ADVERTISEMENT

ಬಿಬಿಎಂಪಿ ಕಸ ವಿಲೇವಾರಿ ಘಟಕಕ್ಕೆ ವಿರೋಧ

ಗೊರೂರು ಗ್ರಾಮಸ್ಥರ ಪ್ರತಿಭಟನೆ: ಸಮೀಕ್ಷೆಗೆ ಅಡ್ಡಿ, ಅಧಿಕಾರಿಗಳು ವಾಪಸ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 8:11 IST
Last Updated 21 ಅಕ್ಟೋಬರ್ 2014, 8:11 IST

ಮಾಗಡಿ: ತಾಲ್ಲೂಕಿನ ಸೋಲೂರು ಹೋಬಳಿಯ ಗೊರೂರು ಗ್ರಾಮದ ಬಳಿ ಬಿಬಿಎಂಪಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಸಮೀಕ್ಷೆ ಕಾರ್ಯಕ್ಕೆ ಮುಂದಾದ ಭೂಮಾಪನಾ ಇಲಾ­ಖೆಯ ಅಧಿಕಾರಿಗಳ ವಿರುದ್ಧ ಪ್ರತಿಭ­ಟಿಸಿದ ಗ್ರಾಮಸ್ಥರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಅಧಿಕಾರಿಗಳನ್ನು ಹಿಂದಕ್ಕೆ ಕಳಿಸಿದ ಘಟನೆ ಸೋಮವಾರ ನಡೆಯಿತು.

ಜಿ.ಪಂ. ಸದಸ್ಯ ರಂಗಸ್ವಾಮಿ ಮಾತ­ನಾಡಿ, ‘ಗ್ರಾಮೀಣ ಜನತೆಯನ್ನು ಕಸ­ಕ್ಕಿಂತ ಕಡೆಯಾಗಿ ಕಾಣುವುದನ್ನು ನಗ­ರದ ನಿವಾಸಿಗಳು ಮತ್ತು ಅಧಿಕಾರಿಗಳು ಕೈಬಿಡಬೇಕಿದೆ. ಸೋಲೂರು ಹೋಬಳಿ­ಯಲ್ಲಿ ಅನೇಕ ಶರಣ ಮಠಗಳಿವೆ. ಸೋಲೂರು ಹೋಬಳಿಯ ಗೊರೂರು ಬಳಿ ಬಿಬಿಎಂಪಿ ಕಸ ತ್ಯಾಜ್ಯ ಸುರಿಯಲು ಅನುಮತಿ ಕೊಡುವುದು ಬೇಡ. ಗೊರೂರು ಗ್ರಾಮದ ಸುತ್ತಮುತ್ತಲಿನ ಮಳೆಯ ನೀರು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹರಿದು ಬರುತ್ತಿದೆ. ಅಲ್ಲಿ ಬಿಬಿಎಂಪಿ ಕಸ ತಂದು ಸುರಿಯುವು­ದರಿಂದ ಜಲಮಾಲಿನ್ಯದ ಜೊತೆಗೆ ಜನ­ತೆಗೆ ಇನ್ನಿಲ್ಲದ ಸಾಂಕ್ರಾಮಿಕ ರೋಗಗಳು ಬರುತ್ತವೆ. ಯಾವುದೇ ಹೋರಾಟಕ್ಕೂ ಹೋಬಳಿಯ ಜನತೆ ಸಿದ್ಧವಾಗಿದ್ದೇವೆ. ಬಿಬಿಎಂಪಿ ಕಸ ಸುರಿಯುವುದು ಬೇಡ’ ಎಂದರು.

ತಾ.ಪಂ.ಸದಸ್ಯರಾದ ಶಂಕರಪ್ಪ,  ಅನುಸೂಯ ಕಾಂತರಾಜು, ಲಕ್ಕೇನ ಹಳ್ಳಿ ಗ್ರಾ.ಪಂ.  ಮಾಜಿ ಅಧ್ಯಕ್ಷ ಎನ್‌.ಗಂಗರಾಜು, ಕಂಚುಗಲ್‌ ಬಂಡೇ­ಮಠದ ಬಸವಲಿಂಗ ಸ್ವಾಮಿಜಿ ಮಾತ­ನಾಡಿ, ಬಿಬಿಎಂಪಿ ಕಸವನ್ನು ಗೊರೂರು ಬಳಿ ಸುರಿಯುವುದು ಹೋಬಳಿಯ ಜನತೆಗೆ ಮರಣ ಶಾಸನ ಬರೆದಂತೆ ಎಂದರು.

ಸೋಲೂರು, ಬಿಟ್ಟಸಂದ್ರ, ಲಕ್ಕೇನ ಹಳ್ಳಿ, ಬಾಣವಾಡಿ, ಗುಡೇಮಾರನ ಹಳ್ಳಿ., ಮೋಟಗೊಂಡನ ಹಳ್ಳಿ ಗ್ರಾ.ಪಂ.ಗಳಿಂದ ಬಂದಿದ್ದ ರೈತರು ಮತ್ತು ಮುಖಂಡರು ಭಾಗವಹಿಸಿದ್ದರು. ಸರ್ವೆ ಮಾಡಲು ಬಂದಿದ್ದ ಭೂಮಾಪನಾ ಅಧಿಕಾರಿ ಪ್ರಭಾಕರ್‌ ಮತ್ತು ಸಿಬ್ಬಂದಿ ಪ್ರತಿಭಟನೆಗೆ ಮಣಿದು ಸರ್ವೆಕಾರ್ಯ ನಡೆಸದೆ ಹಿಂತಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.