ADVERTISEMENT

ಮತ್ತೆ ಸಾರಾಯಿ ಆರಂಭಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 9:20 IST
Last Updated 30 ಮಾರ್ಚ್ 2015, 9:20 IST

ರಾಮನಗರ:  ‘ನಮಗೆ ಸಾರಾಯಿ ಮಾರಾಟ ಬೇಡ. ಇದನ್ನು ನಿಷೇಧಿಸಿದ್ದರಿಂದ ನಮ್ಮ ಸಮುದಾಯದ ಜನರು ಶಿಕ್ಷಣ ಕಲಿಯಲು ಆರಂಭಿಸಿದ್ದಾರೆ’ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಜೆ.ಪಿ.ನಾರಾಯಣಸ್ವಾಮಿ ಹೇಳಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಆರ್ಯ ಈಡಿಗ ಮಹಾಸಂಸ್ಥಾನ ಹಾಗೂ ರೇಣುಕ ಯಲ್ಲಮ್ಮ ದೇವಿ ದೇವಸ್ಥಾನ ಟ್ರಸ್ಟ್‌ ಜಂಟಿಯಾಗಿ ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆ, ಡಾ. ರಾಜ್‌ಕುಮಾರ್‌ ಕಲಾಮಂದಿರ ಸೇರಿದಂತೆ ವಿವಿಧ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಸಾರಾಯಿಯಿಂದ ಜನರಿಗೆ ಅನ್ಯಾಯ ಆಗುತ್ತದೆ ಎಂಬುದಾದರೆ ಅದನ್ನು ನಿಷೇಧಿಸುವಂತೆ ಸಮುದಾಯ 1995ರಲ್ಲಿಯೇ ಸರ್ಕಾರಕ್ಕೆ ಹೇಳಿತ್ತು. ಆಗ ಸಿದ್ದರಾಮಯ್ಯ ಅವರ ನೇತೃತ್ವದ ಸಮಿತಿಯೇ ರಾಜ್ಯದ ಪ್ರವಾಸ ಮಾಡಿತ್ತು. ಮೇಲ್ವರ್ಗದ ಜನ ಸಾರಾಯಿ ನಿಷೇಧಕ್ಕೆ ಒತ್ತಡ ತಂದಿದ್ದರು. ಆದರೆ ಸಿದ್ದರಾಮಯ್ಯ ಅವರು ಒಪ್ಪಿರಲಿಲ್ಲ.

ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಎಂದಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಅವರು, ಒತ್ತಡ ಹೇರಿದರೆ ಬಜೆಟ್‌ ಅನ್ನೇ ಮಂಡಿಸುವುದಿಲ್ಲ ಎಂದು ಹೆದರಿಸಿದ್ದರು’ ಎಂದು ಅವರು ಹೇಳಿದರು. ‘ನಂತರ ಜೆಡಿಎಸ್‌– ಬಿಜೆಪಿ ಸಮ್ಮಿಶ್ರ ಸರ್ಕಾರ ಸಾರಾಯಿ ನಿಷೇಧಿಸಿತು. ಆದರೆ ಮದ್ಯದ ಮಾರಾಟ ಮಾತ್ರ ಕಡಿಮೆಯಾಗಿಲ್ಲ. ಹೆಚ್ಚು ಬೆಲೆ ಕೊಟ್ಟು ಜನ ಮದ್ಯ ಸೇವಿಸಲು ಮುಂದಾಗುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ನೀರಾ ನಿಯಮ: ರಾಜ್ಯ ಸರ್ಕಾರವು ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ನೀರಾ ಇಳಿಸಲು ಕ್ರಮ ತೆಗೆದುಕೊಳ್ಳುವುದಾಗಿ ಬಜೆಟ್‌ನಲ್ಲಿ ಹೇಳಿದೆ. ಇದು ಕೇವಲ ತೆಂಗಿನ ಮರಕ್ಕೆ ಸೀಮಿತವೋ ಅಥವಾ ಈಚಲು ಮರಕ್ಕೂ ಅನ್ವಯಿಸುತ್ತದೆಯೋ ಎಂಬುದನ್ನು ಮುಖ್ಯಮಂತ್ರಿ ತಿಳಿಸಬೇಕು. ನೂತನ ನಿಯಮದಿಂದ ನಮ್ಮ ಸಮುದಾಯದವರಿಗೂ ಉದ್ಯೋಗ ದೊರೆಯುವಂತಾಗಬೇಕು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.