ADVERTISEMENT

ರಾಮನಗರ: ಗಣೇಶ ಮೂರ್ತಿಗಳ ಖರೀದಿ ಭರಾಟೆ

ಪಿಒಪಿ ಬಳಕೆಗಿಲ್ಲ ಕಡಿವಾಣ: ಮಣ್ಣಿನ ವಿಘ್ನೇಶ ಮೂರ್ತಿಗಳು ತುಂಬಾ ಅಪರೂಪ

ಆರ್.ಜಿತೇಂದ್ರ
Published 29 ಆಗಸ್ಟ್ 2016, 11:57 IST
Last Updated 29 ಆಗಸ್ಟ್ 2016, 11:57 IST

ರಾಮನಗರ:  ಗಣೇಶ ಚತುರ್ಥಿಗೆ ಇನ್ನೊಂದು ವಾರ ಬಾಕಿ ಇರುವಂತೆಯೇ ವಿಘ್ನೇಶನ ಮೂರ್ತಿಗಳ ಮಾರಾಟ ಪ್ರಕ್ರಿಯೆಯು ಚುರುಕು ಪಡೆದುಕೊಂಡಿದೆ. ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಮೂರ್ತಿಗಳ ಮಾರಾಟಕ್ಕೆ ಸರ್ಕಾರದ ನಿಷೇಧ ಹೇರಿದ್ದರೂ ಅವುಗಳ ಮಾರಾಟ ಸಹ ಅಡೆತಡೆಯಿಲ್ಲದೆ ನಡೆದಿದೆ.

ಮಾರುಕಟ್ಟೆಯಲ್ಲಿ ಈಗಾಗಲೇ ಮೂರ್ತಿಗಳ ಮಾರಾಟಗಾರರು ಅಂಗಡಿ ತೆರೆದು ಕುಳಿತಿದ್ದಾರೆ. ಗಣಪತಿಯ ಬಗೆಬಗೆ ಪ್ರತಿರೂಪಗಳು ಮಾರಾಟಕ್ಕೆ ಲಭ್ಯವಿವೆ. ಆಸಕ್ತಿ, ಅಭಿರುಚಿ ಜೊತೆಗೆ ಕಾಸಿಗೆ ತಕ್ಕಂತೆ ನಾನಾ ರೀತಿಯ ಮೂರ್ತಿಗಳು ಲಭ್ಯ. ₹ 50 ರಿಂದ ಹಿಡಿದು 16 ಸಾವಿರದವರೆಗೆ ಇವುಗಳ ಬೆಲೆ ಇದೆ. ಬೆಂಗಳೂರಿನಿಂದ ಲೋಡುಗಟ್ಟಲೆ ಮೂರ್ತಿಗಳನ್ನು ವ್ಯಾಪಾರಿಗಳು ತರಿಸಿದ್ದಾರೆ.

ಕಳೆದೊಂದು ವಾರದಿಂದಲೇ ಇಲ್ಲಿ ಮುಂಗಡ ಕಾಯ್ದಿರಿಸುವಿಕೆ ಆರಂಭಗೊಂಡಿದೆ. ರಾಮನಗರದ ಜೊತೆಗೆ ಸುತ್ತಲಿನ ಹಳ್ಳಿ, ತಾಲ್ಲೂಕುಗಳ ಜನರು ಗುಂಪಾಗಿ ಬಂದು ತಮ್ಮ ನೆಚ್ಚಿನ ಮೂರ್ತಿಗಳನ್ನು ಕಾಯ್ದಿರಿಸಿ, ಮಾರಾಟಗಾರರಿಗೆ ಮುಂಗಡ ಹಣ ನೀಡುದ್ದಾರೆ. ಅದರಲ್ಲೂ ಹುಡುಗರ ಗುಂಪೇ ಹೆಚ್ಚಾಗಿ ಕಾಣುತ್ತಿದೆ.

ಪಿಒಪಿಯೇ ಹೆಚ್ಚು:  ಈಗ ಮಾರುಕಟ್ಟೆಗೆ ಬಂದಿರುವ ಮೂರ್ತಿಗಳ ಪೈಕಿ ಬಹುತೇಕವು ಪ್ಲಾಸ್ಟರ್ ಆಫ್‌ ಪ್ಯಾರಿಸ್‌ನಿಂದ ಮಾಡಿದಂತಹವುಗಳಾಗಿವೆ. ನೀರಿನಲ್ಲಿ ಸುಲಭವಾಗಿ ಕರಗದ ಈ ಉತ್ಪನ್ನದ ಜೊತೆಗೆ ಗಾಢ ಬಣ್ಣದ ನಿಷೇಧಿತ ರಾಸಾಯನಿಕಗಳನ್ನೂ ಇವುಗಳಿಗೆ ಬಳಸಿಕೊಳ್ಳಲಾಗಿದೆ. ರಾಜ್ಯ ಸರ್ಕಾರವು ಈ ವರ್ಷದಿಂದ ಪಿಒಪಿ ಮೂರ್ತಿಗಳ ಸಾಗಣೆ ಮತ್ತು ಮಾರಾಟಕ್ಕೆ ನಿಷೇಧ ಹೇರಿದೆ.  ಆದರೆ ಬಹುತೇಕರ ಸಾರ್ವಜನಿಕರಿಗೆ ಇದರ ಅರಿವು ಇಲ್ಲ.

ಎಂ.ಜಿ. ರಸ್ತೆಯಲ್ಲಿನ ಮಾರಾಟ ಮಳಿಗೆಗೆ ಭಾನುವಾರ ‘ಪ್ರಜಾವಾಣಿ’ ಭೇಟಿ ಕೊಟ್ಟ ವೇಳೆ ಮೂರ್ತಿ ಕೊಳ್ಳಲು ಬಂದವರ ಸಾಲು ಕಂಡಬಂತು. ಆದರೆ ಅವರನ್ನು ಮಾತನಾಡಿಸಿದಾಗ, ಬಹುತೇಕರಿಗೆ ಪಿಒಪಿ ನಿಷೇಧದ ಅರಿವು ಇರಲಿಲ್ಲ. ಕೆಲವರು ನಕ್ಕು ಹಾಗೆಯೇ ಮುಂದುವರಿದರು. 

ವ್ಯಾಪಾರಿಗಳ ವಾದ: ‘ಸರ್ಕಾರವೇನೋ ಈಗ ನಿಷೇಧ ಹೇರಿದೆ. ಆದರೆ ಈ ಮೂರ್ತಿಗಳನ್ನು ಆರೇಳು ತಿಂಗಳ ಹಿಂದೆಯೇ ತಯಾರಿಸಿ ಇಟ್ಟುಕೊಂಡಿದ್ದೇವೆ. ಈಗ ಏಕಾಏಕಿ ಮಾರಾಟ ಮಾಡಬೇಡಿ ಅಂದರೆ ನಮಗಾಗುವ ನಷ್ಟ ಕಟ್ಟಿಕೊಡುವವರು ಯಾರು?’ ಎನ್ನುವುದು ಬಹುತೇಕ ವ್ಯಾಪಾರಿಗಳ ಪ್ರಶ್ನೆಯಾಗಿದೆ.

‘ಸಣ್ಣ ಮೂರ್ತಿಗಳನ್ನು ಮಣ್ಣಿನಿಂದ ಮಾಡಬಹುದು. ಆದರೆ ದೊಡ್ಡ ದೊಡ್ಡ ಮೂರ್ತಿಗಳನ್ನು ಮಣ್ಣಿನಿಂದ ಮಾಡಿದರೆ ಅದು ನಿಲ್ಲುವುದಿಲ್ಲ. ಹೀಗಾಗಿ ಪಿಒಪಿ ಬಳಸಲೇ ಬೇಕಾಗುತ್ತದೆ. ಗಣೇಶನನ್ನು ಕೂರಿಸುವುದು ಈಗ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ ಹುಡುಗರು, ಹಿರಿಯರೂ ಆದಷ್ಟೂ ದೊಡ್ಡ ಮೂರ್ತಿಗಳನ್ನೇ ಬಯಸುತ್ತಾರೆ. ಹೀಗಾಗಿ ಪಿಒಪಿ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಕಷ್ಟ’ ಎಂದು ಎಂ.ಜಿ. ರಸ್ತೆಯಲ್ಲಿ ಮೂರ್ತಿ ಮಾರುತ್ತಿದ್ದ ವ್ಯಾಪಾರಿಯೊಬ್ಬರು ಅಭಿಪ್ರಾಯಪಟ್ಟರು.

‘ಪಿಒಪಿ ಮೂರ್ತಿಗಳ ನಿಷೇಧಕ್ಕೆ ಕಾಲಾವಕಾಶ ನೀಡಬೇಕು. ಸಾಕಷ್ಟು ಮುಂಚೆಯೇ ತಿಳಿಹೇಳಬೇಕು. ಆಗ ಕೊಂಚ ಬದಲಾವಣೆ ಮಾಡಿ ಕೊಳ್ಳಬಹುದು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.