ADVERTISEMENT

ಬಾಗಿದ ವಿದ್ಯುತ್‌ ಕಂಬ: ಅಪಾಯಕ್ಕೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 10:07 IST
Last Updated 14 ಸೆಪ್ಟೆಂಬರ್ 2017, 10:07 IST
ರಂಗರಾಯನದೊಡ್ಡಿ ಕೆರೆ ಪಕ್ಕದಲ್ಲಿರುವ ವಿದ್ಯುತ್‌ ಕಂಬ ಬಾಗಿರುವುದು
ರಂಗರಾಯನದೊಡ್ಡಿ ಕೆರೆ ಪಕ್ಕದಲ್ಲಿರುವ ವಿದ್ಯುತ್‌ ಕಂಬ ಬಾಗಿರುವುದು   

ರಾಮನಗರ: ನಗರದ ರಂಗರಾಯನದೊಡ್ಡಿ ಕೆರೆ ಪಕ್ಕದಲ್ಲಿಯೇ ಇರುವ ವಿದ್ಯುತ್‌ ಕಂಬ ಬಾಗಿದ್ದು, ಯಾವುದೇ ಕ್ಷಣದಲ್ಲಿ ನೆಲಕ್ಕೆ ಉರುಳುವ ಸಾಧ್ಯತೆ ಇದೆ. ಈಚೆಗೆ ಸುರಿದ ಮಳೆಯಿಂದಾಗಿ ನೆಲ ಸಡಿಲಗೊಂಡಿದ್ದು, ಕಂಬ ವಾಲಿದೆ. ಈಗಲೂ ಇದರಲ್ಲಿ ವಿದ್ಯುತ್‌ ಪ್ರವಹಿಸುತ್ತಿದ್ದು, ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದರು.

‘ಕೆರೆಯಂಗಳದಲ್ಲಿರುವ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆ ನಿರಂತರವಾಗಿ ನಡೆಯುತ್ತಿದ್ದು, ಈಗಲೂ ಕೆಲವರು ಗುಂಪುಗಳಲ್ಲಿ ಇಲ್ಲಿಗೆ ಗಣೇಶ ವಿಸರ್ಜನೆಗೆ ಎಂದು ಬರುತ್ತಾರೆ. ಸಮೀಪದಲ್ಲಿಯೇ ಈ ಕಂಬ ಇದ್ದು, ನೀರಿನ ಕೊರೆತವಾಗಿ ಭೂಮಿ ಇನ್ನಷ್ಟು ಸಡಿಲಗೊಂಡರೆ, ನೆಲಕ್ಕೆ ಉರುಳುವುದು ಖಚಿತ’ ಎಂದು ವಾಯುವಿಹಾರಿ ವೀರಭದ್ರಪ್ಪ ಆತಂಕ ವ್ಯಕ್ತಪಡಿಸಿದರು.

ನಿರ್ವಹಣೆ ಇಲ್ಲದ ಉದ್ಯಾನ: ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧೀನಕ್ಕೆ ಒಳಪಟ್ಟಿರುವ ಈ ಕೆರೆಯು ಸದ್ಯ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಈ ಹಿಂದೆ ಪ್ರಾಧಿಕಾರವು ಇಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಸುಂದರವಾದ ಉದ್ಯಾನ, ನಡಿಗೆಯ ಪಥ, ರಕ್ಷಣಾ ಬೇಲಿ ಮೊದಲಾದ ಸೌಕರ್ಯಗಳನ್ನು ಕಲ್ಪಿಸಿತ್ತು. ಆದರೆ ಅದನ್ನು ಸೂಕ್ತವಾಗಿ ನಿರ್ವಹಿಸದ ಕಾರಣ ಪಾಳು ಬಿದ್ದಿದೆ.

ADVERTISEMENT

‘ಸಂಜೆ ಸಮಯದಲ್ಲಿ ಹಲವು ಬಾರಿ ಇಲ್ಲಿ ವಿದ್ಯುತ್‌ ಇರುವುದಿಲ್ಲ. ಇದರಿಂದ ವಾಯುವಿಹಾರಿಗಳಿಗೆ ಹಾಗೂ ಈ ರಸ್ತೆಯ ವಿವಿಧ ಗ್ರಾಮಗಳಿಗೆ ಹೋಗುವ ಜನರಿಗೆ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಐಜೂರಿನ ನಿವಾಸಿ ಮಹದೇವಪ್ಪ.

‘ವಾಯುವಿಹಾರವನ್ನು ಮಾಡಲು ಇದು ಸೂಕ್ತವಾದ ಸ್ಥಳವಾಗಿದೆ. ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರೆತೆಯಿಂದ ರಂಗರಾಯರದೊಡ್ಡಿ ಕೆರೆ ಹಾಗೂ ಉದ್ಯಾನ ಬಲಿಯಾಗುತ್ತಿದೆ. ಕೂಡಲೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಕೆರೆಯ ಅಭಿವೃದ್ಧಿಗಾಗಿ ಶ್ರಮಿಸಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.