ADVERTISEMENT

ರಸ್ತೆ ವಿಸ್ತರಣೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಮೇ 2017, 6:13 IST
Last Updated 19 ಮೇ 2017, 6:13 IST

ಸುರಪುರ: ನಗರಸಭೆ ವ್ಯಾಪ್ತಿಯ  ತಿಮ್ಮಾಪುರ-ರಂಗಂಪೇಟೆ ರಸ್ತೆ ವಿಸ್ತರಣೆ ಕೈ ಬಿಡಬೇಕು ಎಂದು ಒತ್ತಾಯಿಸಿ ತಿಮ್ಮಾಪುರ-ರಂಗಂಪೇಟೆಯ ನಾಗರಿಕ ಕಲ್ಯಾಣ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರು ಗುರುವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ರಂಗಂಪೇಟೆಯ ಮರಿಗೆಮ್ಮ ದೇವಿಯ ದೇವಸ್ಥಾನದಲ್ಲಿ ನಾಗರಿಕರು ಸಭೆ ಸೇರಿ ಚರ್ಚಿಸಿದರು. ವಿಸ್ತರಣೆ ವಿಷಯದಲ್ಲಿ ಸುರಪುರ ನಗರಕ್ಕೂ ರಂಗಂಪೇಟೆ-ತಿಮ್ಮಾಪುರಕ್ಕೂ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ದರು. ನಂತರ ನಗರಸಭೆ ವರೆಗೂ ಪಾದಯಾತ್ರೆ ಮಾಡಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ, ‘ತಿಮ್ಮಾಪುರ-ರಂಗಂಪೇಟೆ ಗಳಲ್ಲಿ ರಸ್ತೆ ವಿಸ್ತರಣೆ ತೀರ್ಮಾನ ಅವೈಜ್ಞಾನಿಕವಾಗಿದೆ. ಸುರಪುರದಲ್ಲಿ 32 ಅಡಿ ರಸ್ತೆ ವಿಸ್ತರಿಸಲಾಗಿದೆ. ಆದರೆ ತಿಮ್ಮಾಪುರ- ರಂಗಂಪೇಟೆಯಲ್ಲಿ 42 ಅಡಿ ವಿಸ್ತರಣೆ ಮತ್ತು 3 ಅಡಿ ಪಾದಚಾರಿ ಮಾರ್ಗ ಸೂಚಿಸಿರುವುದು ಸರಿಯಲ್ಲ. ಇದರ ಹಿಂದೆ ರಾಜಕೀಯ ಪಿತೂರಿ ನಡೆದಿದೆ’ ಎಂದು ದೂರಿದರು.

ADVERTISEMENT

‘ವಿಸ್ತರಣೆಯಿಂದ ಅನೇಕ ಬಡ ಕುಟುಂಬಗಳು ಬೀದಿಗೆ ಬಿದ್ದು ಕಷ್ಟ ಅನುಭವಿಸಬೇಕಾಗುತ್ತದೆ. ಕೆಲವರಿಗೆ ಒಂದು ಇಂಚೂ ಸ್ಥಳ ಉಳಿಯುವುದಿಲ್ಲ. ಜನರಿಗೆ ಅನಗತ್ಯ ತೊಂದರೆ ಕೊಟ್ಟು ವಿಸ್ತರಣೆ ಮಾಡುವುದರಲ್ಲಿ ಅರ್ಥವಿಲ್ಲ. ರಸ್ತೆ ವಿಸ್ತರಣೆಯ ಅಗತ್ಯವಿಲ್ಲ’ ಎಂದರು.

‘ಬರ ಸಮಸ್ಯೆ ಗಂಭೀರವಾಗಿದೆ. ಅತಿಯಾದ ತಾಪಮಾನವಿದೆ. ರಸ್ತೆ ವಿಸ್ತರಣೆ ಮಾಡಿದ್ದಲ್ಲಿ, ಮನೆ, ಕಟ್ಟಡ ಗಳನ್ನು ಕಳೆದುಕೊಂಡುವರು ಎಲ್ಲಿಗೆ ಹೋಗಬೇಕು, ಹೇಗೆ ಬದುಕಬೇಕು? ಕೈಯಲ್ಲಿ ದುಡ್ಡಿಲ್ಲ, ಬ್ಯಾಂಕ್‌ಳಲ್ಲಿ ಕೇಳಿದಷ್ಟು ದುಡ್ಡು ಕೊಡುತ್ತಿಲ್ಲ’ ಎಂದು ತಿಳಿಸಿದರು.

‘ಮನೆ, ಕಟ್ಟಡ ಕಟ್ಟಿಸಲು ಮರಳು ಸಿಗುವುದಿಲ್ಲ. ನೀರಿನ ಸಮಸ್ಯೆ ಗಂಭೀರ ವಾಗಿದೆ. ಶೀಘ್ರ ಮಳೆಗಾಲ ಆರಂಭ ವಾಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಿಸ್ತರಣೆ  ಕೈ ಬಿಡುವುದು ನಾಗರಿಕರ ಹಿತದೃಷ್ಟಿಯಿಂದ ಒಳ್ಳೆಯದು’ ಎಂದು ತಿಳಿಸಿದರು.

‘ಜಿಲ್ಲಾಡಳಿತವು ತಿಮ್ಮಾಪುರ-ರಂಗಂಪೇಟೆ ನಾಗರಿಕ ಕಲ್ಯಾಣ ಸಮಿತಿ ಯೊಂದಿಗೆ  ಸಭೆ ನಡೆಸಬೇಕು. 24 ಅಡಿ ಮಾತ್ರ ರಸ್ತೆ ವಿಸ್ತರಿಸಬೇಕು. ಈ ಪ್ರಕ್ರಿಯೆ ಇನ್ನೂ ಕೆಲ ತಿಂಗಳು ಮುಂದೂಡಬೇಕು. ಇಲ್ಲವಾದಲ್ಲಿ ಮೇ 26 ರಿಂದ ಧರಣಿ ಹಮ್ಮಿಕೊಳ್ಳುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.

ಮುಖಂಡರಾದ ನಿಂಗಣ್ಣ ರಾಯಚೂರಕರ್, ಶರಣಪ್ಪ ಕಲಕೇರಿ, ವಿಶ್ವನಾಥ ಅಂಬುರೆ, ರಾಜು ಪುಲ್ಸೆ, ಪ್ರಕಾಶ ಅಲ್ಬನೂರು, ಬಸವರಾಜ ಶಾಬಾದಿ, ಚನ್ನಪ್ಪ ಎಲಿಗಾರ, ಪ್ರಸನ್ನ ಹೆಡಗಿನಾಳ, ಮಾನಪ್ಪ ನಾಲವಾರ, ವೆಂಕಣ್ಣ ಗದ್ವಾಲ್, ಮಹೇಶ ಚಿನ್ನಾ ಕಾರ್, ಮಲ್ಲಿಕಾರ್ಜುನ ಮಹೇಂದ್ರಕರ್, ಸತೀಶ ಬಾಸುತ್ಕರ್, ನಾಗೇಶ ಅಂಬುರೆ, ಪ್ರಾಣೇಶ ಪೋಲಂಪಲ್ಲಿ, ಮೊಹ್ಮದ್ ಹುಸೇನ್, ಸೋಫಿ ಬಿಸ್ತಿ, ಮಹಿಬೂಬ, ಆಬೀದಾ ಬೇಗಂ, ಮುಜ್ಮಿಲ್, ಶಹಬಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.