ADVERTISEMENT

ನೀರು ಪೂರೈಕೆ: ಪೊಲೀಸರಿಗೆ ಮೊರೆ!

ಸಮಸ್ಯೆ ಬಗೆಹರಿಸಲು ಕಗ್ಗಲಹಳ್ಳಿ ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2015, 10:10 IST
Last Updated 4 ಆಗಸ್ಟ್ 2015, 10:10 IST

ಕನಕಪುರ: ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕಗ್ಗಲಹಳ್ಳಿ ಗ್ರಾಮದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಹಾರೋಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಗ್ಗಲಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಂತರ ರಾಜಕೀಯ ದ್ವೇಷದಿಂದ ಸೋತವರ ಜಮೀನಿನ ಮೂಲಕ ಹಾದು ಹೋಗಿದ್ದ ನೀರಿನ ಪೈಪ್‌ ಅನ್ನು ತುಂಡರಿಸಿದ್ದಾರೆ. ಜಮೀನಿನ ಪಕ್ಕದಲ್ಲಿದ್ದ ಕೊಳವೆ ಬಾವಿ ತಮಗೆ ಸೇರಬೇಕೆಂದು ತಕರಾರು ತೆಗೆದು ಕುಡಿಯುವ ನೀರು ಪೂರೈಕೆಯಾಗದಂತೆ ತಡೆ ಹಿಡಿದಿದ್ದಾರೆ ಎಂದು ದೂರಿದ್ದಾರೆ. ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಉಲ್ಬಣವಾಗಿದೆ ಎಂದು ತಿಳಿಸಿದರು.

ಕೊಳವೆಬಾವಿ ಗ್ರಾಮ ಪಂಚಾಯಿತಿಗೆ ಸೇರಬೇಕೆಂದು ಗೊತ್ತಾಗಿ ಗ್ರಾಮದವರೆಲ್ಲಾ ಸೇರಿ ಸಮಸ್ಯೆ ಪರಿಹರಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ. ಹೀಗಾಗಿ ಬೇಸತ್ತು ನೂರಕ್ಕೂ ಹೆಚ್ಚು ಮಹಿಳೆಯರು ಪೊಲೀಸ್‌ ಠಾಣೆಗೆ ಬಂದು ಗ್ರಾಮದಲ್ಲಿನ ನೀರಿನ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಹಾರೋಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹಾರೋಹಳ್ಳಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಇರಲಿಲ್ಲ.  ಚುನಾವಣೆ ಆದ ಮೇಲೆ ಸಮಸ್ಯೆ ಎದುರಾಗಿದೆ. ಜಮೀನಿನಲ್ಲಿ ಹಾದು ಹೋಗಿರುವ ಪೈಪ್‌ ಅನ್ನು ಕಡಿತಗೊಳಿಸಿದ್ದರು. ಬೇರೆಕಡೆ ಪೈಪ್‌ ಅನ್ನು ತಂದಿದ್ದೇವೆ. ಈಗ ಕೊಳವೆ ಬಾವಿ ನಮಗೆ ಸೇರಬೇಕೆಂದು ಅಡ್ಡಿಪಡಿಸಿದ್ದರು. ಅದು ಪಂಚಾಯಿತಿಗೆ ಸೇರಬೇಕಿದೆ. ಪೊಲೀಸರು ತೆರವುಗೊಳಿಸಿ ಗ್ರಾಮಕ್ಕೆ ನೀರು ತರಲು ಸಹಕಾರ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಫಕೀರಪ್ಪ ತಿಳಿಸಿದರು.

ಕಳೆದ ಒಂದು ತಿಂಗಳಿನಿಂದ ಗ್ರಾಮದಕ್ಕೆ ಸ್ವಂತ ಖರ್ಚಿನಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿಸದಸ್ಯೆ ಧನಲಕ್ಷ್ಮಿ ರಾಜಣ್ಣ ತಿಳಿಸಿದರು.
*
ಚುನಾವಣೆಯಲ್ಲಿ ಸೋತಿದ್ದರಿಂದ ನೀರು ಪೂರೈಸಲು ತೊಂದರೆ ನೀಡುತ್ತಿದ್ದಾರೆ. ದ್ವೇಷದಿಂದ ಹೀಗೆ ಮಾಡುತ್ತಿದ್ದಾರೆ. ನೀರಿನ ಸೌಕರ್ಯ ಇದ್ದರೂ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ
-ಧನಲಕ್ಷ್ಮೀ ರಾಜಣ್ಣ,
ಗ್ರಾಮ ಪಂಚಾಯಿತಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.