ADVERTISEMENT

ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 10:29 IST
Last Updated 3 ಸೆಪ್ಟೆಂಬರ್ 2015, 10:29 IST

ರಾಮನಗರ: ಹೊಸ ಕಾರ್ಮಿಕ ನೀತಿ, ರಸ್ತೆ ಸುರಕ್ಷತಾ ಮಸೂದೆಗೆ ವಿರೋಧ ಹಾಗೂ ವಿವಿಧ ಕಾರ್ಮಿಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಬುಧವಾರ ನಡೆಸಿದ ಮುಷ್ಕರಕ್ಕೆ ರಾಮನಗರ ಜಿಲ್ಲೆಯಲ್ಲಿಯೂ ಉತ್ತಮ ಬೆಂಬಲ ವ್ಯಕ್ತವಾಯಿತು.

ಜಿಲ್ಲೆಯ ಪ್ರಮುಖ ಕೈಗಾರಿಕಾ ಕೇಂದ್ರಗಳಾದ ಬಿಡದಿ, ಹಾರೋಹಳ್ಳಿಯಲ್ಲಿ ಹಾಗೂ ಜಿಲ್ಲಾ ಪೊಲೀಸ್‌ ಸರಹದ್ದಿನಲ್ಲಿ ಬರುವ ಕುಂಬಳಗೋಡು ಕೈಗಾರಿಕಾ ಪ್ರದೇಶದಲ್ಲಿ ಬಹುತೇಕ ಕಾರ್ಖಾನೆಗಳ ಕಾರ್ಮಿಕರು ಕೆಲಸವನ್ನು ಬಹಿಷ್ಕರಿಸಿ, ಮುಷ್ಕರದಲ್ಲಿ ಭಾಗವಹಿಸಿದರು. ಇದರಿಂದ ಕೈಗಾರಿಕಾ ಪ್ರದೇಶದ ಬಹುತೇಕ ಕಾರ್ಖಾನೆಗಳ ಬಾಗಿಲು ಮುಚ್ಚಿದವು.

ಇನ್ನು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಕಾರ್ಮಿಕರ ಸಂಘ, ಖಾಸಗಿ ಬಸ್‌ ಮಾಲೀಕರ ಒಕ್ಕೂಟವೂ ಮುಷ್ಕರಕ್ಕೆ ಬೆಂಬಲ ಕೊಟ್ಟಿದ್ದರಿಂದ ಜಿಲ್ಲೆಯ ನಾಗರಿಕರು ಪರದಾಡುವಂತಾಗಿತ್ತು. ಸರ್ಕಾರಿ ಬಸ್‌ಗಳ ಸೇವೆ ಸಂಪೂರ್ಣವಾಗಿ ಸ್ಥಗಿತವಾಗಿದ್ದ ಕಾರಣ ಬೆಂಗಳೂರು ಸೇರಿದಂತೆ ವಿವಿಧೆಡೆ ಕೆಲಸಕ್ಕೆ ಹೋಗಬೇಕಾದವರು ರೈಲುಗಳನ್ನು ಹಾಗೂ ಖಾಸಗಿ ಮ್ಯಾಕ್ಸಿಕ್ಯಾಬ್‌ಗಳನ್ನು ಅವಲಂಬಿಸಬೇಕಾಯಿತು.

ಬೇರೆ ಊರುಗಳಿಗೆ ಕೆಲಸಕ್ಕೆ ಹೋಗಬೇಕಿದ್ದ ಕೆಲ ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳ ನೌಕರರು ಮುಷ್ಕರದ ಬಿಸಿ ಅರಿತು ಕೆಲಸಕ್ಕೆ ರಜೆ ಹಾಕಿ ಮನೆಗಳಲ್ಲಿಯೇ ಉಳಿದಿದ್ದರು.

ಜಿಲ್ಲಾ ಕೇಂದ್ರದ ಸರ್ಕಾರಿ ಬಸ್ ನಿಲ್ದಾಣ ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಇಲ್ಲಿನ ಡಿಪೊಗಳಿಂದ ವಾಹನಗಳು ಚಲಿಸಲು ಮುಂದಾಗಲೇ ಇಲ್ಲ. ಆಟೊಗಳು, ಮ್ಯಾಕ್ಸಿಕ್ಯಾಬ್‌ಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಸದಾ ವಾಹನಗಳಿಂದ ಗಿಜಿಗುಡುತ್ತಿದ್ದ ಬೆಂಗಳೂರು– ಮೈಸೂರು ಹೆದ್ದಾರಿಯೂ ಮುಷ್ಕರದ ಕಾರಣ ಭಣಗುಡುತ್ತಿತ್ತು.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ತೀರ ವಿರಳವಾಗಿತ್ತು. ಮುಷ್ಕರದ ಬಿಸಿ ಅರಿತ್ತಿದ್ದ ರೈತರು ಮಾರುಕಟ್ಟೆಗೆ ಕಡಿಮೆ ಸಂಖ್ಯೆಯಲ್ಲಿ ಕೃಷಿ ಉತ್ಪನ್ನಗಳನ್ನು ತಂದಿದ್ದರು. ಆದರೆ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಿತು. ಆದರೆ ಇಲ್ಲಿಯೂ ಭಾಗವಹಿಸಿದ್ದ ರೈತರ ಸಂಖ್ಯೆ ಕಡಿಮೆಯಾಗಿತ್ತು.

ಮುಚ್ಚಿದ ಬ್ಯಾಂಕ್‌ಗಳು,- ರಜೆ ಘೋಷಿಸಿದ ಶಾಲಾ ಕಾಲೇಜುಗಳು:
ಮುಷ್ಕರಕ್ಕೆ ಬ್ಯಾಂಕ್‌ಗಳು, ವಿಮಾ ಕಂಪೆನಿಗಳು ಬೆಂಬಲ ನೀಡಿರುವ ಕಾರಣ ನಗರದ ಬಹುತೇಕ ಬ್ಯಾಂಕ್‌ಗಳು ಬಾಗಿಲು ಮುಚ್ಚಿದ್ದವು. ವಿಮಾ ಕಚೇರಿಗಳು ಸಹಾ ರಜೆ ಘೋಷಿಸಿದ್ದವು.

ಸಾರಿಗೆ ಇಲಾಖೆಯ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಶಾಲಾ–ಕಾಲೇಜಿಗೆ ಬರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗಿತ್ತು. ಇದನ್ನು ಅರಿತ ಜಿಲ್ಲಾಡಳಿತವು ಬುಧವಾರ ಬೆಳಿಗ್ಗೆಯೇ ಜಿಲ್ಲೆಯಾದ್ಯಂತ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಿತು. ಮುಷ್ಕರದ ಕಾರಣ ಜಿಲ್ಲಾ ಕೇಂದ್ರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು. ಬಸ್‌ ಡಿಪೊ, ಬಸ್‌ ನಿಲ್ದಾಣದಲ್ಲಿ ಹೆಚ್ಚು ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಇದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

ರಜೆ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದ ಕಾರಣ ಜಿಲ್ಲೆಯ ಬಹುತೇಕ ಕಾರ್ಖಾನೆಗಳೂ ಬುಧವಾರ ರಜೆ ಘೋಷಿಸಿದ್ದವು.

ಪ್ರಮುಖ ಬೇಡಿಕೆಗಳೇನು?:
ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ರಸ್ತೆ ಸುರಕ್ಷಾ ಮಸೂದೆಯನ್ನು ಕೂಡಲೆ ಹಿಂದಕ್ಕೆ ಪಡೆದುಕೊಳ್ಳಬೇಕು. ದೇಶದ ಬಡ ಜನರು, ಕೂಲಿ ಕಾರ್ಮಿಕರು, ದೀನ ದಲಿತರು ಬೆಲೆ ಏರಿಕೆಯಿಂದ ತತ್ತರಿಸಿದ್ದು ನಿತ್ಯ ಬಳಕೆ ವಸ್ತುಗಳು ಗಗನಕ್ಕೇರಿದ್ದು, ಬೆಲೆ ನಿಯಂತ್ರಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೇಂದ್ರ ಮುಂದಾಗಬೇಕು. ಹೊಸ ಕಾರ್ಮಿಕ ನೀತಿ ಜಾರಿಯಾದರೆ ಕಾರ್ಮಿಕರ ಬದುಕು ಅತಂತ್ರವಾಗುತ್ತದೆ. ಕಾರ್ಮಿಕ ವಿರೋಧಿ ಅಂಶಗಳಿರುವ, ಕಾರ್ಮಿಕರ ಹಕ್ಕು ಚ್ಯುತಿ ಮಾಡುವ ನೀತಿ, ಕಾನೂನು ಜಾರಿಗೆ ಸರ್ಕಾರ ಮುಂದಾಗಬಾರದು. ಅಲ್ಲದೆ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ನಿಲ್ಲಿಸಬೇಕು.

ಮಾಗಡಿ ವರದಿ
ರೈತ ಮತ್ತು ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಬುಧವಾರ ನಡೆದ ಮಾಗಡಿ ಬಂದ್ ಭಾಗಶಃ ಯಶಸ್ವಿಯಾಯಿತು.
ರಾಜ್ಯ ರಸ್ತೆಸಾರಿಗೆ ಬಸ್‌ಗಳನ್ನು  ಡಿಪೋದಲ್ಲಿ ನಿಲ್ಲಿಸಿ ಬಾಗಿಲಿಗೆ ಬೀಗ ಹಾಕಲಾಗಿತ್ತು. ಇಡೀ ದಿನ ಯಾವುದೇ ಸರ್ಕಾರಿ ಬಸ್ ಸಂಚರಿಸಲಿಲ್ಲ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಬಸ್‌ಗಳು ಇಲ್ಲದೆ ಬಿಕೋ ಎನ್ನುತ್ತಿತ್ತು. ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು, ಎಐಟಿಯುಸಿ, ಎಸ್ಎಫ್ಐ, ಸಿ.ಪಿ.ಐ.ಎಂ ಪಕ್ಷಗಳ ಕಾರ್ಯಕರ್ತರು ಅಧ್ಯಕ್ಷ ರಾಮಚಂದ್ರಪ್ಪ ಮತ್ತು ಕಾರ್ಯದರ್ಶಿ ವನಜ ನೇತೃತ್ವದಲ್ಲಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಕೆಂಪೇಗೌಡ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿದ ಕೆ.ಪಿ.ಆರ್.ಎಸ್ ಕಾರ್ಯಕರ್ತರು ಕಲ್ಯಾ ಬಾಗಿಲು, ಬಿ.ಕೆ.ರಸ್ತೆ ಮೂಲಕ ಮರಳಿ ಬಂದು ಕೆಂಪೇಗೌಡ ಬಯಲು ರಂಗ ಮಂದಿರದಲ್ಲಿ ಬಹಿರಂಗ ಸಭೆ ನಡೆಸಿದರು.

ಸಭೆಯಲ್ಲಿ ತಾಲ್ಲೂಕು ಕೆ.ಪಿ.ಆರ್.ಎಸ್ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಮತ್ತು ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಕಿಡಿಕಾರಿದರು.

ಕಾರ್ಯದರ್ಶಿ ವನಜ ಮಾತನಾಡಿ, ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಬೆಲೆಗಳು ಗಗನಕ್ಕೇರಿದರೂ ಸಹಿತ ಕೇಂದ್ರ ಸರ್ಕಾರ ಸಿರಿವಂತರ ಪರವಾಗಿ ವರ್ತಿಸುತ್ತಿದ್ದು, ರಾಜ್ಯ ಸರ್ಕಾರ ನಿರ್ಜೀವವಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಕನಕಪುರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ತಾಲ್ಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಶಾಸಕರಾದಿಯಾಗಿ ಯಾರೂ ಚಕಾರ ಎತ್ತುತ್ತಿಲ್ಲ. ಬಡವರಿಗೆ ಸಂವಿಧಾನದತ್ತ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಪುಡಾರಿಗಳು ಜಾತಿ, ಧರ್ಮದ ಮೊರೆ ಹೋಗಿ ಬಡವರನ್ನು ಕಡೆ ಗಣಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಮುಷ್ಕರದ ಅಂಗವಾಗಿ ಮಾಗಡಿಯಲ್ಲಿ ಅಲ್ಲೊಂದು, ಇಲ್ಲೊಂದು ಓಡುತ್ತಿದ್ದ ಆಟೋ ಚಾಲಕರು ಪ್ರಯಾಣಿಕರಿಂದ ದುಬಾರಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದರು. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ ಕಡಿಮೆಯಿತ್ತು. ಶಾಲಾ, ಕಾಲೇಜುಗಳಿಗೆ ರಜೆ  ಘೋಷಿಸಲಾಗಿತ್ತು. ಸಂಜೆಯ ನಂತರ ಖಾಸಗಿ ಬಸ್‌ಗಳು ಸಂಚಾರವನ್ನು ಆರಂಭಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.