ADVERTISEMENT

ಪ್ರತಿ ಗ್ರಾಮದಲ್ಲೂ ಅಭಿವೃದ್ಧಿ ಕಾರ್ಯ

ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಗಂಗಮ್ಮಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 12:12 IST
Last Updated 24 ಮಾರ್ಚ್ 2018, 12:12 IST

ಸಾತನೂರು (ಕನಕಪುರ): ಗ್ರಾಮ ಪಂಚಾಯಿತಿಯ ಪ್ರತಿಯೊಂದು ಗ್ರಾಮಗಳಲ್ಲೂ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ.ವಿಜಯದೇವು ತಿಳಿಸಿದರು.

ತಾಲ್ಲೂಕಿನ ಸಾತನೂರು ಹೋಬಳಿ ಕಾಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಗಂಗಮ್ಮ ಅವರನ್ನು ಅಭಿನಂದಿಸಿ ಮಾತನಾಡಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರು ಬರಗಾಲದ ಪರಿಸ್ಥಿತಿಯಲ್ಲೂ ಯಾವುದೇ ಹಳ್ಳಿಯಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಂಡಿದ್ದಾರೆ. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಿದ್ದಾರೆ. ನರೇಗಾ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿ, ವಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುವ ಅವಕಾಶ ನೀಡಿದ್ದಾರೆ. ಅಂತರ್ಜಲ ಹೆಚ್ಚಳಕ್ಕಾಗಿ ಎಲ್ಲ ಕಡೆ ಚೆಕ್‌ಡ್ಯಾಂ ನಿರ್ಮಾಣ ಮಾಡಿದ್ದಾರೆ ಎಂದರು.

ADVERTISEMENT

ಮುಖಂಡ ಬೂಹಳ್ಳಿ ಉಮೇಶ್‌ ಮಾತನಾಡಿ, ಗ್ರಾಮಗಳಲ್ಲಿ ಆಗಬೇಕಿದ್ದ ಬಹುತೇಕ ಕೆಲಸಗಳನ್ನು ಈಗಾಗಲೇ ಮಾಡಲಾಗಿದೆ. ಮುಂದೆ ಬೇಸಿಗೆ ಬರುತ್ತಿರುವುದರಿಂದ ಅಧ್ಯಕ್ಷರು ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಗಂಗಮ್ಮ ಮಾತನಾಡಿ, ‘ಮಹಿಳೆಯರಿಗೂ ರಾಜಕೀಯದಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂದು ಅವಕಾಶ ಕಲ್ಪಿಸಲಾಗಿದೆ. ಎಲ್ಲ ಸದಸ್ಯರು ಮತ್ತು ಮುಖಂಡರು ಹಾಗೂ ಡಿ.ಕೆ.ಶಿವಕುಮಾರ್‌ ಸಹೋದರರು ನಮ್ಮ ಮೇಲೆ ವಿಶ್ವಾಸವಿಟ್ಟು ನೀಡಿರುವ ಅಧಿಕಾರವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವೆ’ ಎಂದು
ತಿಳಿಸಿದರು.

ಅಕ್ಷರ ದಾಸೋಹ ಅಧಿಕಾರಿ ರಾಜು ಚುನಾವಣೆ ಅಧಿಕಾರಿಯಾಗಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುರೇಶ್ವರಿ ಸಹಾಯಕರಾಗಿದ್ದರು. ಪಂಚಾಯಿತಿ ಎಲ್ಲ 17 ಸದಸ್ಯರು ಹಾಗೂ ಪಂಚಾಯಿತಿ ಕಾರ್ಯದರ್ಶಿ ದಾಸಯ್ಯ, ಕರವಸೂಲಿಗಾರ ರಮೇಶ್‌, ಲೆಕ್ಕಸಹಾಯಕ ನಿರಂಜನ್‌ ಇದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕುರುಬಳ್ಳಿ ಶಂಕರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನುಕುಮಾರ್, ಮುಖಂಡರಾದ ರವೀಂದ್ರಗೌಡ, ರಾಮಣ್ಣ, ಯಧುನಂದನ, ನಾಗರಾಜು, ಪುಟ್ಟಮಾದು, ರಮೇಶ್, ನಾಗೇಶ್, ಪ್ರಕಾಶ್ ಹಾಜರಿದ್ದರು.
**
ಒಬ್ಬರಿಂದ ನಾಮಪತ್ರ

ತಾಲ್ಲೂಕಿನ ಸಾತನೂರು ಹೋಬಳಿ ಕಾಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಗಂಗಮ್ಮ ಅವಿರೋಧವಾಗಿ ಅಯ್ಕೆಯಾದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಗಂಗಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಅವರನ್ನು ಅವಿರೋಧವಾಗಿ ಆಯ್ಕೆಮಾಡಿ ಘೋಷಣೆ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.