಡಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.