ADVERTISEMENT

ನೀರು ಶುದ್ಧೀಕರಿಸಿ ಕುಡಿಯಲು ಸಲಹೆ

ಜಲ ಸಂಬಂಧಿ ಕಾಯಿಲೆ ತಪ್ಪಿಸಲು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮನವಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 6:09 IST
Last Updated 10 ಏಪ್ರಿಲ್ 2017, 6:09 IST

ರಾಮನಗರ: ಬೇಸಿಗೆಯ ತೀವ್ರತೆ ಹೆಚ್ಚಿದಂತೆ ಜಲ ಮೂಲಗಳು ಬತ್ತುತ್ತಿವೆ. ನದಿ, ಕೆರೆಗಳ ಒಡಲು ಬರಿದಾಗುತ್ತಿದ್ದು, ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಇದರಿಂದಾಗಿ ಕುಡಿಯುವ ನೀರಿನ ಮೂಲ ಕಲುಷಿತಗೊಂಡು ಜಲ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಭೀತಿ ಇದೆ. ಹೀಗಾಗಿ ನೀರನ್ನು ಶುದ್ಧಗೊಳಿಸಿಯೇ ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

‘ಕಲುಷಿತ ನೀರಿನ ಸೇವನೆಯಿಂದ ವಾಂತಿ–ಭೇದಿ, ಜಾಂಡಿಸ್‌, ಟೈಫಾಯ್ಡ್‌, ಕಾಲರಾದಂತಹ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಯಿದೆ. ಹೀಗಾಗಿ ಬೇಸಿಗೆಯಲ್ಲಿ ಶುದ್ಧ ನೀರನ್ನು ಕುಡಿಯಲು ಜನರು ಒತ್ತು ನೀಡಬೇಕು’ ಎಂದು ಸಲಹೆ ನೀಡುತ್ತಾರೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ವಿ. ಶಿವರಾಜು.

‘ಕೊಳವೆಬಾವಿ, ಕುಡಿಯುವ ನೀರಿನ ಪೈಪ್‌ಗೆ ಚರಂಡಿ ನೀರು ಸೇರಿ ಕಲುಷಿತಗೊಂಡ ನೀರನ್ನು ಕುಡಿದರೆ ವಾಂತಿ–ಭೇದಿ ಶುರುವಾಗುತ್ತದೆ. ಜಾಂಡಿಸ್‌ ರೋಗಪೀಡಿತ ವ್ಯಕ್ತಿ ಬಯಲಿನಲ್ಲಿ ವಿಸರ್ಜಿಸಿದ ಮಲದಿಂದ ರೋಗಾಣು ಅಂತರ್ಜಲ ಸೇರಿದರೆ ಅದನ್ನು ಕುಡಿಯುವ ಜನರಲ್ಲೂ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

‘ಈ ರೋಗ ಇದ್ದವರು ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಸೋಪಿನಿಂದ ಸರಿಯಾಗಿ ಕೈ ತೊಳೆದುಕೊಳ್ಳದೇ, ಕುಡಿಯುವ ನೀರಿನ ಪಾತ್ರೆಯನ್ನು ಮುಟ್ಟಿದರೂ ಅದರಲ್ಲೂ ರೋಗಾಣು ಸೇರಿಕೊಳ್ಳುತ್ತದೆ. ಆಹಾರ ಸೇವನೆಯ ಮೊದಲು ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಎಲ್ಲರೂ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಬೇಕು’ ಎಂದು ಶಿವರಾಜ್‌ ಸಲಹೆ ನೀಡಿದರು.

‘ಸಾಧ್ಯವಾದರೆ ಮನೆಯಲ್ಲಿ ಆರ್‌.ಒ ಫಿಲ್ಟರ್‌ ಹಾಕಿಕೊಳ್ಳಬೇಕು. ಇಲ್ಲದಿದ್ದರೆ, ಕ್ಯಾಂಡಲ್‌ ಇರುವ ಸಾಮಾನ್ಯ ಫಿಲ್ಟರ್‌ ಇಟ್ಟುಕೊಳ್ಳಬೇಕು. ಕೊನೆ ಪಕ್ಷ ನೀರನ್ನು ಕಾಯಿಸಿ ಆರಿಸಿಯಾದರೂ ಕುಡಿಯಬೇಕು. ಶುದ್ಧ ನೀರನ್ನು ಕುಡಿದರೆ ಜಲಸಂಬಂಧಿ ರೋಗಗಳು ಬರುವುದನ್ನು ಶೇ 75ರಷ್ಟು ತಡೆಯಲು ಸಾಧ್ಯ’ ಎನ್ನುತ್ತಾರೆ ಅವರು.

ನೀರಿನ ಪರೀಕ್ಷೆ: ‘ಆರೋಗ್ಯ ಇಲಾಖೆಯ ರೋಗಗಳ ಕಣ್ಗಾವಲು (ಸರ್ವೆಲನ್ಸ್‌) ಘಟಕವು ಪ್ರತಿ ತಿಂಗಳು ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸುತ್ತಿದೆ. ನೀರಿನ ಮೂಲ ಕಲುಷಿತಗೊಂಡಿರುವುದು ಪತ್ತೆಯಾದರೆ, ತಕ್ಷಣವೇ ಕ್ಲೋರಿನೇಶನ್‌ ಮಾಡಿಸುತ್ತೇವೆ. ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ತಿಂಗಳು ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ.

‘ಶುದ್ಧ ನೀರನ್ನೇ ಕುಡಿಯುವಂತೆ ಆಶಾ ಕಾರ್ಯಕರ್ತೆಯರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿ ಇದುವರೆಗೂ ಜಿಲ್ಲೆಯಲ್ಲಿ ಜಲಸಂಬಂಧಿ ಸಾಂಕ್ರಾಮಿಕ ರೋಗದಿಂದ ಜೀವ ಹಾನಿ ಸಂಭವಿಸಿಲ್ಲ’ ಎಂದು ಅವರು ಹೇಳಿದರು.

ಸೊಳ್ಳೆ ತಂದೀತು ಆಪತ್ತು...
ವಾರಕ್ಕೆ ಒಮ್ಮೆ ಕುಡಿಯುವ ನೀರು ಬಿಡುತ್ತಿರುವುದರಿಂದ ಹಲವರು ಬಿಂದಿಗೆ, ಪುಟ್ಟ ಟ್ಯಾಂಕ್‌ಗಳಲ್ಲಿ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ಆದರೆ, ಈ ಶುದ್ಧ ನೀರಿನಲ್ಲಿ ‘ಈಡಿಸ್‌ ಈಜಿಪ್ಟಾ’ ಸೊಳ್ಳೆಗಳು ಮೊಟ್ಟೆಗಳನ್ನು ಇಡುತ್ತವೆ. ಐದಾರು ದಿನಗಳ ಬಳಿಕ ಅವು ಮರಿಯಾಗುತ್ತವೆ. ಬೆಳವಣಿಗೆ ಹೊಂದಿದ ಈ ಸೊಳ್ಳೆಗಳೇ ಮನೆ ಮಂದಿಗೆ ಕಚ್ಚುವುದರಿಂದ ಡೆಂಗಿ, ಚಿಕೂನ್‌ಗುನ್ಯ ರೋಗ ಬರುತ್ತವೆ.

ಸೊಳ್ಳೆಯ ಮೊಟ್ಟೆ ಮರಿಯಾಗುವುದನ್ನು ತಪ್ಪಿಸಲು ನೀರನ್ನು ಸಂಗ್ರಹಿಸುವ ಬಿಂದಿಗೆ, ಪಾತ್ರೆ, ಬಕೆಟ್‌, ಟ್ಯಾಂಕ್‌ಗಳನ್ನು ವಾರಕ್ಕೆ ಎರಡು ಬಾರಿ ಸ್ವಚ್ಛಗೊಳಿಸಬೇಕು. ಕೊನೆ ಪಕ್ಷ ಸೊಳ್ಳೆ ಮೊಟ್ಟೆ ಇಡುವುದನ್ನು ತಪ್ಪಿಸಲು ಅವುಗಳನ್ನು ಸರಿಯಾಗಿ ಮುಚ್ಚಿಡಬೇಕು ಎಂದು ಕೆ.ವಿ. ಶಿವರಾಜು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.