ADVERTISEMENT

‘ರಾಜ್ಯದಲ್ಲಿ ಬಿಜೆಪಿ ಆಟ ನಡೆಯದು’

ಕಾಂಗ್ರೆಸ್‌ ಅಭ್ಯರ್ಥಿ ಬಾಲಕೃಷ್ಣ ರೋಡ್‌ ಷೋ– ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸುವ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 6 ಮೇ 2018, 13:00 IST
Last Updated 6 ಮೇ 2018, 13:00 IST

ಮತ್ತಿಕೆರೆ(ಮಾಗಡಿ): ರಾಜ್ಯದಲ್ಲಿ ಬಿಜೆಪಿ ಪಕ್ಷದವರ ಆಟ ನಡೆಯುವುದಿಲ್ಲ. ಚುನಾವಣೆಯಲ್ಲಿ 60ರಿಂದ 70 ಸ್ಥಾನ ಗಳಿಸಿದರೆ ಹೆಚ್ಚು. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು.

ಚಿಟ್ಟನಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ರೋಡ್‌ ಷೋ ನಡೆಸಿ ಅವರು ಮಾತನಾಡಿದರು. 2019 ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಕಾಟಾಚಾರಕ್ಕೆ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕ ಸರ್ವಜನಾಂಗಗಳ ಶಾಂತಿಯ ತೋಟ, ಸರ್ಕಾರ ರಚಿಸುವ ಆತ್ಮವಿಶ್ವಾಸ ಬಿಜೆಪಿ ಕಳೆದುಕೊಂಡಿದೆ ಎಂದರು.

ಜೆಡಿಎಸ್‌ ಪಕ್ಷದವರು ಸ್ಟಾರ್‌ಗಳ ಮೂಲಕ ಮತಸೆಳೆಯಲು ಯತ್ನಿಸಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರೆಲ್ಲರೂ ಸ್ಟಾರ್‌ಗಳೇ ಆಗಿರುವಾಗ, ಮೂರು ದಿನ ಬಣ್ಣ ಹಚ್ಚಿದ ನಟರ ಆಟ ಇಲ್ಲಿ ನಡೆಯುವುದಿಲ್ಲ. ತಾಲ್ಲೂಕಿನಲ್ಲಿ ವಾತಾವರಣ ನನ್ನ ಪರವಾಗಿದೆ’ ಎಂದರು.

ADVERTISEMENT

‘ಇನ್ನೂ ಮೂರು ದಿನಗಳಲ್ಲಿ 15ರಿಂದ 20 ಜನ ಮುಖಂಡರು ಜೆಡಿಎಸ್‌ ಪಕ್ಷ ತ್ಯಜಿಸಿ ನಮ್ಮ ಪಕ್ಷ ಸೇರಲಿದ್ದಾರೆ’ ಎಂದು ತಿಳಿಸಿದರು. ‘ನಾನು ನಿಮ್ಮ ಮನೆಯ ಮಗ, ನೀವು ಬೈಯ್ದರೆ ಬೈಯಿಸಿಕೊಳ್ಳುತ್ತೇನೆ. ಬೇರೆ ಎಲ್ಲಿಂದಲೋ ಬಂದವರಿಗೆ ಏನಾದರೂ ಮತ ನೀಡಿದರೆ. ನಿಮ್ಮ ಕಾಲಮೇಲೆ ನೀವೇ ಕಲ್ಲು ಎತ್ತಿಹಾಕಿಕೊಂಡಂತೆ ಎಂಬುದನ್ನು ಮರೆಯಬಾರದು’ ಎಂದು ಮನವಿ ಮಾಡಿದರು.

ಮತ್ತಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೆಳ್ಳಿಯಪ್ಪ ಮಾತನಾಡಿ, ‘ಈ ಸಲ ಚುನಾವಣೆಯಲ್ಲಿ ಎಚ್‌.ಸಿ.ಬಾಲಕೃಷ್ಣ ಗೆಲುವು ಖಚಿತವಾಗಿದೆ. ಮೇ 15ರಂದು ಅವರ ಶಕ್ತಿ ಏನು ಎಂಬುದು ನಾಡಿಗೆಲ್ಲ ಅಚ್ಚರಿ ಮೂಡಿಸಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ನಾಗರತ್ನ ಚಂದ್ರೇಗೌಡ ಮಾತನಾಡಿ, ‘20 ವರ್ಷಗಳಿಂದ ತಾಲ್ಲೂಕಿನ ಪ್ರತಿಯೊಂದು ಹಳ್ಳಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಮಾಡಿಸಿರುವ ಎಚ್‌.ಸಿ.ಬಾಲಕೃಷ್ಣ ಅವರಿಗೆ ಹೆಚ್ಚಿನ ಮತನೀಡಿ ಆಯ್ಕೆ ಮಾಡಿ ತಾಲ್ಲೂಕಿನ ಅಭಿವೃದ್ದಿಗೆ ಎಲ್ಲರೂ ಸಹಕಾರ ನೀಡಬೇಕು’ ಎಂದರು.

‘ತಾಲ್ಲೂಕಿನಲ್ಲಿ ಇರುವ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಪ್ರಗತಿಗೆ ದುಡಿಯುತ್ತಿರುವ ಬಾಲಕೃಷ್ಣ ಅವರಿಗೆ ಅಹಿಂದ ವರ್ಗಗಳವರು ಹೆಚ್ಚಿನ ಮತನೀಡಿ ಬಹುಮತದಿಂದ ಆಯ್ಕೆ ಮಾಡಬೇಕು’ ಎಂದು ತಾಲ್ಲೂಕು ಯಾದವ ಸಮಾಜದ ಮುಖಂಡ ಪ್ರಶಾಂತ ಯಾದವ್‌ ಮನವಿ ಮಾಡಿದರು.

ಎಪಿಎಂಸಿ ನಿರ್ದೇಶಕ ಚಕ್ರಬಾವಿ ಮಾರೇಗೌಡ, ಕಾಂಗ್ರೆಸ್‌ ಮುಖಂಡರಾದ ಕಲ್ಪನಾ ಶಿವಣ್ಣ, ಸಿ.ಜಯರಾಮು, ಗೆಜಗಾರು ಗುಪ್ಪೆ ಕುಮಾರ್‌, ಕೆಂಪರಾಜು, ಶಿವಣ್ಣ ಗೌಡ, ಬಿ.ಟಿ. ವೆಂಕಟೇಶ್‌, ಡಿ.ಸಿ. ಶಿವಣ್ಣ, ಸಿಗೇಕುಪ್ಪೆ ಶಿವಣ್ಣ, ಕಾಂತರಾಜು, ಕೊಟ್ಟಗಾರಹಳ್ಳಿ ಉಮೇಶ್‌, ಎಚ್‌.ಶಿವಕುಮಾರ್‌, ಗಂಗಹನುಮಯ್ಯ, ಹೊಸಹಳ್ಳಿ ಹನುಮಂತಯ್ಯ ಉಪಸ್ಥಿತರಿದ್ದರು.

ತೋಟದ ಮನೆ ಗಿರೀಶ್‌, ಅಪ್ಪಾಜಿ, ಕಾರ್ತಿಕ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಮ ರಮೇಶ್‌, ಬೆಳಗವಾಗಿ ರಂಗನಾಥ್‌, ಪೂಜಾರಿ ಪಾಳ್ಯದ ನರಸಿಂಹಮೂರ್ತಿ, ಮತ್ತಿಕೆರೆ ಸೀಬೇಗೌಡ, ಹೊಸಪೇಟೆ ಸಿದ್ದೇಗೌಡ ಇತರರು ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಮತಯಾಚಿಸಿದರು.

ಗೆಜ್ಜಗಾರು ಗುಪ್ಪೆ ದಲಿತ ಕಾಲೊನಿಯಲ್ಲಿ ಮಹಿಳೆಯರು ಎಚ್‌.ಸಿ.ಬಾಲಕೃಷ್ಣ ಅವರನ್ನು ಪ್ರತಿಯೊಂದು ಮನೆಗೂ ಕರದೊಯ್ದು ಆರತಿ ಬೆಳಗಿ ಅಭಿನಂದಿಸಿದರು.

ಕೊಟ್ಟಾಗಾರಹಳ್ಳಿ, ಚಿಟ್ಟನಹಳ್ಳಿ, ಸೀಗೇಕುಪ್ಪೆ, ಗೆಜಗಾರುಗುಪ್ಪೆ, ನೇಳರವಾಡಿ ಗ್ರಾಮಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರೋಡ್‌ ಷೋ ನಡೆಸಿ ಮತ ಕೇಳಿದರು. ಪ್ರತಿಯೊಂದು ಗ್ರಾಮದ ಬಳಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿದ ಜನತೆ ಅಭ್ಯರ್ಥಿ ಪರವಾಗಿ ಘೋಷಣೆ ಕೂಗಿದರು. ಮಾವಿನ ತೋರಣ, ಬಾಳೆಕಂಬ ಕಟ್ಟಿ ಸ್ವಾಗತಿಸಿದರು.

16ರಿಂದ ಕಾಂಗ್ರೆಸ್‌ ಅಧಿಕಾರ

ರಾಜ್ಯ ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮು ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಅಧಿಕಾರ ಮೇ 16ರಂದು ಆರಂಭವಾಗಲಿದೆ’ ಎಂದರು. ‘ಡಾ.ಜಿ.ಪರಮೇಶ್ವರ್‌ ಮುಖ್ಯಮಂತ್ರಿ ಆಗಬೇಕಾದರೆ ಮಾಗಡಿಯಿಂದ ಎಚ್‌.ಸಿ.ಬಾಲಕೃಷ್ಣ ಅವರನ್ನು ಭಾರಿ ಬಹುಮತದಿಂದ ಅಯ್ಕೆ ಮಾಡಲೇಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.